ಚುನಾವಣೆ ವೇಳೆ ಪಕ್ಷಗಳ ಮಧ್ಯೆ ಫೈಪೋಟಿ ಸಹಜ. ನಂತರ ವಿಪಕ್ಷಗಳೂ ಸೇರಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಏನೇ ಅಭಿವೃದ್ಧಿ ಕೆಲಸಗಳಿದ್ದರೂ ಹೇಳಿ ಮಾಡೋಣ. ನಮ್ಮ ಮನೆ-ಕಚೇರಿ- ಮನದ ಬಾಗಿಲು ಎಲ್ಲರಿಗೂ ಸದಾ, ದಿನದ 24 ಗಂಟೆಯೂ ತೆರೆದಿರುತ್ತದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ ಎಂ. ಶಾಮನೂರು ಹೇಳಿದ್ದಾರೆ.

- ದಕ್ಷಿಣ ಕ್ಷೇತ್ರದ ಬಡವರಿಗೆ ಬಾಡಿಗೆ ಮನೆಯಿಂದ ಮುಕ್ತಿ ಕೊಡಿಸಲು ಪ್ರಾಮಾಣಿಕ ಯತ್ನ - - -

- ನಮ್ಮ ಮನೆ, ಕಚೇರಿ, ಮನದ ಬಾಗಿಲು ದಿನದ 24 ಗಂಟೆಯೂ ಜನರಿಗಾಗಿ ತೆರೆದಿರುತ್ತೆ

- ಜನರ ಜೊತೆ ಬೆರೆಯುತ್ತಿದ್ದ ತಾತ ಶಾಮನೂರು ದಾರೀಲೇ ಸಾಗುವೆ-ನೂತನ ಶಾಸಕ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚುನಾವಣೆ ವೇಳೆ ಪಕ್ಷಗಳ ಮಧ್ಯೆ ಫೈಪೋಟಿ ಸಹಜ. ನಂತರ ವಿಪಕ್ಷಗಳೂ ಸೇರಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಏನೇ ಅಭಿವೃದ್ಧಿ ಕೆಲಸಗಳಿದ್ದರೂ ಹೇಳಿ ಮಾಡೋಣ. ನಮ್ಮ ಮನೆ-ಕಚೇರಿ- ಮನದ ಬಾಗಿಲು ಎಲ್ಲರಿಗೂ ಸದಾ, ದಿನದ 24 ಗಂಟೆಯೂ ತೆರೆದಿರುತ್ತದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ ಎಂ. ಶಾಮನೂರು ಹೇಳಿದ್ದಾರೆ.

ನಗರದಲ್ಲಿ ಬುಧವಾರ ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರದ ಮತದಾರರು, ಪಕ್ಷದ ಮುಖಂಡರು, ಕಾರ್ಯಕರ್ತರು, ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ವಸತಿ ಸಮಸ್ಯೆ ಇದೆ. ಬಾಡಿಗೆ ಮನೆಯಿಂದ ಮುಕ್ತಿ ಸಿಗಬೇಕೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದಷ್ಟು ಬೇಗನೆ ಸರ್ಕಾರದಿಂದ ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆಯಡಿ ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.

ಆಶ್ರಯ ಸೇರಿದಂತೆ ಸರ್ಕಾರದ ವಿವಿಧ ವಸತಿ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ, ಜನರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುವೆ. ಯಾವುದೇ ಕ್ಷೇತ್ರ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ, ಪಿಯು, ಪದವಿ ಕಾಲೇಜುಗಳನ್ನು ತರಲು, ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು, ಹೊಸ ಆಸ್ಪತ್ರೆ ನಿರ್ಮಿಸುವ ಬಗ್ಗೆಯೂ ಜಿಲ್ಲಾ ಸಚಿವರಾದ ತಮ್ಮ ತಂದೆ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದರಾದ ತಮ್ಮ ತಾಯಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಬಳಿ ಚರ್ಚೆ ನಡೆಸುವೆ ಎಂದು ತಿಳಿಸಿದರು.

ಕ್ಷೇತ್ರದ ಜನರಿಗೆ ಅನುಕೂಲ ಆಗುವಂತೆ ಕ್ಷೇತ್ರದಲ್ಲಿ ಜನ ಸಂಪರ್ಕ ಕಚೇರಿ ಸ್ಥಾಪಿಸುವ ಆಲೋಚನೆ ಇದೆ. ಜನ ಸಾಮಾನ್ಯರ ಆಶೋತ್ತರಕ್ಕೆ ಸ್ಪಂದಿಸಿ, ಕೆಲಸ ಮಾಡುವುದಕ್ಕೆ ತಾವು ಬದ್ಧರಿದ್ದು, ಎಲ್ಲರನ್ನೂ ಜೊತೆ ಜೊತೆಗೆ ಕೊಂಡೊಯ್ಯುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಗುರಿ ಇದೆ. ತಮ್ಮ ತಾತ ದಿವಂಗತ ಶಾಮನೂರು ಶಿವಶಂಕರಪ್ಪನವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ವಿಧಾನಸೌಧದಲ್ಲಿ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಬಗ್ಗೆ ತಾತ ಹೊಂದಿದ್ದ ಕಾಳಜಿ, ಅಭಿಮಾನವನ್ನು ನಾನೂ ಹೊಂದಿದ್ದು, ಮಾದರಿ ಕ್ಷೇತ್ರ ಮಾಡುವತ್ತ ಗಮನ ಹರಿಸುತ್ತೇನೆ ಎಂದು ಹೇಳಿದರು.

ಅಜ್ಜನವರ ರೀತಿಯೇ ನಾನೂ ಸದಾ ಜನರೊಂದಿಗೆ ಬೆರೆಯುವಂತಹವನು. ಇಲ್ಲಿನ ಮಟ್ಟಿಕಲ್ಲು ಪ್ರದೇಶದ 150 ಮನೆಗಳ ಸಮಸ್ಯೆ ಇರುವ ವಿಚಾರ ನನಗೂ ಗೊತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೇಳಿದಂತೆ ರೋಟಿ, ಕಪಡಾ ಔರ್ ಮಕಾನ್ ಪೈಕಿ ಈಗ ಮೊದಲಿನ ಎರಡೂ ಇವೆ. ಈಗ ಎಲ್ಲರಿಗೂ ಬೇಕಾಗಿರುವುದು ಮಕಾನ್. ಅಂತಹ ಮಕಾನ್‌ (ಮನೆ)ಗಳನ್ನು ಜನರಿಗೆ ಕಲ್ಪಿಸುವಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ಇದ್ದೇ ಇರುತ್ತದೆ. ಕ್ಷೇತ್ರದ ಯಾವುದೇ ಸಮಸ್ಯೆಗಳಿದ್ದರೆ ನಮ್ಮನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಜನತೆಗೆ ಮನವಿ ಮಾಡಿದರು.

ಈಗಲೇ ಸಚಿವ ಸ್ಥಾನದಂತಹ ವಿಚಾರಗಳನ್ನು ನನಗೆ ಕೇಳಬೇಡಿ. ಅಂತಹ ಜವಾಬ್ದಾರಿಯೂ ನನಗೆ ಈಗಲೇ ಬೇಡ. ನನಗಿಂತಲೂ ಹಿರಿಯರು ಅನೇಕರಿದ್ದಾರೆ. ಅಲ್ಲದೇ, ಅದೆಲ್ಲಾ ನಮ್ಮ ಹಿರಿಯರ ನಿರ್ಧಾರವಾಗಿರುತ್ತದೆ. ಹಿರಿಯರೇ ಅದನ್ನೆಲ್ಲಾ ನೋಡಿಕೊಳ್ಳುತ್ತಾರೆ. ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ, ಜನರ ಆಶೋತ್ತರಕ್ಕೆ ಸ್ಪಂದಿಸುವುದಷ್ಟೇ ಮುಖ್ಯ. ಯಾವುದೇ ಕ್ಷೇತ್ರದ ಅಭಿವೃದ್ಧಿ ಆಗಲು ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆ ಮುಖ್ಯ. ಆ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ನೂತನ ಶಾಸಕ ಸಮರ್ಥ ಶಾಮನೂರು ಸ್ಪಷ್ಟಪಡಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್, ಅನಿತಾ ಬಾಯಿ ಮಾಲತೇಶ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ, ಮಂಜುಳಮ್ಮ, ಎ.ನಾಗರಾಜ್, ಹದಡಿ ಜಿ.ಸಿ.ನಿಂಗಪ್ಪ, ವರುಣ್ ಬೆಣ್ಣೆಹಳ್ಳಿ, ಯುವರಾಜ ಇತರರು ಇದ್ದರು.

- - -

(ಬಾಕ್ಸ್‌) * ಎಲ್ಲರ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡುವೆ

ದಕ್ಷಿಣ ಕ್ಷೇತ್ರದ ಚುನಾವಣೆ ವೇಳೆ ನನ್ನ ಗೆಲುವಿಗಾಗಿ ಸಿಎಂ, ಡಿಸಿಎಂ, ಸಚಿವರು, ಕಾಂಗ್ರೆಸ್ ನಾಯಕರು, ವಿವಿಧ ಪಕ್ಷ, ಸಂಘಟನೆಗಳು, ಸಮುದಾಯಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಹೀಗೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಆ ಎಲ್ಲರ ಆಶೋತ್ತರಕ್ಕೆ ತಕ್ಕಂತೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಶಾಸಕ ಸಮರ್ಥ ಶಾಮನೂರು ಹೇಳಿದರು.

ಸರ್ಕಾರದಿಂದ ಜನರಿಗೆ ಸೌಲಭ್ಯ ಕಲ್ಪಿಸಲು, ಕ್ಷೇತ್ರದ ಅಭಿವೃದ್ಧಿಗೆ ತಮ್ಮ ತಂದೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ತಾಯಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ಎಲ್ಲರ ಸಹಕಾರದಲ್ಲಿ ಮಾದರಿ ಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ. ಆಶ್ರಯ ಸೇರಿದಂತೆ ಸೂರು ಕಲ್ಪಿಸುವ ಯೋಜನೆಗೆ ಒತ್ತು ನೀಡಲಾಗುವುದು. ಬಾಡಿಗೆ ಮನೆಯಲ್ಲಿರುವವರು, ಸ್ವಂತ ನಿವೇಶನ ಇಲ್ಲದವರಿಗೆ ಸ್ಲಂ ಬೋರ್ಡ್, ಆಶ್ರಯದಡಿ ಮನೆ, ನಿವೇಶನ ಒದಗಿಸುವುದಕ್ಕೆ ಮೊದಲ ಆದ್ಯತೆ. ಹಕ್ಕುಪತ್ರ ವಿತರಣೆ, ಜಾಗದ ಹಂಚಿಕೆ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸುವೆ. ದಾವಣಗೆರೆ ಹೆಗ್ಡೆ ನಗರದ 436 ಕುಟುಂಬಕ್ಕೆ ಹಕ್ಕುಪತ್ರ ನೀಡಿದೆ. ಚುನಾವಣೆ ಇದ್ದ ಕಾರಣ ಅಭಿವೃದ್ಧಿ ಕೆಲಸ ಸ್ವಲ್ಪ ತಡವಾಗಿದ್ದವು. ಮುಂದೆ ಕಾಮಗಾರಿ ವೇಗ ಪಡೆಯಲಿವೆ ಎಂದರು.

- - -

* (ಟಾಪ್‌ ಕೋಟ್‌) ದಾವಣಗೆರೆಯ ಬೇತೂರು ಬ್ರಿಡ್ಜ್ ವರೆಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ರಸ್ತೆಯನ್ನು ಸುಮಾರು ₹11 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಶೈಕ್ಷಣಿಕ ಸುಧಾರಣೆ ಬಗ್ಗೆ ಗಮನಹರಿಸುವೆ. ಅಭಿವೃದ್ಧಿಯನ್ನು ಪ್ರತಿ ಗ್ರಾಮ, ವಾರ್ಡ್‌ಗಳಿಗೆ ತಲುಪಿಸಿ, ಯಾವುದೇ ಪ್ರದೇಶ ಹಿಂದುಳಿಯದಂತೆ ನೋಡಿಕೊಳ್ಳಲಾಗುವುದು. ಪ್ರತಿ ವಾರ್ಡಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಲಪಡಿಸುವುದು, ಜಿಲ್ಲಾಸ್ಪತ್ರೆಯ ಎಂ.ಆರ್.ಐ ಸ್ಕ್ಯಾನ್ ಹಾಗೂ ಚಾಮರಾಜಪೇಟೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತುರ್ತು ಘಟಕ, ಆಂಬ್ಯುಲೆನ್ಸ್ ಸೇವೆಗಳ ಕೊರತೆಗೆ ಪರಿಹಾರ ಕಂಡುಕೊಳ್ಳಲಾಗುವುದು.

- ಸಮರ್ಥ ಎಂ.ಶಾಮನೂರು, ಶಾಸಕ.

- - -

-6ಕೆಡಿವಿಜಿ2, 3, 4, 5:

ದಾವಣಗೆರೆಯಲ್ಲಿ ಬುಧವಾರ ದಕ್ಷಿಣದ ನೂತನ ಶಾಸಕ ಸಮರ್ಥ ಎಂ.ಶಾಮನೂರು ಸುದ್ದಿಗೋಷ್ಠಿಯಲ್ಲಿ ಮತದಾರರು, ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.