ಕ್ಯಾನ್ಸರ್ ಸದ್ದಿಲ್ಲದೇ ಬರುವ ಕಾಯಿಲೆಯಾಗಿದ್ದು, ತಪಾಸಣೆಯೇ ಇದನ್ನು ತಡೆಯಲು ಇರುವ ಮುಂಜಾಗ್ರತೆ ಕ್ರಮ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಕ್ಯಾನ್ಸರ್ ಸದ್ದಿಲ್ಲದೇ ಬರುವ ಕಾಯಿಲೆಯಾಗಿದ್ದು, ತಪಾಸಣೆಯೇ ಇದನ್ನು ತಡೆಯಲು ಇರುವ ಮುಂಜಾಗ್ರತೆ ಕ್ರಮ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿನ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಹಾಗೂ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಶಿವಮೊಗ್ಗ, ಕ್ಯಾನ್ಸರ್ ಮಾಹಿತಿ ಕೇಂದ್ರ ಶಿವಮೊಗ್ಗ, ಎಂಐಒ ಆಸ್ಪತ್ರೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಮಾಹಿತಿ ಸಂಗ್ರಹ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಕ್ಯಾನ್ಸರ್ ಹೆಚ್ಚು ಕಾಡುತ್ತಿರುವ ಕಾಯಿಲೆಯಾಗಿದೆ. ಇದು ಬರುವುದೇ ಗೊತ್ತಾಗುವುದಿಲ್ಲ. ಹಾಗಾಗಿ ಮುಂಜಾಗ್ರತಾ ಕ್ರಮ ಎಂದರೆ ಕಾಲ ಕಾಲಕ್ಕೆ ತಪ್ಪದೇ ತಪಾಸಣೆ ಮಾಡಿಸಿಕೊಳ್ಳಬೇಕು. ಅದರಲ್ಲೂ ಮಹಿಳೆಯರು ಈ ಬಗ್ಗೆ ಹೆಚ್ಚು ಜಾಗೃತರಾಗಬೇಕು ಎಂದರು.ಈ ನಿಟ್ಟಿನಲ್ಲಿ ನಮ್ಮ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸುಮಾರು 8 ಸಾವಿರ ಮಹಿಳೆಯರನ್ನು ತಪಾಸಣೆಗೆ ಒಳಪಡಿಸಲು ತೀರ್ಥಹಳ್ಳಿಯ ಎಂಐಒ ಕ್ಯಾನ್ಸರ್ ಆಸ್ಪತ್ರೆಯವರು ಮುಂದೆ ಬಂದಿದ್ದಾರೆ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ಕ್ಯಾನ್ಸರ್ ಅರಿವು ಮೂಡಿಸುವುದು ಕೂಡ ಒಂದು ಸಮಾಜಸೇವೆಯೇ ಆಗಿದೆ. ಇದರಿಂದ ಸಾವಿರಾರು ರೋಗಿಗಳು ಜೀವ ಉಳಿಸಿಕೊಳ್ಳಬಹುದು. ನಮಗೆ ಗೊತ್ತಿರುವ ಹಾಗೆ 3 ಮತ್ತು 4ನೇ ಹಂತದಲ್ಲಿ ರೋಗವಿದ್ದಾಗ ತಪಾಸಣೆಗೆ ಬರುತ್ತಾರೆ. ಅದು ತಪ್ಪು, 1 ಮತ್ತು 2ನೇ ಹಂತದಲ್ಲಿ ಕಾಯಿಲೆ ಇದ್ದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.ತೀರ್ಥಹಳ್ಳಿಯ ಎಂಐಒ ಆಸ್ಪತ್ರೆಯವರು ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಇಡೀ ಜಿಲ್ಲಾದ್ಯಂತ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗದ ಹಲವು ಸಂಘ, ಸಂಸ್ಥೆಗಳು ಸೇರಿಕೊಂಡಿವೆ. ಇದೊಂದು ಸಮಾಜಸೇವೆ ಎಂದು ಭಾವಿಸೋಣ ಅವರ ಜೊತೆ ಕೈಜೋಡಿಸೋಣ. ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು.ರೆಡ್ ಕ್ರಾಸ್ ಸಂಸ್ಥೆಯ ವಿ.ಎಲ್.ಎಸ್.ಕುಮಾರ್ ಮಾತನಾಡಿ, ಯಾವ ದುರಭ್ಯಾಸ ಇಲ್ಲದವರಿಗೂ ಕ್ಯಾನ್ಸರ್ ಬರುತ್ತಿದೆ. ಪ್ರಸ್ತುತ ಆಹಾರ, ನೀರು, ಗಾಳಿ ಕೂಡ ಕಲಬೆರಕೆಯಾಗಿದೆ. ತುಂಗಾ ನದಿ ನೀರು ಕಲುಷಿತಗೊಂಡಿದೆ. ಕ್ಯಾನ್ಸರ್ ಕಾಯಿಲೆಗೆ ಇದೂ ಒಂದು ಕಾರಣ. ಈ ಬಗ್ಗೆ ಜಾಗೃತಿಯ ಅವಶ್ಯಕತೆ ಇದೆ. ಪಠ್ಯ ಪುಸ್ತಕದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಂಐಒ ಆಸ್ಪತ್ರೆಯ ಮುಖ್ಯಸ್ಥ ಡಾ.ಸುರೇಶ್ ರಾವ್, ಕ್ಯಾನ್ಸರ್ ಮಿತಿಮೀರಿ ಬೆಳೆಯುತ್ತಿದೆ. ಸಾಮಾನ್ಯವಾಗಿ 4ನೇ ಹಂತಕ್ಕೆ ತಲುಪಿದ ಮೇಲೆ ರೋಗಿಗಳು ಬರುತ್ತಾರೆ. ಇದರಿಂದ ಸಮಾಜಕ್ಕೂ ಕಷ್ಟ. ವ್ಯಕ್ತಿಯ ಜೀವಕ್ಕೂ ಕಷ್ಟ. ಸರ್ಕಾರಕ್ಕೂ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆ ಕ್ಯಾನ್ಸರ್ ವಿರುದ್ಧ ಅಭಿಯಾನವನ್ನೇ ಹಮ್ಮಿಕೊಂಡಿದೆ ಎಂದು ತಿಳಿಸಿದರು.ಸಂಘ ಸಂಸ್ಥೆಗಳ ನೆರವಿನೊಂದಿಗೆ ಸುಮಾರು 12 ಪ್ರಶ್ನೆಗಳು ಇರುವ ಅರ್ಜಿ ರೀತಿಯ ಫಾರಂಗಳನ್ನು ತಲುಪಿಸಲಾಗುವುದು. ಆ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರ ಕೊಟ್ಟರೆ ಸಾಕು, ನಾವು ಅದನ್ನು ಪರಿಶೀಲಿಸಿ ಸಂದರ್ಭ ಬಂದರೆ ಉಚಿತ ತಪಾಸಣೆ ಮಾಡುತ್ತೇವೆ. ಇದು ಮನೆ ಮನೆಗೆ ಅರಿವು ಮುಟ್ಟಿಸುವ ಕಾರ್ಯಕ್ರಮವಾಗಿದೆ. ಮೊದಲ ಹಂತದಲ್ಲಿ ಸುಮಾರು 1 ಲಕ್ಷ ಜನರಿಗೆ ಈ ಫಾರಂಗಳನ್ನು ತಲುಪಿಸಲಾಗುವುದು. ಇದಕ್ಕೆ ಶಿವಮೊಗ್ಗದ ಕ್ಯಾನ್ಸರ್ ಮಾಹಿತಿ ಕೇಂದ್ರ ಕೈಜೋಡಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಮ್ಮ ಕನಸಿನ ಶಿವಮೊಗ್ಗದ ಅಧ್ಯಕ್ಷ ಎನ್.ಗೋಪಿನಾಥ್, ರಾಷ್ಟ್ರ ಭಕ್ತರ ಬಳಗದ ಕೆ.ಇ.ಕಾಂತೇಶ್, ಶ್ರೀಗಂಧ ಸಂಸ್ಥೆಯ ಸಂಚಾಲಕ ಉಮೇಶ್ ಆರಾಧ್ಯ, ರೆಡ್ ಕ್ರಾಸ್ ಸಂಸ್ಥೆಯ ಡಾ.ದಿನೇಶ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಎ.ಮಂಜುನಾಥ್, ರೋಟರಿ ವಿಜಯಕುಮಾರ್ ಮತ್ತಿತರರಿದ್ದರು. ಇದೇ ವೇಳೆ ಕ್ಯಾನ್ಸರ್ ಸ್ವಯಂ ಸೇವಕರಿಗೆ ಗುರುತಿನ ಪತ್ರಗಳನ್ನು ವಿತರಿಸಿ ಜಾಗೃತಿ ಕಾರ್ಯಕ್ರಮದ ಕರಪತ್ರಗಳನ್ನು ನೀಡಲಾಯಿತು. ಕ್ಯಾನ್ಸರ್ ಮಾಹಿತಿ ಕೇಂದ್ರದ ಅ.ನಾ.ವಿಜಯೇಂದ್ರರಾವ್ ಸ್ವಾಗತಿಸಿದರು. ಕೆ.ಜಿ.ಕೃಷ್ಣಾನಂದ ನಿರೂಪಿಸಿದರು. ದಿಲೀಪ್ ನಾಡಿಗ್ ವಂದಿಸಿದರು.