ರಾಷ್ಟ್ರೀಯ ಹಬ್ಬದಂತೆ ಪ್ರಜಾಪ್ರಭುತ್ವ ಆಚರಿಸೋಣ: ಶೃಂಗೇರಿ

| Published : Apr 29 2024, 01:33 AM IST

ಸಾರಾಂಶ

ಭೂಸೇನಾ ನಿಗಮದಲ್ಲಿನ 170ನೇ ಮತಗಟ್ಟೆಯಲ್ಲಿ ಚುನಾವಣಾ ಧ್ವಜಾರೋಹಣವನ್ನು ಸಹಾಯಕ ಚುನಾವಣಾಧಿಕಾರಿ ಲಕ್ಷ್ಮಣ ಬಿ.ಶೃಂಗೇರಿ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ರಾಷ್ಟ್ರೀಯ ಹಬ್ಬಗಳ ಮಾದರಿಯಲ್ಲಿ ಪ್ರಜಾಪ್ರಭುತ್ವದ ಹಬ್ಬ ಆಚರಿಸೋಣ ಎಂದು ಜಿಪಂ ಉಪ ಕಾರ್ಯದರ್ಶಿ ಹಾಗೂ ಸಹಾಯಕ ಚುನಾವಣಾಧಿಕಾರಿ ಲಕ್ಷ್ಮಣ ಬಿ.ಶೃಂಗೇರಿ ಕರೆ ನೀಡಿದರು.

ಮೇ.7ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಪ್ರಮಾಣ ಹೆಚ್ಚಿಸಲು "ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ಅಂಗವಾಗಿ " ಭಾನುವಾರ ತಾಲೂಕಿನ ಭೂಸೇನಾ ನಿಗಮದಲ್ಲಿನ 170ನೇ ಮತಗಟ್ಟೆಯಲ್ಲಿ ಚುನಾವಣಾ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ಮತದಾರನ ಕೈಯಲ್ಲಿದೆ. ಮತದಾನಕ್ಕಿಂತ ದೊಡ್ಡದು ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುವ ಮೂಲಕ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಮತದಾನ ಪ್ರತಿಯೊಬ್ಬರ ಸಂವಿಧಾನಾತ್ಮಕ ಹಕ್ಕಾಗಿದ್ದು, ಯಾವುದೇ ಆಮಿಷಕ್ಕೆ ಮರುಳಾಗದೆ, ವಿವೇಚನೆಯಿಂದ ಮತ ಹಾಕಿ. ಒಂದು ಮತ ದೇಶದ ಭದ್ರತೆ ಜತೆಗೆ ಪ್ರಜಾಪ್ರಭುತ್ವದ ಸದೃಢತೆಗೆ ಪೂರಕವಾಗುತ್ತದೆ. ನಮ್ಮ ಒಂದು ಮತ ನಮಗೂ ಮತ್ತು ನಮ್ಮ ಮಕ್ಕಳ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ನಗರದ ಪ್ರಮುಖ ಬೀದಿಯಲ್ಲಿ ಬ್ಯಾನರ್ ಹಾಗೂ ಸ್ವಚ್ಛತಾ ವಾಹಿನಿಯ ಧ್ವನಿವರ್ಧಕದಲ್ಲಿ ಚುನಾವಣಾ ಜಾಗೃತಿಯ ನಾ..ಭಾರತ...ಹಾಡಿನೊಂದಿಗೆ ಕಳೆದ ವರ್ಷದ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಮತಗಟ್ಟೆ ವರೆಗೆ ಕಾಲ್ನಡಿಗೆ ಮೂಲಕ ಜಾಗೃತಿ ಜಾಥಾ ಮಾಡಿ, ಮತದಾನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಈ ವೇಳೆ ತಾಪಂ ಇಒ ಪ್ರವೀಣಕುಮಾರ, ತಹಸೀಲ್ದಾರ್ ಉಮಾಕಾಂತ ಹಳ್ಳೆ, ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ಸೂರ್ಯವಂಶಿ, ರಾವುತಪ್ಪ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ. ರಮೇಶ ಗುತ್ತೇದಾರ, ಶಹಾಪುರ ನಗರಸಭೆ ಆಯುಕ್ತರಾದ ರಮೇಶ ಬಡಿಗೇರ ಸೇರಿದಂತೆ ಇತರರಿದ್ದರು.

ಬೀದಿ ನಾಟಕದಿಂದ ಮತದಾನದ ಅರಿವು: ಮತದಾರರನ್ನು ಸೆಳೆಯಲು ಸ್ಥಳೀಯ ಜಾನಪದ ಕಲೆ, ಸಾಂಸ್ಕೃತಿಕ ಚಟುವಟಿಕೆ, ಸೈಕಲ್, ದ್ವಿಚಕ್ರ ವಾಹನ, ಕಾಲ್ನಡಿಗೆ ಜಾಥ, ನೈತಿಕ ಚುನಾವಣೆಯ ಕುರಿತು ಮತದಾರರಿಗೆ ಭಿತ್ತಿ ಚಿತ್ರಗಳ ವಿತರಣೆ, ಬೀದಿ ನಾಟಕದಂತಹ ನಾನಾ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಲಕ್ಷ್ಮಣ ತಿಳಿಸಿದ್ದಾರೆ.