ಸಾರಾಂಶ
ಮಾಗಡಿ: ಕನ್ನಡ ರಾಜ್ಯೋತ್ಸವವನ್ನು ತಾಲೂಕು ಆಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲು ಅಧಿಕಾರಿಗಳು ತಯಾರಿ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ.1ರಂದು ಪಟ್ಟಣದ ಕೋಟೆ ಮೈದಾನದಲ್ಲಿ ಹಮ್ಮಿಕೊಳ್ಳುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವ ಇಲಾಖೆಗೆ ಯಾವ ಜವಾಬ್ದಾರಿ ಕೊಟ್ಟಿರುತ್ತೇವೋ ಅದನ್ನು ಸರಿಯಾಗಿ ನಿಭಾಯಿಸಬೇಕು. ತಹಸೀಲ್ದಾರ್ ಅವರು ಮತ್ತೊಮ್ಮೆ ಅಧಿಕಾರಿಗಳ ಸಭೆ ಕರೆದು ಅವರಿಗೆ ನೀಡಿರುವ ಜವಾಬ್ದಾರಿ ಕುರಿತು ಹೇಳುತ್ತಾರೆ ಎಂದು ಹೇಳಿದರು.ಕನ್ನಡ ರಾಜ್ಯೋತ್ಸವ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕು. ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಯಾರಿ ಮಾಡಿಕೊಳ್ಳಬೇಕು. ಈ ಬಾರಿ ವಿಶೇಷವಾಗಿ ನೂರು ವರ್ಷ ನಾಡಗೀತೆಗೆ ಆಗಿರುವುದರಿಂದ ಕುವೆಂಪು ಹೆಸರಿನಲ್ಲಿ ಉತ್ತಮ ನಾಡಗೀತೆ ಹಾಡುವ ಎರಡು ಶಾಲೆಗಳಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ತಾಲೂಕಿನಲ್ಲಿ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸುವ ಕೆಲಸ ಮಾಡಲಾಗುತ್ತದೆ. ತಹಸೀಲ್ದಾರ್, ಬಿಇಒ ಅವರನ್ನು ಒಳಗೊಂಡ ಸಮಿತಿ ತೀರ್ಮಾನ ಮಾಡಿ ಅಂತಿಮಗೊಳಿಸಬೇಕು ಎಂದು ತಿಳಿಸಿದರು.ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಿಂದ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಲಹೆ ನೀಡಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ. ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಎಲ್ಲಾ ಅಧಿಕಾರಿಗಳು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಕವಿಗಳ ಹೆಸರಿಡಲು ಸಲಹೆ:ತಿರುಮಲೇ ಶ್ರೀನಿವಾಸ್ ಮಾತನಾಡಿ, ಮಾಗಡಿಯ ಪ್ರಮುಖ ರಸ್ತೆಗೆ ಹಿರಿಯ ಸಾಹಿತಿಗಳ ಹೆಸರು ಇಡಬೇಕೆಂದು ಶಾಸಕರಿಗೆ ಸಲಹೆ ನೀಡಿದರು. ಇದಕ್ಕೆ ಬಾಲಕೃಷ್ಣ ಪ್ರತಿಕ್ರಿಯಿಸಿ, ಕನ್ನಡ ರಾಜ್ಯೋತ್ಸವ ಮುಗಿದ ನಂತರ ಪತ್ರಕರ್ತರು ಹಾಗೂ ಅಧಿಕಾರಿಗಳು ಯಾವ ರಸ್ತೆಗೆ ಯಾರ ಹೆಸರಿಡಬೇಕೆಂದು ತೀರ್ಮಾನಿಸಿ ತಿಳಿಸಿದರೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಕಾನೂನು ಬದ್ಧವಾಗಿ ಪ್ರಮುಖ ರಸ್ತೆಗಳಿಗೆ ಹಿರಿಯ ಸಾಹಿತಿಗಳು ಕವಿಗಳ ಹೆಸರನ್ನು ಇಡೋಣ ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ಉಪ ತಹಸೀಲ್ದಾರ್ ಪ್ರಭಾಕರ್, ತಾಪಂ ಇಒ ಜೈಪಾಲ್, ಪೊಲೀಸ್ ಎನ್ಸ್‌ಪೆಕ್ಟರ್ ಗಿರಿರಾಜ್, ಸಿಡಿಪಿಒ ಸುರೇಂದ್ರ, ತಾಲೂಕು ಕಸಾಪ ಅಧ್ಯಕ್ಷ ತಿ.ನಾ.ಪದ್ಮನಾಭ್, ನವ ನಿರ್ಮಾಣ ವೇದಿಕೆ ಅಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ, ಆಗ್ರೋ ಪುರುಷೋತ್ತಮ್ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಫ್ಷನ್)
ಮಾಗಡಿ ತಾಲೂಕು ಕಚೇರಿಯಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು. ಉಪ ತಹಸೀಲ್ದಾರ್ ಪ್ರಭಾಕರ್, ತಾಪಂ ಇಒ ಜೈಪಾಲ್, ಪೊಲೀಸ್ ಎನ್ಸ್‌ಪೆಕ್ಟರ್ ಗಿರಿರಾಜ್, ಸಿಡಿಪಿಒ ಸುರೇಂದ್ರ ಇತರರಿದ್ದರು.