ಸಾರಾಂಶ
ಹೊಸಪೇಟೆ: ಔಷಧಿಗಳ ದುರ್ಬಳಕೆ ತಡೆಗಟ್ಟಲು ಹಾಗೂ ಔಷಧಿಗಳ ಬಳಕೆಯ ಕುರಿತು ಅರಿವು ಮೂಡಿಸಲು ಫಾರ್ಮಸಿಸ್ಟ್ ದಿನ ಪೂರಕವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್.ಆರ್. ಶಂಕರನಾಯ್ಕ ಹೇಳಿದರು.
ನಗರದ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಮತ್ತು ನಿರಂತರ ಕಲಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವ ಪಾರ್ಮಸಿಸ್ಟ್ ದಿನಾಚರಣೆಗೆ ‘ಆರೋಗ್ಯದ ಬಗ್ಗೆ ಯೋಚಿಸಿ, ಔಷಧಿಕಾರರ ಬಗ್ಗೆ ಯೋಚಿಸಿ’ ಎಂಬುದು ಈ ವರ್ಷದ ಸಂದೇಶವಾಗಿದೆ. ವೈದ್ಯರಷ್ಟೇ ಫಾರ್ಮಸಿಸ್ಟ್‌ಗಳ ಪಾತ್ರ ಪ್ರಮುಖವಾಗಿದೆ. ರೋಗಿಗಳಿಗೆ ಅಗತ್ಯ ಔಷಧಿಗಳ ವಿತರಣೆಗೆ ಹಾಗೂ ರೋಗ ನಿಯಂತ್ರಣಕ್ಕೆ ಫಾರ್ಮಸಿಸ್ಟ್‌ಗಳ ಸೇವೆ ಸ್ಮರಣೀಯ ಎಂದರು.
ಎಲ್ಲಾ ಔಷಧಿ ಅಂಗಡಿಗಳಿಗೆ ಸರ್ಕಾರವು ಸೂಚಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಔಷಧ ನೀಡುವಲ್ಲಿ ನರ್ಸ್‌ಗಳ ಸಹಕಾರವೂ ಮುಖ್ಯವಾಗಿದೆ. ಪ್ರತಿಯೊಬ್ಬರು ಸಹ ವಿಶ್ವದ ಜನರ ಆರೋಗ್ಯವನ್ನು ವೃದ್ಧಿಸುವ ಔಷಧ ತಜ್ಞರನ್ನು ಗೌರವಿಸಬೇಕು ಎಂದರು.ಸಹಾಯಕ ಔಷಧ ನಿಯಂತ್ರಕರಾದ ಜಿ.ವಿ. ನಾರಾಯಣ ರೆಡ್ಡಿ ನಿರಂತರ ಕಲಿಕಾ ಕಾರ್ಯಕ್ರಮದಡಿ ಉಪನ್ಯಾಸ ನೀಡಿ, ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940ರ ಮಾರ್ಗಸೂಚಿ ಅನ್ವಯ ಪಶು ಔಷಧಗಳನ್ನು ಪ್ರತ್ಯೇಕವಾಗಿ ದಾಸ್ತಾನು ಮಾಡಿ ನಾಮ ಫಲಕ ಹಾಕಬೇಕು ಮತ್ತು ಅವಧಿ ಮೀರಿದ ಔಷಧಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಅಂಗಡಿಗಳಲ್ಲಿ ಶೀತಕ ಯಂತ್ರವನ್ನು ಅಳವಡಿಸಬೇಕು. ವಿದ್ಯಾಭ್ಯಾಸ ಮಾಡಿದ ಅರ್ಹ ವ್ಯಕ್ತಿಗಳು ಔಷಧಿ ಅಂಗಡಿಗಳಲ್ಲಿ ನಿಯೋಜನೆ ಮಾಡುವುದು. ಮಾರಾಟದ ಬಿಲ್ಲನ್ನು ದ್ವಿಪ್ರತಿಗಳಲ್ಲಿ ಇರಿಸುವುದು. ಜಿಎಸ್‌ಟಿ ಖರೀದಿ ಬಿಲ್‌ಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿಡಬೇಕು. ಮಾರಾಟ ಮಳಿಗೆಯನ್ನು ಸ್ವಚ್ಛಯಿಂದ ನಿರ್ವಹಿಸಬೇಕು. ಶೆಡ್ಯೂಲ್ ಎಕ್ಸ್ ಅಡಿ ಬರುವ ಔಷಧಿಗಳನ್ನು ಪ್ರತ್ಯೇಕವಾಗಿ ದಾಸ್ತಾನು ಮಾಡಿ, ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸಬೇಕು ಎಂದು ಸಲಹೆ ನೀಡಿದರು.
ವಿಭಾಗವಾರು ಹಿರಿಯ ಫಾರ್ಮಸಿಸ್ಟ್ ಪ್ರಶಸ್ತಿ ಪಡೆದ ಜನಾರ್ಧನ, ಎ. ಗಿರೀಧರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಂ. ಬಸವರಾಜ ರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಜೆ. ಸಂತೋಷ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ವಾಹಿದ್ ತಂಬ್ರಹಳ್ಳಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ರಾಜಶೇಖರ್ ಸ್ವಾಮಿ, ಮಲ್ಲಿಕಾರ್ಜುನ ಕೊತ್ತೂರು, ಚಿದಾನಂದ ಸ್ವಾಮಿ, ಪ್ರಶಾಂತ್ ಪೂಜಾರ್, ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಸತೀಶ್ ವೇಮಲ್, ಉಪಾಧ್ಯಕ್ಷರಾದ ಪಿ. ಸುಬ್ರಮಣ್ಯ, ಪದಾಧಿಕಾರಿಗಳಾದ ಜಾವೇದ್ ಮಹಮ್ಮದ್, ಪ್ರಕಾಶ್ ಜಾಲಿ, ಪ್ರಶಾಂತ್, ಕಿರಣ್ ಕಲಾಲ್ ಸೇರಿದಂತೆ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಶಂಕ್ರಯ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.