ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಿಳೆಗೆ ನೀಡಿದ ಸ್ವಾತಂತ್ರ್ಯದ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ಈ ಸ್ವಾತಂತ್ರ್ಯದಿಂದ ಯಾವುದೇ ಕಾರಣಕ್ಕೂ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಡಾ.ಸ್ಫೂರ್ತಿ ಮಾಸ್ತಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಿಳೆಗೆ ನೀಡಿದ ಸ್ವಾತಂತ್ರ್ಯದ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು. ಈ ಸ್ವಾತಂತ್ರ್ಯದಿಂದ ಯಾವುದೇ ಕಾರಣಕ್ಕೂ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಡಾ.ಸ್ಫೂರ್ತಿ ಮಾಸ್ತಿಹೊಳಿ ಹೇಳಿದರು.

ಜಾಗತಿಕ ಲಿಂಗಾಯಿತ ಮಹಾಸಭಾ ವತಿಯಿಂದ ಆಯೋಜಿಸಲಾದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಯರಿಗೆ ದೊರೆತಿರುವ ಸ್ವಾತಂತ್ರ್ಯ ಕೆಲವು ಸಂದರ್ಭಗಳಲ್ಲಿ ದುರುಪಯೋಗವಾಗುತ್ತಿರುವುದು ಕಂಡುಬರುತ್ತಿದೆ. ಕುಟುಂಬದ ಆರೋಗ್ಯ ಮತ್ತು ಸ್ಥಿರತೆಯನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.

ಪಾಲಕರು ತಮ್ಮ ಮಕ್ಕಳಿಗೆ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಜವಾಬ್ದಾರಿ, ಹೊಂದಾಣಿಕೆ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಬಾಲ್ಯದಲ್ಲೇ ಕಲಿಸಿಕೊಡಬೇಕು. ಸಂಸಾರದಲ್ಲಿ ಹೊಂದಾಣಿಕೆ ಅತ್ಯಂತ ಮುಖ್ಯವಾಗಿದೆ. ಹೆಣ್ಣು ಮಗಳು ಮತ್ತು ಸೊಸೆ ಇಬ್ಬರನ್ನೂ ಸಮಾನವಾಗಿ ಕಾಣುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ಅತಿ ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನೆಗಳು ನಡೆಯುತ್ತಿರುವುದು ದುಃಖಕರ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಸಂವಾದ ಮತ್ತು ಹೊಂದಾಣಿಕೆಯ ಮೂಲಕ ಅದನ್ನು ಪರಿಹರಿಸಿಕೊಳ್ಳಬಹುದು. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕಾಗಿ ಉತ್ತಮ ನಡೆ-ನುಡಿಗಳು ಹಾಗೂ ಸಂವಹನ ಅತ್ಯಗತ್ಯ ಎಂದರು.

ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ಬಸವ ಜಯಂತಿ ಅಂಗವಾಗಿ ಎರಡು ಸಾವಿರ ಶರಣ-ಶರಣೆಯರಿಂದ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾಜದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಧಾರ್ಮಿಕ ಚಿಹ್ನೆಗಳು ಮ್ಯೂಸಿಯಂನಲ್ಲಿ ಮಾತ್ರ ಕಾಣಿಸಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ದಾಸೋಹಿಗಳಾದ ಸುಧಾ ಮಲ್ಲಿಕಾರ್ಜುನ ರೊಟ್ಟಿ ಮತ್ತು ಮಲ್ಲಿಕಾರ್ಜುನ ಸಂಗಪ್ಪ ರೊಟ್ಟಿ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಮಹಾಂತೇಶ ತೋರಣಗಟ್ಟಿ ದಂಪತಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಸುರೇಶ್ ನರಗುಂದ ಮತ್ತು ಶ್ರೀದೇವಿ ನರಗುಂದ ದಂಪತಿ ಬಹುಮಾನ ವಿತರಿಸಿದರು. ನೈನಾ ಗಿರಿಗೌಡರ್ ಸ್ವಾಗತಿಸಿದರು. ಶಿವಲೀಲಾ ಪಟ್ಟಣಶೆಟ್ಟಿ ನಿರೂಪಿಸಿದರು. ಸರೋಜಿನಿ ನಡುವಿನಹಳ್ಳಿ ವಂದಿಸಿದರು.------------