ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಫೆ.3ರಂದು ನಡೆಯುವ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲಿನ ಗೌರವ ಹಾಗೂ ಉಸ್ತುವಾರಿ ಸಚಿವರ ಸೂಚನೆಯಂತೆ ಸ್ಥಳೀಯ ಭಿನ್ನಾಭಿಪ್ರಾಯಗಳೆಲ್ಲ ಮರೆತು ಪ್ರತಿಮೆ ಅನಾವರಣ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಶ್ರಮಿಸೋಣ ಎಂದು ಕುರುಬ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದರು.ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಪ್ರತಿಮೆ ಆನಾವರಣ ಆಹ್ವಾನ ಪತ್ರಿಕೆಯಲ್ಲಿ ಮಂಜಪ್ಪ ಮತ್ತು ಕನಕ ಯುವ ವೇದಿಕೆಯ ಪದಾಧಿಕಾರಿಗಳ ಹೆಸರು ಕೈಬಿಟ್ಟಿದ್ದನ್ನು ಅವಳಿ ತಾಲೂಕುಗಳ ಕುರುಬ ಸಮಾಜದ ಮುಖಂಡರು ಖಂಡಿಸಿ ಇತ್ತೀಚೆಗೆ ಹೇಳಿಕೆ ನೀಡಿದ್ದರು,
ಆಹ್ವಾನ ಪತ್ರಿಕೆಯಲ್ಲಿ ಮಂಜಪ್ಪ ಹೆಸರು ಕೈಬಿಟ್ಟಿದ್ದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದ್ದರಿಂದ, ಅಚಾತುರ್ಯದಿಂದ ಹೆಸರು ಕೈಬಿಟ್ಟಿದೆಯೇ ಹೊರತು ಉದ್ದೇಶಪೂರ್ವಕವಾಗಿ ಅಲ್ಲ ಎಂದು ಪ್ರತಿಮೆ ಆನಾವರಣ ಕಾರ್ಯಕ್ರಮದ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ ಎಂದು ಮಂಜಪ್ಪ ಹೇಳಿದರು.ನಂತರದ ಬೆಳವಣಿಗೆಯಲ್ಲಿ ತಮ್ಮೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಈ ರೀತಿ ಗೊಂದಲ ಮಾಡಿದರೆ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿ ಹಾಗೂ ಗಣ್ಯರಿಗೆ ಮುಜುಗರ ಆಗುವ ಸಾಧ್ಯತೆ ಇದೆ. ಆದ್ದರಿಂದ ಏನೇ ಗೊಂದಲ, ಭಿನ್ನಾಭಿಪ್ರಾಯಗಳಿದ್ದರೂ ನಂತರದಲ್ಲಿ ಬಗೆಹರಿಸಿಕೊಳ್ಳಿ, ಎಲ್ಲರೂ ಒಟ್ಟಾಗಿ ಸೇರಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿ ಎಂದು ತಮಗೆ ಹೇಳಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಜಪ್ಪ ತಿಳಿಸಿದರು.
ಜೊತೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಅವರು ಕೂಡ ಕಾರ್ಯಕ್ರಮ ಶಾಂತಿ, ಸೌಹಾರ್ದತೆಯಿಂದ ನಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಗಣ್ಯರಿಗೆ ಗೌರವಿಸಲು ಫೆ 3ರಂದು ನಡೆಯುವ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡಲು ತನ್ನೊಂದಿಗಿರುವ ಕುರುಬ ಸಮಾಜದ ಮುಖಂಡರು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. .ಕುರುಬ ಸಂಘದ ಕಾರ್ಯಾಧ್ಯಕ್ಷ ಧರ್ಮಪ್ಪ ಮಾತನಾಡಿ ಎಚ್.ಬಿ.ಮಂಜಪ್ಪ ರಾಜಕೀಯ ಬೆಳವಣಿಗೆ ಸಹಿಸದ ಕೆಲವರು ಈ ರೀತಿ ಉದ್ದೇಶಪೂರ್ವಕವಾಗಿ ಪತ್ರಿಕೆಯಲ್ಲಿ ಹೆಸರು ಕೈಬಿಡುವ ಕೆಲಸ ಮಾಡಿದ್ದಾರೆ, ಆದರೆ ಹಿರಿಯರಿಗೆ ಗೌರವ ಕೊಡುವ ಉದ್ದೇಶದಿಂದ ಮಂಜಪ್ಪ ಹಾಗೂ ನಾವು ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುರುಬ ಸಂಘ ಅಧ್ಯಕ್ಷ ನೆಲಹೊನ್ನೆ ಮೋಹನ,ಗೌರವಾಧ್ಯಕ್ಷ ಆರುಂಡಿ ಪ್ರಕಾಶ್, ಖಜಾಂಚಿ ಎಚ್.ಎ. ನರಸಿಂಹಪ್ಪ, ಹರಳಹಳ್ಳಿ ಬೆನಕಪ್ಪ, ವಿಜೇಂದ್ರಪ್ಪ,ಕೆ.ಪುಟ್ಟಪ್ಪ,ಸೇರಿ ಹಲವು ಮುಖಂಡರು ಹಾಜರಿದ್ದರು.