ಕನ್ನಡ ರಥವನ್ನು ಅರ್ಥಪೂರ್ಣವಾಗಿ ಸ್ವಾಗತಿಸೋಣ: ತಹಸೀಲ್ದಾರ್ ಮನಿಷಾ

| Published : Jul 27 2024, 12:48 AM IST

ಕನ್ನಡ ರಥವನ್ನು ಅರ್ಥಪೂರ್ಣವಾಗಿ ಸ್ವಾಗತಿಸೋಣ: ತಹಸೀಲ್ದಾರ್ ಮನಿಷಾ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರ್ನಾಟಕ 50ರ ಸಂಭ್ರಮದ ಜ್ಯೋತಿಯನ್ನು ಬರ ಮಾಡಿಕೊಂಡು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿರುವರು.

ಬಾಗೇಪಲ್ಲಿ: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥ ಯಾತ್ರೆ ಬಾಗೇಪಲ್ಲಿ ತಾಲೂಕಿಗೆ ಜೂ. 27 ರಂದು ಆಗಮಿಸಲಿದ್ದು, ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘ-ಸಂಸ್ಥೆಗಳ ಜೊತೆಯಲ್ಲಿ ಅರ್ಥಪೂರ್ಣವಾಗಿ ಸ್ವಾಗತಿಸಿ, ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಗುವುದು ಎಂದು ತಹಸೀಲ್ದಾರ್ ಮನೀಷಾ ಮಹೇಶ್ ಪತ್ರಿ ತಿಳಿಸಿದರು.

ಈ ಸಂಬಂಧ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಳಗ್ಗೆ ಪಟ್ಟಣದ ಕೋರ್ಟ್ ಮುಂಭಾಗದಲ್ಲಿ ಸುವರ್ಣ ಸಂಭ್ರಮ ರಥಕ್ಕೆ ಪೂರ್ಣಕುಂಭ ಸ್ವಾಗತ ಕೋರಲಾಗುವುದು. ನಂತರ ವಿವಿಧ ಕಲಾ ತಂಡಗಳು ಹಾಗೂ ಸ್ತಬ್ಧ ಭಾವಚಿತ್ರಗಳ ಮೆರವಣಿಗೆ ಆರಂಭವಾಗಲಿದೆ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರ್ನಾಟಕ 50ರ ಸಂಭ್ರಮದ ಜ್ಯೋತಿಯನ್ನು ಬರ ಮಾಡಿಕೊಂಡು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಿರುವರು. ಮೆರವಣಿಗೆ ಚಿತ್ರಾವತಿ ನದಿ ಸೇತುವೆಯಿಂದ ಆರಂಭವಾಗಿ ನ್ಯಾಷನಲ್ ಕಾಲೇಜು ಮುಂಭಾಗದವರೆಗೆ ನಡೆಯಲಿದೆ. ಭವ್ಯ ಮೆರವಣಿಗೆಯಲ್ಲಿ ತಾಲೂಕು ಆಡಳಿತದ ಎಲ್ಲಾ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಶಾಲಾ ಕಾಲೇಜುಗಳ ಶಿಕ್ಷಕ,ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ , ಶಿಕ್ಷಣ ಇಲಾಖೆ ಶಿಕ್ಷಣ ಸಂಯೋಜಕ ಆರ್.ವೆಂಕಟರಾಮಪ್ಪ, ರೇಷ್ಮೆ ಸಹಾಯಕ ನಿರ್ದೇಶಕ ಡಾ. ಚಿನ್ನ ಕೈವಾರಮಯ್ಯ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭೆ ಮಾಜಿ ಸದಸ್ಯ ಮಹಮದ್ ಎಸ್ ನೂರುಲ್ಲಾ , ಪತ್ರಕರ್ತ ಗೋಪಾಲರೆಡ್ಡಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.