ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಆ.27 ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ತಿಳಿಸಿದರು.ಪತ್ರಕರ್ತರ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷಗಳ ನಿಲುವು ವಿರೋಧಿಸಿ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯದ ಮತದಾರರು ಬಿಜೆಪಿ ಸರ್ಕಾರವನ್ನು ತಿರಸ್ಕಾರ ಮಾಡಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಚುನಾವಣೆ ಮುನ್ನಾ ಮತದಾರರಿಗೆ ನೀಡಿದ ಆಶ್ವಾಸನೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಲ್ಲದ ಆರೋಪ ಹೊರೆಸಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಬಗ್ಗದ ಸಿದ್ದರಾಮಯ್ಯನವರ ವಿರುದ್ಧ ಮುಡಾ ಹಗರಣವನ್ನು ಮುಂದಿಟ್ಟುಕೊಂಡು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಸಫಲವಾಗದಿದ್ದಾಗ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡುವ ಕೆಲಸ ಮಾಡಿ ಅವರನ್ನು ಕಾನೂನಿನಲ್ಲಿ ಸಿಕ್ಕಿ ಹಾಕಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ದೂರಿದರು.ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ ವಾಪಸ್ಸು ಕರೆಯಿಸಿಕೊಳ್ಳುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ಪರವಾಗಿ ರಾಜ್ಯದ ಹಿಂದುಳಿದ, ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಇತರರು ಬೆಂಬಲವಾಗಿದ್ದಾರೆ. ಸಿದ್ದರಾಮಯ್ಯನವರು ಹೆದರುವ ಅವಶ್ಯಕತೆ ಇಲ್ಲ. ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರನ್ನು ಕಂಡು, ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ವಿರುದ್ಧ ಹುನ್ನಾರ ಮಾಡುತ್ತಿವೆ ಎಂದು ಕೃಷ್ಣಮೂರ್ತಿ ದೂರಿದರು.
ನಗರಾಭಿವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದರು ಅವರ ವಿರುದ್ಧ ಯಾವುದೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಕೋವಿಡ್ ಸಮಯದಲ್ಲಿ ಸರ್ಕಾರ ಖರೀದಿ ಮಾಡಿದ ಮಾಸ್ಕ್ ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಗರಣವಾಗಿದೆ. ಕೋವಿಡ್‌ನಲ್ಲಿ ಹಣ ದೋಚಿದವರೆಲ್ಲ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ನಿರಂಜನ ಮೂರ್ತಿ, ಎಚ್.ಮಂಜಪ್ಪ, ವಿಶ್ವಕರ್ಮ ಸಮಾಜದ ಪ್ರಸನ್ನ ಕುಮಾರ್, ಷಫಿವುಲ್ಲಾ, ಕೊರಚ ಸಮಾಜದ ಕೃಷ್ಣಪ್ಪ, ಬಿ.ಟಿ.ಜಗದೀಶ್, ಉಪ್ಪಾರ ಸಮಾಜದ ಮೂರ್ತಿ, ಜಾಕಿರ್ ಹುಸೇನ್, ಮಂಜುನಾಥ್, ಪ್ರಸನ್ನ ಇದ್ದರು.
ಬಿಜೆಪಿ-ಜೆಡಿಎಸ್‌ನ ತಾಳಕ್ಕೆಕುಣಿಯುತ್ತಿರುವ ರಾಜ್ಯಪಾಲರು
ದಸಂಸ ಮುಖಂಡ ಡಿ.ದುರುಗೇಶ್ ಮಾತನಾಡಿ, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ನವರ ಮೇಲೆ ಪ್ರಾಸಿಕ್ಯೊಷನ್‌ಗೆ ಅನುಮತಿ ನೀಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೋರಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿದ್ದಾರೆ. ಲೋಕಾಯುಕ್ತ, ಎಸ್ಐಟಿ ಮುಂತಾದ ತನಿಖಾ ಸಂಸ್ಥೆಗಳಲ್ಲಿ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ, ನಿರಾಣಿಯವರ ಭ್ರಷ್ಚಾಚಾರ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೆ ಸಿದ್ದರಾಮಯ್ಯನವರ ಮೇಲೆ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ಖಂಡನೀಯ ಎಂದರು.