ಸಾರಾಂಶ
ಶೋಕಮಾತಾ ಚರ್ಚಿನ ಆವೆ ಮರಿಯ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆ ಹಾಗೂ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿವಸದ ಪ್ರಯುಕ್ತ ಯುವ ಜನರಲ್ಲಿ ಕೊಂಕಣಿ ಭಾಷೆಯ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕೊಂಕಣಿ ಯುವ ಸಂಭ್ರಮ ‘ಕನಾಪ-2025’ ಕವಿತೆ, ನೃತ್ಯ ಹಾಗೂ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭ ನಡೆಯಿತು.
ಕೊಂಕಣಿ ಯುವ ಸಂಭ್ರಮ ‘ಕನಾಪ-2025’ ಕವಿತೆ, ನೃತ್ಯ ಹಾಗೂ ಗಾಯನ ಸ್ಪರ್ಧೆಕನ್ನಡಪ್ರಭ ವಾರ್ತೆ ಉಡುಪಿ
ಕೊಂಕಣಿ ಭಾಷೆಯನ್ನು ಮಾತನಾಡುವ ಮೂಲಕ ಕೊಂಕಣಿ ಸಾಹಿತ್ಯ ಮತ್ತು ಸಂಸ್ಕೃತಿ ಮತ್ತಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯವಿದೆ. ಭಾಷೆ ಮತ್ತು ಸಾಹಿತ್ಯಕ್ಕೆ ನಮ್ಮ ಪ್ರೀತಿ ಸದಾ ಇರಲಿ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.ಅವರು ಭಾನುವಾರ ನಗರದ ಶೋಕಮಾತಾ ಚರ್ಚಿನ ಆವೆ ಮರಿಯ ಸಭಾಂಗಣದಲ್ಲಿ ಕೊಂಕಣಿ ಸಾಹಿತ್ಯ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆ ಹಾಗೂ ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿವಸದ ಪ್ರಯುಕ್ತ ಯುವ ಜನರಲ್ಲಿ ಕೊಂಕಣಿ ಭಾಷೆಯ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕೊಂಕಣಿ ಯುವ ಸಂಭ್ರಮ ‘ಕನಾಪ-2025’ ಕವಿತೆ, ನೃತ್ಯ ಹಾಗೂ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಮುಖ್ಯ ಅತಿಥಿ ದಾಯ್ಜಿವರ್ಲ್ಡ್ ಮೀಡಿಯಾ ಮಂಗಳೂರು ಇದರ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ, ಯುವಜನರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವುದರಿಂದ ಸಮಾಜದಲ್ಲಿ ಉತ್ತಮ ನಾಯಕನಾಗಿ ಬೆಳೆಯಲು ಅವಕಾಶ ಲಭಿಸುತ್ತದೆ. ಪ್ರತಿಭೆಯ ಜೊತೆ ಉತ್ತಮ ಗುರಿ ಮತ್ತು ಉದ್ದೇಶಗಳನ್ನು ಕೂಡ ಹೊಂದಿರಬೇಕು ಎಂದರು.ಕಾರ್ಯಕ್ರಮವನ್ನು ಶೋಕಮಾತಾ ಚರ್ಚಿನ ಪ್ರಧಾನ ಧರ್ಮಗುರುಗಳಾದ ಚಾರ್ಲ್ಸ್ ಮಿನೇಜಸ್, ಜಾನಪದ ವಾದ್ಯ ಗುಮಾಟ್ ಬಡಿದು ಚಾಲನೆ ನೀಡಿ, ನಮ್ಮ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿ ವೈವಿಧ್ಯಮಯವಾಗಿದ್ದು, ಅದನ್ನು ಹೊಂದಿರುವ ನಾವು ಧನ್ಯರು. ಯುವ ಜನತೆಗೆ ಇದರ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಕೊಂಕಣಿಯ ಸಂಪ್ರದಾಯದ ಅರಿವು ಮೂಡಿಸಲು ಕನಾಪ - 2025 ಹೆಚ್ಚು ಸಹಕಾರಿಯಾಗಿದೆ ಎಂದರು.ಕೊಂಕಣಿ ಸಾಹಿತ್ಯ ಕಲೆ ಹಾಗೂ ಸಾಂಸ್ಕೃತಿಕ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷ ಡಾ. ಫ್ಲಾವಿಯಾ ಕ್ಯಾಸ್ಟಲಿನೊ, ಕಾರ್ಯದರ್ಶಿ ರಿತೇಶ್ ಡಿಸೋಜಾ, ಕೋಶಾಧಿಕಾರಿ ಆಲ್ಫೋನ್ಸ್ ಡಿಕೋಸ್ತಾ, ಸ್ಥಾಪಕ ಅಧ್ಯಕ್ಷ ಡಾ. ಜೆರಾಲ್ಡ್ ಪಿಂಟೊ, ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ಸ್ಟೀವನ್ ಫರ್ನಾಂಡಿಸ್, ಭಾರತೀಯ ಕೆಥೊಲಿಕ್ ಯುವ ಸಂಚಾಲದ ಅಧ್ಯಕ್ಷ ನಿತಿನ್ ಬಾರೆಟ್ಟೊ, ವೈಸಿಎಸ್ ಅಧ್ಯಕ್ಷ ರಿಯಾನ್ ಟೆಲ್ಲಿಸ್ ಉಪಸ್ಥಿತರಿದ್ದರು.ಇದೇ ವೇಳೆ ಕೊಂಕಣಿ ಭಾಷೆಯಲ್ಲಿ ವಿಶೇಷ ಸಾಧನೆ ತೋರಿದ ಉಡುಪಿ ಶೋಕಮಾತಾ ದೇವಾಲಯದ ರೀವನ್ ಡಾಯಸ್ ಅವರನ್ನು ಸನ್ಮಾನಿಸಲಾಯಿತು.ಸಮಾರೋಪ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಕೊಂಕಣಿ ಸಂಗೀತ, ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜ, ವಿಶ್ವ ಕೊಂಕಣಿ ಕಲಾರತ್ನ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝಾರಿಯೊ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶೋಕಮಾತಾ ದೇವಾಲಯ ಉಡುಪಿ, ದ್ವಿತೀಯ ಬಹುಮಾನವನ್ನು ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್ ಉದ್ಯಾವರ, ತೃತೀಯ ಬಹುಮಾನವನ್ನು ಸಂತ ತೆರೆಸಾ ಚರ್ಚ್ ಕೆಮ್ಮಣ್ಣು ಪಡೆಯಿತು. ಉತ್ತಮ ಕಾರ್ಯನಿರ್ವಹಣೆಯ ಬಹುಮಾನ ಲೂರ್ಡ್ಸ್ ದೇವಾಲಯ ಕಣಜಾರು ಪಡೆಯಿತು.ಕಾರ್ಯಕ್ರಮದಲ್ಲಿ ಮೆಕ್ಲಿನ್, ಲಿಶಾ ಸ್ವಾಗತಿಸಿದರು. ವೆನಿಸಾ, ಜೊಯ್ಸ್ ವಂದಿಸಿದರು. ಜೋಸ್ವಿನ್ ಆರಾನ್ಹಾ, ಎಡ್ರೋಯ್ ನಝರೆತ್ ಕಾರ್ಯಕ್ರಮ ನಿರೂಪಿಸಿದರು.