ಪೊಲಿಯೋ ಮುಕ್ತ ಭಾರತ ಕಾಯ್ದುಕೊಳ್ಳೋಣ: ದಿನೇಶ್‌ ಗುಂಡೂರಾವ್‌

| Published : Mar 04 2024, 01:18 AM IST / Updated: Mar 04 2024, 11:32 AM IST

ಸಾರಾಂಶ

ಬೆಂಗಳೂರಿನಲ್ಲಿ ಪೋಲಿಯೋ ಲಸಿಕೆಗೆ ಚಾಲನೆ ನೀಡಿದ ಸಚಿವ ದಿನೇಶ್‌ ಗುಂಡೂರಾವ್‌ ವರು, ಪೋಲಿಯೋ ಮುಕ್ತ ಭಾರತವನ್ನು ಕಾಪಾಡಿಕೊಳ್ಳೋಣ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತ ಪೊಲಿಯೋ ಮುಕ್ತ ದೇಶವೆಂದು ಘೋಷಣೆಯಾಗಿ 12 ವರ್ಷಗಳಾಗಿದ್ದು, ಮುಂದಿನ ದಿನಗಳಲ್ಲೂ ಅದನ್ನು ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಭಾನುವಾರ ಬಿಬಿಎಂಪಿಯ ಕೋದಂಡರಾಮಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಯುಪಿಎಚ್‌ಸಿ) ಮಗುವಿಗೆ ಲಸಿಕೆ ಹಾಕುವ ಮೂಲಕ ಪೊಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾರ್ಚ್‌ 6ರವರೆಗೆ ನಡೆಯಲಿರುವ ಅಭಿಯಾನದಲ್ಲಿ 5 ವರ್ಷದವರೆಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು. ಈ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಸೇರಿದಂತೆ ಇತರೆ ಸಂಸ್ಥೆಗಳು ಜಾಗೃತಿ ಮೂಡಿಸಲಿವೆ ಎಂದರು.

ರಾಜ್ಯಾದ್ಯಂತ 62.50 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಂಡಿದ್ದೇವೆ. ಬೆಂಗಳೂರು ನಗರ ಒಂದರಲ್ಲೇ 11 ಲಕ್ಷ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವ ಗುರಿ ಇದೆ. ರಾಜ್ಯಾದ್ಯಂತ ಈ ಅಭಿಯಾನ ನಡೆಯುತ್ತಿದ್ದು, ಮಕ್ಕಳಿಗೆ ತಪ್ಪದೆ ಲಸಿಕಾ ಕೇಂದ್ರಕ್ಕೆ ಕರೆತಂದು ಪೊಲಿಯೋ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.

ರಾಷ್ಟ್ರೀಯ ಆರೋಗ್ಯ ಮಿಷನ್‌ ನಿರ್ದೇಶಕ ನವೀನ್‌ ಭಟ್‌ ಮಾತನಾಡಿ, ವೈಲ್ಡ್‌ ಪೊಲಿಯೋ ವೈರಸ್‌ ಹರಡುವಿಕೆಯು ಇಂದಿಗೂ ಜಗತ್ತಿನಾದ್ಯಂತ ಮಕ್ಕಳನ್ನು ಬಾಧಿಸುತ್ತಿವೆ. ಇದರಲ್ಲಿ ಭಾರತದ ನೆರೆಯ ರಾಷ್ಟ್ರಗಳೂ ಸೇರಿಸುವುದು ಆತಂಕಕಾರಿಯಾಗಿದೆ. ಹಾಗಾಗಿ ಪೊಲಿಯೋ ನಿರ್ಮೂಲನೆ ಸ್ಥಿತಿಯನ್ನು ಭಾರತ ಕಾಯ್ದುಕೊಳ್ಳಬೇಕಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿಸುವುದನ್ನು ಮರೆಯಬಾರದು ಎಂದು ಹೇಳಿದರು.

ಸೋಮವಾರದಿಂದ ಮನೆಗಳಿಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ವಲಸಿಗ ಸಮುದಾಯದ, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಹಾಗೂ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಶೇ.94ರಷ್ಟು ಗುರಿ ಸಾಧನೆಬಿಬಿಎಂಪಿ ಎಂಟು ವಲಯಗಳಲ್ಲಿ ನಡೆದ ಪಲ್ಸ್‌ ಪೊಲಿಯೋ ಅಭಿಯಾನದಲ್ಲಿ ಶೇಕಡ 94.33ರಷ್ಟು ಲಸಿಕೆ ಹಾಕಲಾಗಿದೆ.ಪಾಲಿಕೆಯ ವ್ಯಾಪ್ತಿಯಲ್ಲಿ 11,13,617 ಮಕ್ಕಳಿದ್ದು, ಈ ಪೈಕಿ 10,50,348 ಮಂದಿ 5 ವರ್ಷದವರೆಗಿನ ಮಕ್ಕಳು ಲಸಿಕೆ ಪಡೆದಿದ್ದಾರೆ.

ಎಂಟು ವಲಯಗಳಲ್ಲಿ ದಕ್ಷಿಣ 1,72,572 (ಶೇ.92), ಪೂರ್ವ 2,23,796 (ಶೇ.95), ಪಶ್ಚಿಮ 1,54,728 (ಶೇ.92.8), ಬೊಮ್ಮನಹಳ್ಳಿ 1,26,969 (ಶೇ.96.1), ಮಹದೇವಪುರ 1,64,166 (ಶೇ.95.4), ಯಲಹಂಕ 69,308 (ಶೇ 93.9), ದಾಸರಹಳ್ಳಿ 43,265 (ಶೇ.97) ಮತ್ತು ರಾಜರಾಜೇಶ್ವರಿ ನಗರ 95545 (ಶೇ 94.5) ಮಕ್ಕಳು ಲಸಿಕೆ ಪಡೆದುಕೊಂಡಿದ್ಧಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.