ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ವಿ. ತೇಜಸ್ವಿನಿ ಅವರು ಸಮಾಜ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಹಾಸ್ಟೆಲ್ ಗಳಲ್ಲಿ 5 ರಿಂದ ಎಂ.ಎ. ವರೆಗೂ 13 ವರ್ಷ ಆಶ್ರಯ ಪಡೆದು ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡಿದ್ದಾರೆ.ಮೈಸೂರು ವಿವಿ 104ನೇ ಘಟಿಕೋತ್ಸವದಲ್ಲಿ ಕನ್ನಡ ಎಂ.ಎ ನಲ್ಲಿ 10 ಚಿನ್ನದ ಪದಕ, 4 ನಗದು ಬಹುಮಾನ ಪಡೆದು ಸಾಧಿಸಿರುವ ವಿ. ತೇಜಸ್ವಿನಿ ಅವರು, ಮುಂದೆಯೂ ಪಿಎಚ್.ಡಿ ಮಾಡುವುದರ ಜೊತೆಗೆ ಬೋಧನೆ ಮಾಡಿಕೊಂಡು, ಐಎಎಸ್, ಕೆಎಎಸ್ ಅಧಿಕಾರಿ ಆಗುವವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಸತ್ತೇಗಾಲ ಗ್ರಾಮದ ತೇಜಸ್ವಿನಿ ಅವರ ಚಿಕ್ಕವಯಸ್ಸಿನಲ್ಲೇ ತಂದೆ ವೆಂಕಟೇಶ್ ಮತ್ತು ತಾಯಿ ನಾಗಮ್ಮ ಅವರನ್ನು ಕಳೆದುಕೊಂಡಿದ್ದಾರೆ.4ನೇ ತರಗತಿ ಓದುವಾಗ ತಾಯಿ, ದ್ವಿತೀಯ ಪಿಯುಸಿ ಓದುವಾಗ ತಂದೆಯನ್ನು ಕಳೆದುಕೊಂಡಿದ್ದ ತೇಜಸ್ವಿನಿ, ಅವರ ಅಕ್ಕ ಮತ್ತು ತಮ್ಮ ಸೇರಿದಂತೆ ಮೂವರು ಅತ್ತೆ ಮನೆಯಲ್ಲಿ ಆಶ್ರಯ ಪಡೆದರು. ಬಳಿಕ ತೇಜಸ್ವಿನಿ ತಲಕಾಡಿನಲ್ಲಿ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಾಗೂ ಮಳವಳ್ಳಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪಿಯುಸಿಯನ್ನು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಇದ್ದುಕೊಂಡು ಪೂರೈಸಿದರು.
ನಂತರ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಬಿಎಗೆ ಪ್ರವೇಶ ಪಡೆದ ತೇಜಸ್ವಿನಿ ಬಿಸಿಎಂ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದರು. ಬಿಎನಲ್ಲಿ 9 ಚಿನ್ನದ ಪದಕ, 10 ನಗದು ಬಹುಮಾನ ಪಡೆದಿದ್ದರು. ಬಳಿಕ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಕನ್ನಡ ಪ್ರವೇಶ ಪಡೆದ ತೇಜಸ್ವಿನಿ, ಬಿಸಿಎಂ ಹಾಸ್ಟೆಲ್ ನಲ್ಲಿ ಆಶ್ರಯ ಪಡೆದಿದ್ದರು. ಹೀಗೆ, ಕಳೆದ 13 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಹಾಸ್ಟೆಲ್ ಗಳಲ್ಲಿ ಆಶ್ರಯ ಪಡೆದು, ಉನ್ನತ ಶಿಕ್ಷಣವನ್ನು ಪೂರೈಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಂಡು ಉನ್ನತ ಶಿಕ್ಷಣವನ್ನು ಪಡೆದುಕೊಂಡಿದ್ದೇನೆ. ಹೆತ್ತವರನ್ನು ಕಳೆದುಕೊಂಡಿದ್ದರೂ ನಮ್ಮ ಅತ್ತೆ ಸೇರಿದಂತೆ ದಾನಿಗಳು ಸಹಾಯ ಮಾಡಿದ್ದಾರೆ. ಮುಂದೆ ಸಂಶೋಧನೆ, ಐಎಎಸ್, ಕೆಎಎಸ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಮತ್ತಷ್ಟು ಸಾಧನೆ ಮಾಡುವ ಅಭಿಲಾಷೆ ಹೊಂದಿದ್ದೇನೆ ಎನ್ನುತ್ತಾರೆ ತೇಜಸ್ವಿನಿ.
----16 ಚಿನ್ನ ಬಾಚಿದ ಪೂಜಾ
ಮೈಸೂರು ವಿವಿ 104ನೇ ಘಟಿಕೋತ್ಸವದಲ್ಲಿ ಎಂ.ಟೆಕ್ ಯುಆರ್ ಪಿ ವಿಭಾಗದಲ್ಲಿ ಎನ್. ಪೂಜಾ ಅವರು 16 ಚಿನ್ನದ ಪದಕವನ್ನು ಪಡೆದರು. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಪೂಜಾ ಅವರ ತಂದೆ ತಾಯಿ ಮೋಹನ್ ಕುಮಾರ್ ಮತ್ತು ನಾಗವೇಣಿ ಮೈಸೂರಿನ ಸರ್ದಾರ್ ವಲ್ಲಭಾಯಿ ಪಟೇಲ್ ನಗರದಲ್ಲಿ ವಾಸವಾಗಿದ್ದಾರೆ. ದಿನಕ್ಕೆ 4- 5 ಗಂಟೆ ಓದುತ್ತಿದ್ದೆ, ಕಷ್ಟಪಟ್ಟು ಓದಿದರಿಂದಲೇ ಯಶಸ್ಸು ಸಾಧ್ಯವಾಗಿದೆ. ಮುಂದೆ ಪಿಎಚ್.ಡಿ ಜೊತೆಗೆ ನಗರಾಭಿವೃದ್ಧಿ ಸಂಬಂಧಪಟ್ಟಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧವಾಗಿದ್ದಾರೆ.ಹಾಗೆಯೇ, ಇನ್ನೂ ಎಂ.ಎಸ್ಸಿ ಅಜೈವಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಎಚ್.ಎಲ್. ಮೇಘಾನ ಅವರು 15 ಚಿನ್ನದ ಪದಕ, 5 ನಗದು ಬಹುಮಾನ ಪಡೆದು ಗಮನ ಸೆಳೆದರು.
----ಅರ್ಥಶಾಸ್ತ್ರದಲ್ಲಿ ಜೈನಾಗೆ 8 ಚಿನ್ನ
ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಎಂ.ಎ ಅರ್ಥಶಾಸ್ತ್ರ ಓದಿದ ಜೈನಾ ಎಂ. ಹರನ್ ಅವರು 8 ಚಿನ್ನದ ಪದಕ, 3 ನಗದು ಬಹುಮಾನ ಪಡೆದರು. ಅಭಿವೃದ್ಧಿ ಕ್ಷೇತ್ರ, ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಜೈನಾ ಅವರು, ಮುಂದೆ ಐಎಎಸ್, ಐಇಎಸ್ ಪರೀಕ್ಷೆ ಎದುರಿಸುವ ಆಸೆ ಹೊಂದಿದ್ದಾರೆ.----
ಅನಘಾ ಅಂಧತ್ವ ಮೀರಿದ ಸಾಧನೆ- ಪ್ರೊ.ಉಷಾರಾಣಿ ನಾರಾಯಣ ಸೌಮ್ಯನಾಯಕಿ ಚಿನ್ನದ ಪದಕ
----ಹುಟ್ಟಿನಿಂದಲೇ ಅಂಧೆಯಾದ ಎಸ್. ಅನಘಾ ಅವರು ಕನ್ನಡ ಎಂ.ಎ ಪದವಿಯಲ್ಲಿ ಪ್ರೊ.ಉಷಾರಾಣಿ ನಾರಾಯಣ ಸೌಮ್ಯನಾಯಕಿ ಚಿನ್ನದ ಪದಕ ಪಡೆದಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗುವ ಅಂಧ ವಿದ್ಯಾರ್ಥಿನಿಗೆ ಈ ಪದಕವನ್ನು ಪ್ರೊ.ಎನ್. ಉಷಾರಾಣಿ ಅವರು ಸ್ಥಾಪಿಸಿದ್ದಾರೆ. ಪ್ರೊ.ಉಷಾರಾಣಿ ಅವರು ಮಾನಸ ಗಂಗೋತ್ರಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕರು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ಪರೀಕ್ಷೆಯನ್ನು ಪಾಸ್ ಮಾಡಿರುವ ಅನಘಾ, ವಿದ್ವತ್ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅನಿವಾಸಿ ಭಾರತೀಯರಿಗೆ ಆನ್ ಲೈನ್ ನಲ್ಲಿ ಸಂಗೀತ ಪಾಠವನ್ನು ಮಾಡುತ್ತಾರೆ. ಇವರಿಗೆ ಹೆತ್ತವರಾದ ಪುಷ್ಪಲತಾ ಮತ್ತು ಕೆ. ಸತೀಶ್ ಆತ್ಮವಿಶ್ವಾಸ ತುಂಬಿದ್ದಾರೆ. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆಯನ್ನು ಅನಘಾ ಹೊಂದಿದ್ದಾರೆ.ಕಣ್ಣುಗಳಿಲ್ಲದಿರುವುದು ಬದುಕಿನ ತೊಡಕಲ್ಲ. ಇತರ ಇಂದ್ರಿಯಗಳ ಸಾಮರ್ಥ್ಯ ಹೆಚ್ಚೇ ಇರುತ್ತದೆ. ಸ್ವಾವಲಂಬಿಯಾಗಿ ಬದುಕಲು ಶಿಕ್ಷಣ ಪಡೆಯಬೇಕು. ಹೀಗಾಗಿಯೇ ಸಂಗೀತ– ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವ, ಕಲಿಯುವ ಆಸೆಯಿದೆ. ಪಿಎಚ್.ಡಿ ಮಾಡಿ ಉಪನ್ಯಾಸಕಿಯಾಗುವೆ ಎಂದು ಅನಘಾ ವಿಶ್ವಾಸದಿಂದ ಹೇಳಿದರು.