ಭಿನ್ನಾಭಿಪ್ರಾಯ ಬಿಟ್ಟು ಸಮಾಜ ಸಂಘಟನೆಗೆ ಮುಂದಾಗಲಿ: ಶಾಸಕ ಸಿ.ಸಿ. ಪಾಟೀಲ

| Published : Nov 15 2025, 02:15 AM IST

ಭಿನ್ನಾಭಿಪ್ರಾಯ ಬಿಟ್ಟು ಸಮಾಜ ಸಂಘಟನೆಗೆ ಮುಂದಾಗಲಿ: ಶಾಸಕ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯನ್ನೇ ನಂಬಿಕೊಂಡಿರುವ ಪಂಚಮಸಾಲಿ ಸಮಾಜದ ಸಂಘಟನೆಗೆ ಸಮರ್ಪಣಾ ಭಾವದಿಂದ ಮುಂದಾಗಬೇಕು. ೨ಎ ಮೀಸಲಾತಿ ಹೋರಾಟ ನಿಲ್ಲಬಾರದು.

ಶಿರಹಟ್ಟಿ: ಸಮಾಜದಲ್ಲಿ ಭಿನ್ನಾಭಿಪ್ರಾಯ ಸಹಜ. ಅದೆಲ್ಲವನ್ನೂ ಬಿಟ್ಟು ಸಮಾಜ ಕಟ್ಟುವುದು ಅಗತ್ಯ. ಪಂಚಮಸಾಲಿ ಸಮಾಜವನ್ನು ಸದೃಢವಾಗಿ, ಮತ್ತಷ್ಟು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ತರುವಂತಹ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಶುಕ್ರವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಬೃಹತ್ ಸಮಾವೇಶ, ಕಿತ್ತೂರು ರಾಣಿ ಚೆನ್ನಮ್ಮನ ೨೦೧ನೇ ವಿಜಯೋತ್ಸವ ಹಾಗೂ ೨೪೭ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಯನ್ನೇ ನಂಬಿಕೊಂಡಿರುವ ಪಂಚಮಸಾಲಿ ಸಮಾಜದ ಸಂಘಟನೆಗೆ ಸಮರ್ಪಣಾ ಭಾವದಿಂದ ಮುಂದಾಗಬೇಕು. ೨ಎ ಮೀಸಲಾತಿ ಹೋರಾಟ ನಿಲ್ಲಬಾರದು. ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಬೇಕೆಂದು ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಬೇಕು. ಪಂಚಮಸಾಲಿ ಸಮಾಜ ಯಾರಿಗೂ ಎಂದಿಗೂ ಕೇಡು ಬಯಸಿಲ್ಲ. ಸಮಾಜದ ಬಲವರ್ಧನೆಗೆ ಗುರು, ಹಿರಿಯರ ಆಶೀವಾದ ಮುಖ್ಯ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ. ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮನ ಧೈರ್ಯ, ಸಾಹಸ ಎಲ್ಲರಿಗೂ ಸ್ಫೂರ್ತಿ. ಸ್ವಾಭಿಮಾನ ಬಿಟ್ಟುಕೊಡದೇ ಬ್ರಿಟಿಷರ ಸರ್ಕಾರದ ವಿರುದ್ಧ ಸಿಡಿದೆದ್ದು ನಿಂತ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೋರಾಟ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಪಟ್ಟಣದಲ್ಲಿ ನಿರ್ಮಾಣ ಮಾಡುವ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ₹1 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಹರಿಹರ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಕೂಡಲ ಸಂಗಮ ಮತ್ತು ಹರಿಹರ ಪೀಠದ ಜಗದ್ಗುರುಗಳು ಒಂದಾಗಿದ್ದೇವೆ. ಭಕ್ತರು ದ್ವೇಷ ಬಿಟ್ಟು ಪ್ರೀತಿಯಿಂದ ಪಂಚಮಸಾಲಿ ಸಮಾಜದವರು ಸಮಾಜ ಸಂಘಟನೆಗೆ ಮುಂದಾಗಬೇಕು. ಸ್ತ್ರೀಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಬಹುದು ಎಂಬುದಕ್ಕೆ ಚೆನ್ನಮ್ಮನೇ ಪ್ರೇರಣೆ. ಹೀಗಾಗಿ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.

ಫಕೀರ ಸಿದ್ದರಾಮ ಶ್ರೀಗಳು ಆಶೀರ್ವಚನ ನೀಡಿದರು. ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ತುಳಿ ಪ್ರಾಸ್ತಾವಿಕ ಮಾತನಾಡಿದರು. ಸೋಮನಗೌಡ ಮಾಲಿಪಾಟೀಲ, ಅಶೋಕ ಪಲ್ಲೇದ, ವಿ.ವಿ. ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಡಾ. ಪ್ರಕಾಶ ಹೊಸಮನಿ, ಸಿ.ಸಿ. ನೂರಶೆಟ್ಟರ, ಸೋಮಣ್ಣ ಡಾಣಗಲ್ಲ, ಈರಣ್ಣ ಕರಿಬಿಷ್ಠಿ, ಎಸ್.ವಿ. ಪಲ್ಲೇದ, ಶರಣು ಪಾಟೀಲ, ವೀರನಗೌಡ ಪಾಟೀಲ, ಎಸ್.ಬಿ. ಹೊಸೂರ, ಯಲ್ಲಪ್ಪ ಇಂಗಳಗಿ, ಬಸವರಾಜ ಚಿಕ್ಕತೋಟದ, ಬಸವರಾಜ ವಡವಿ, ಮುತ್ತು ಭಾವಿಮನಿ, ಸಂದೀಪ ಕಪ್ಪತ್ತನವರ, ತಿಮ್ಮರಡ್ಡಿ ಮರಡ್ಡಿ, ಕರಬಸಪ್ಪ ಹಂಚನಾಳ, ಎಂ.ಪಿ. ಹಣಜಿ, ಮಂಜುನಾಥ ಮಗಡಿ, ಬಸವಣ್ಣೆಪ್ಪ ತುಳಿ ಇತರರು ಇದ್ದರು.