ಹಾನಗಲ್ಲ: ಬದುಕಿನಲ್ಲಿ ಶರಣರ ತತ್ವಗಳನ್ನು ಅನುಸರಿಸಿಕೊಂಡು ಬದುಕಿದರೆ ಅದು ವೈಯಕ್ತಿಕ ಹಾಗೂ ಸಾಮಾಜಿಕ ಸೌಖ್ಯಕ್ಕೆ ದಾರಿಯಾಗುತ್ತದೆ ಎಂದು ಮಾಜಿ ಸೈನಿಕ ಶಂಭಣ್ಣ ಇಂಗಳಕಿ ತಿಳಿಸಿದರು.

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸೇವೆಯಲ್ಲಿ ಅತ್ಯುಚ್ಛವಾದ ಸೇವೆ ಎಂದರೆ ಅದು ಸೈನಿಕ ಸೇವೆ. ದೇಶ ಭಕ್ತಿ ಎಲ್ಲರ ಮೊದಲ ಆದ್ಯತೆಯಾಗಬೇಕು. ಶರಣರ ಸತ್ಯ ಸಂದೇಶಗಳಲ್ಲಿಯೂ ನಮ್ಮ ನಾಡು ನುಡಿ ಸಂಸ್ಕೃತಿಯ ಪ್ರತಿಬಿಂಬವೇ ಇದೆ. ನಾವು ಎಲ್ಲರಿಗಾಗಿ, ಎಲ್ಲರೂ ನಮಗಾಗಿ ಎಂಬ ಚಿಂತನೆಯನ್ನು ಬಿತ್ತಿ ಬೆಳೆಯಲು ಒತ್ತು ನೀಡೋಣ. ಶರಣರ ತತ್ವಗಳೆಂದರೆ ಅದು ಅಂತರಂಗ ಬಹಿರಂಗಗಳ ಶುದ್ಧತೆಯ ಸಾತ್ವಿಕ ಸಂದೇಶಗಳು ಎಂದರು.

ಪ್ರಾಚಾರ್ಯ ಚಿರಂಜೀವಿ ಆಡೂರ ಮುಖ್ಯ ಅತಿಥಿಯಾಗಿ ಮಾತನಾಡಿ, ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಜಾತಿ ಮತ ಪಂಥದ ಮೇರೆ ಮೀರಿ ಎಲ್ಲರೂ ಒಂದೇ ಎಂಬ ತತ್ವ ಸಿದ್ಧಾಂತದಲ್ಲಿ ಬದುಕಿದರು. ಮೇಲು ಕೀಳೆಂಬುದು ನಮ್ಮ ಕೃತ್ಯದ ಮೂಲಕ ಬರುವಂತಹದ್ದು, ಅದು ಹುಟ್ಟಿನ ಮೂಲಕ ಅಲ್ಲ. ಎಲ್ಲರೂ ಮನುಷ್ಯರೇ ಮನುಷ್ಯ ಧರ್ಮವೇ ಜೀವನಾಧಾರ. ಆದರೆ ಮೌಢ್ಯವನ್ನು ಬೆನ್ನಟ್ಟಿದ ಮನುಷ್ಯ ಚಾತುರ್ವರ್ಣಗಳನ್ನು ಪಾಲಿಸುವ ನೆಪದಲ್ಲಿ ಮೇಲು ಕೀಳು ಹುಟ್ಟು ಹಾಕಿದ್ದಾರೆ. ಹಡಪದ ಅಪ್ಪಣ್ಣನಂತಹವರಿಗೆ ಸಮಾನ ಅವಕಾಶ ನೀಡಿದ ಬಸವಣ್ಣನವರ ಚಿಂತನೆಗಳು ಎಲ್ಲರ ಮನಸ್ಸಿಗೆ ಮುಟ್ಟುವಂತಹವುಗಳು. ಹಡಪದ ಅಪ್ಪಣ್ಣನವರು ತಮ್ಮ ಕಾಯಕದ ಜೊತೆಗೆ ಆಯುರ್ವೇದವನ್ನೂ ಬಲ್ಲವರಾಗಿದ್ದರು. ಇಂತಹ ಶರಣರ ಜೀವನ ಸಂದೇಶಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರತಿ ಮನೆಗೆ ವಚನಗಳು ತಲುಪುವಂತೆ ಪ್ರಾಮಾಣಿಕ ಪ್ರಯತ್ನ ಬೇಕಾಗಿದೆ. ಅತ್ಯಂತ ಸರಳ ಶುಚಿ ಸಂದೇಶಗಳನ್ನು ನೀಡುವ ವಚನಗಳ ಪ್ರಸಾರವೆಂದರೆ ಅದು ನಮ್ಮ ಮನಸ್ಸು ಬುದ್ಧಿ ವಿವೇಕಗಳನ್ನು ಶುಚಿಯಾಗಿಸುವುದೇ ಎಂದರ್ಥ ಎಂದರು.

ಇದೇ ಸಂದರ್ಭದಲ್ಲಿ ಭಾರತೀಯ ಅಂಗಾಂಗ ದಿನದ ಅಂಗವಾಗಿ ಕಾಡಶೆಟ್ಟಿಹಳ್ಳಿಯ ಭೀಮೇಶ ಕೋತಂಬರಿ ಅವರು ತಮ್ಮ ದೇಹವನ್ನು ಮರಣಾನಂತರ ಹುಬ್ಬಳ್ಳಿಯ ಎಸ್‌ಡಿಎಂ ಕಾಲೇಜಿಗೆ ದಾನವಾಗಿ ನೀಡಲು ಘೋಷಿಸಿದ್ದರಿಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಕಾರ್ಯದರ್ಶಿ ಸುಭಾಸ ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀದೇವಿ ಕೋಟಿ, ರಾಮಣ್ಣ ಸುಗಂಧಿ, ಸುಮಂಗಲಾ ಕಟ್ಟಿಮಠ, ನೀಲಮ್ಮ ಆಲದಕಟ್ಟಿ, ಉಮಾ ಕಟ್ಟಿಮಠ ಪಾಲ್ಗೊಂಡಿದ್ದರು. ಶುಂಭುಲಿಂಗಯ್ಯ ಹೇಮಗಿರಿಮಠ ಹಾಗೂ ಅಕ್ಕಮ್ಮ ಶೆಟ್ಟರ ವಚನ ಗಾಯನ ಮಾಡಿದರು. ಸುವರ್ಣಾ ಹಿರೇಗೌಡರ ಸ್ವಾಗತಿಸಿದರು. ಅಶೋಕ ದಾಸರ ವಂದಿಸಿದರು.