ವಿಜಯನಗರ ಗತ ವೈಭವದ ಮಾದರಿ ಕರ್ನಾಟಕ ಕಟ್ಟೋಣ

| Published : Feb 03 2024, 01:48 AM IST

ಸಾರಾಂಶ

ನಮ್ಮ ಸರ್ಕಾರ ಯುರೋಪ್ ಮಾದರಿಯಲ್ಲಿ ಪ್ರತಿ ನಾಗರಿಕರಿಗೆ ಕನಿಷ್ಠ ಆದಾಯ ದೊರಕುವಂತೆ ಮಾಡಲು ಯೋಜನೆ ರೂಪಿಸಿದೆ. ಇಂದು ನಾವು ನೀಡುತ್ತಿರುವ ಐದು ಗ್ಯಾರಂಟಿಗಳ ಗುರಿ ಇದೇ ಆಗಿದೆ

ಕೃಷ್ಣ ಎನ್‌. ಲಮಾಣಿ ಹಂಪಿ (ಗಾಯತ್ರಿಪೀಠ ವೇದಿಕೆ)

ವಿಜಯನಗರ ಸಾಮ್ರಾಜ್ಯದ ಗತವೈಭವದ ಮಾದರಿಯಲ್ಲಿ ಕರ್ನಾಟಕ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ. ಕರ್ನಾಟಕದ ಮಾದರಿಯಲ್ಲೇ ನಾವು ರಾಜ್ಯ ನಿರ್ಮಾಣ ಮಾಡುತ್ತೇವೆ. ಇಡೀ ದೇಶಕ್ಕೆ ರಾಜ್ಯ ಮಾದರಿಯಾಗಬೇಕು. ನಮಗೆ ಬೇರೆ ಮಾದರಿ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಂಪಿಯ ಗಾಯತ್ರಿ ಪೀಠದಲ್ಲಿ ಶುಕ್ರವಾರ ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಅವರು, ವಿಜಯನಗರ ಅರಸರ ಕಾಲದಲ್ಲಿ ಈ ಸಾಮ್ರಾಜ್ಯ ಅತ್ಯಂತ ಸುಭೀಕ್ಷವಾಗಿತ್ತು. ಎಲ್ಲರೂ ಸುಖವಾಗಿ ಇದ್ದರು. ಅಂತಹ ಸಮೃದ್ಧತೆಯನ್ನು ಮತ್ತೆ ನಮ್ಮ ರಾಜ್ಯದಲ್ಲಿ ಕಾಣುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಇಡೀ ದೇಶಕ್ಕೆ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುತ್ತೇವೆ ಎಂದರು.

ಯಾರೇ ಆಗಲಿ ಮೊದಲು ಇತಿಹಾಸವನ್ನು ತಿಳಿಯಬೇಕು. ಒಂದು ವೇಳೆ ಇತಿಹಾಸ ಅರಿಯದೇ ಹೋದರೆ ಕೇಂದ್ರದಲ್ಲಿರುವ ಕೋಮುವಾದಿ ಪಕ್ಷದ ಮುಖಂಡರು ಹೇಳುವುದನ್ನೇ ಸತ್ಯ ಎಂದು ಅರಿಯಬೇಕಾದ ಸ್ಥಿತಿ ಬರಲಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಹ ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರ ಎಂದು ತಿಳಿಸಿದ್ದರು. ನಾವೆಲ್ಲಾ ಅವರ ಮಾತನ್ನು ಅರಿತು ನಿಜ ಇತಿಹಾಸ ಅರಿಯಬೇಕು. ಆಗಲೇ ಭವಿಷ್ಯ ರೂಪಿಸಲು ಸಾಧ್ಯ ಎಂದರು.

ನಮ್ಮ ಸರ್ಕಾರ ಯುರೋಪ್ ಮಾದರಿಯಲ್ಲಿ ಪ್ರತಿ ನಾಗರಿಕರಿಗೆ ಕನಿಷ್ಠ ಆದಾಯ ದೊರಕುವಂತೆ ಮಾಡಲು ಯೋಜನೆ ರೂಪಿಸಿದೆ. ಇಂದು ನಾವು ನೀಡುತ್ತಿರುವ ಐದು ಗ್ಯಾರಂಟಿಗಳ ಗುರಿ ಇದೇ ಆಗಿದೆ. ಇದರ ಮೂಲಕ ಯುನಿವರ್ಸಲ್ ಮಿನಿಮಮ್ಮ ಇನ್‌ಕಂ ಎಂಬ ಯುರೋಪ್‌ ನಾಡಲ್ಲಿ ಇರುವ ಪದ್ಧತಿಯನ್ನು ಇಲ್ಲಿಗೆ ತಂದಿದ್ದೇವೆ ಎಂದರು.

ಮೋದಿ ಗ್ಯಾರಂಟಿ ಕಾಪಿ: ನಾನು ಗ್ಯಾರಂಟಿಗಳನ್ನು ಘೋಷಿಸಿದಾಗ ಎಲ್ಲರೂ ನನ್ನನ್ನು ಟೀಕಿಸಿದರು. ಇವೆಲ್ಲಾ ಸಾಧ್ಯವೇ ಎಂದು ಪ್ರಶ್ನಿಸಿದರು. ಆದರೆ, ಈಗ ನಮ್ಮದನ್ನೇ ಕಾಪಿ ಮಾಡುತ್ತಿದ್ದಾರೆ. ಅದನ್ನೇ ಮೋದಿ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ನಾವು ಬೇರೆಯವರನ್ನು ಕಾಪಿ ಮಾಡುವುದಿಲ್ಲ. ನಮ್ಮನ್ನು ಬೇರೆಯವರು ಅನುಕರಣೆ ಮಾಡುತ್ತಿದ್ದಾರೆ ಎಂದರು.

ಇಂದಿನ ನಾಡ ಹಬ್ಬ ದಸರಾ ಮೊದಲು ವಿಜಯನಗರಲ್ಲಿ ನಡೆಯುತ್ತಿತ್ತು. ಸಾಮ್ರಾಜ್ಯ ಪತನವಾದ ನಂತರ ಅದನ್ನು ಮೈಸೂರು ಮಹಾರಾಜರು ಅಲ್ಲಿ ಆರಂಭಿಸಿದರು. ಇದನ್ನೇ ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವ ಆಚರಿಸಬೇಕು ಎಂದು ಕೋರಿದ್ದರು. ೧೯೮೭ರಲ್ಲಿ ನಾನು ಮೊಟ್ಟ ಮೊದಲ ಹಂಪಿ ಉತ್ಸವಕ್ಕೆ ಅನುದಾನ ನೀಡಿದೆ ಎಂದರು.

೧೨ನೇ ಶತಮಾನದಲ್ಲಿ ಇದ್ದ ಬಸವಾದಿ ಶರಣರು ಸಮಾನತೆ ಪ್ರತಿಪಾದನೆ ಮಾಡಿದರು. ಯಾವುದೇ ಕಾರಣಕ್ಕೂ ಮನುಷ್ಯ ಮನುಷ್ಯರ ನಡುವೆ ಭೇದ ಭಾವ ಇರಬಾರದು ಎಂದು ಪ್ರತಿಪಾದಿಸಿದರು. ಅದನ್ನೇ ನಾವು ಇಂದು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿದ್ದೇವೆ. ಆದರೆ, ಅಂತಹ ಸಂವಿಧಾನಕ್ಕೆ ಇಂದು ಧಕ್ಕೆ ಬರುವಂತಹ ಸ್ಥಿತಿ ನಿರ್ಮಾಣ ಆಗಿದೆ. ಸಂವಿಧಾನ ತಿರುಚುವ, ಬದಲಾಯಿಸುವ ಮಾತು ಕೇಳಿಬರುತ್ತಿವೆ. ಸಂವಿಧಾನ ರಕ್ಷಣೆ ಮಾಡಿದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಾಗಾಗಿ ನಾವೆಲ್ಲರೂ ಸಂವಿಧಾನ ರಕ್ಷಣೆಗೆ ನಿಲ್ಲಬೇಕು ಎಂದರು.

ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುವವರನ್ನು ಹಿಮ್ಮೆಟ್ಟಿಸಬೇಕು. ನಾವು ವಿರೋಧ ಮಾಡಬೇಕು. ನಾವು ಜಾಗ್ರತರಾಗಿ ವಿರೋಧ ಮಾಡಿದರೆ ಮಾತ್ರ ಕೋಮುವಾದಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದರು.

ಕೇಂದ್ರದಿಂದ ಕಡೆಗಣನೆ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯವನ್ನು ಕಡೆಗಣಿಸಿದೆ. ನಾವು ₹4 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ, ಬರೀ ₹50 ಸಾವಿರ ಕೋಟಿ ಮಾತ್ರ ಕೇಂದ್ರ ಸರ್ಕಾರ ನಮಗೆ ವಾಪಾಸ್‌ ಹಣ ನೀಡುತ್ತಿದೆ. ನಾವು ನಮ್ಮ ರಾಜ್ಯದ ಜನರ ಹಕ್ಕಿಗಾಗಿ ದಿಲ್ಲಿಯಲ್ಲಿ ಫೆಬ್ರವರಿ 7ರಂದು ಪ್ರತಿಭಟನೆ ಮಾಡುತ್ತಿದ್ದೆವೆ. ರಾಜಕೀಯ ಮಾಡಲು ಪ್ರತಿಭಟನೆ ಮಾಡುತ್ತಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ. ರೈತರಿಗೆ ಎನ್‌ಡಿಆರ್‌ಎಫ್‌ನಲ್ಲಿ ಹಣ ಕೇಳಲು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ನಾವು ರೈತರಿಗೆ ₹650 ಕೋಟಿ ಮಧ್ಯಂತರ ಪರಿಹಾರ ನೀಡಿದ್ದೇವೆ. ಐದು ಗ್ಯಾರಂಟಿಗಳಿಂದಲೂ ಬರಗಾಲದ ತೀವ್ರತೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ರೈತರಿಗೆ ನೆರವಿಗಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಸದೃಢ: ರಾಜ್ಯದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದರೂ ಆರ್ಥಿಕತೆಯಲ್ಲಿ ರಾಜ್ಯ ಸುಭಿಕ್ಷವಾಗಿದೆ. ನಮ್ಮನ್ನು ಟೀಕೆ ಮಾಡುವವರಿಗೆ ನಾವು ಉತ್ತರ ನೀಡಲು ಸಿದ್ಧ. 141 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಹಂಪಿ ಉತ್ಸವ ವೀಕ್ಷಣೆ ಮಾಡಲು ಸಾಧ್ಯವಾಗಿದೆ ಎಂದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಚಿವರಾದ ಶಿವರಾಜ್‌ ತಂಗಡಗಿ, ಬಿ. ನಾಗೇಂದ್ರ, ಜಮೀರ್‌ ಅಹಮದ್ ಖಾನ್‌, ಶಾಸಕರಾದ ಗವಿಯಪ್ಪ, ಅಜಯ್‌ ಸಿಂಗ್, ಕೃಷ್ಣ ನಾಯಕ, ನಾಗರಾಜ, ನೇಮರಾಜ್‌ ನಾಯ್ಕ, ಎಂ.ಪಿ. ಲತಾ, ಡಾ. ಎನ್.ಟಿ. ಶ್ರೀನಿವಾಸ್‌, ಭರತ್‌ ರೆಡ್ಡಿ, ಮಾಜಿ ಶಾಸಕ ಭೀಮಾ ನಾಯ್ಕ, ಮಾಜಿ ಸಂಸದರಾದ ಐ.ಜಿ. ಸನದಿ, ವಿ.ಎಸ್‌. ಉಗ್ರಪ್ಪ, ದಯಾನಂದ ಪುರಿ ಸ್ವಾಮೀಜಿ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿಗೌಡ ಮತ್ತಿತರರಿದ್ದರು.