ಸಾರಾಂಶ
ನರಸಿಂಹರಾಜಪುರ, ಎಲ್ಲರೂ ಒಗ್ಗೂಡಿ ಶಿಕ್ಷಕರ ದಿನಾಚರಣೆ ಯಶಸ್ವಿಗೊಳಿಸೋಣ ಎಂದು ತಾಪಂ. ಇಒ ಎಚ್.ಡಿ. ನವೀನ್‌ಕುಮಾರ್ ಕರೆ ನೀಡಿದರು.
ಶಿಕ್ಷಕರ ದಿನಾಚರಣೆಯ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಎಲ್ಲರೂ ಒಗ್ಗೂಡಿ ಶಿಕ್ಷಕರ ದಿನಾಚರಣೆ ಯಶಸ್ವಿಗೊಳಿಸೋಣ ಎಂದು ತಾಪಂ. ಇಒ ಎಚ್.ಡಿ. ನವೀನ್‌ಕುಮಾರ್ ಕರೆ ನೀಡಿದರು.
ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ತಾಲೂಕಿನಲ್ಲಿ ಕೂಡ ಸರ್ಕಾರಿ ನೌಕರರಲ್ಲಿ ಶೇ. 50 ರಷ್ಟು ಶಾಲಾ ಶಿಕ್ಷಕರೇ ಇರುತ್ತಾರೆ. ಶಿಕ್ಷಕರ ದಿನಾಚರಣೆಯನ್ನು ಉತ್ತಮ ಕಾರ್ಯಕ್ರಮ ವನ್ನಾಗಿ ಆಚರಿಸೋಣ. ಶಿಕ್ಷಕರ ದಿನಾಚರಣೆಗೆ ತಾಪಂ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಶಿಕ್ಷಣ ಇಲಾಖೆ ಕಾಮಗಾರಿಗೆ ಈ ಬಾರಿ ಮೊದಲ ಆದ್ಯತೆ ನೀಡಿದ್ದು ಶಾಲಾ ಕಟ್ಟಡ ದುರಸ್ತಿ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಲಾಗಿದೆ ಎಂದರು.ಬಿಎಇ ಕೆ.ಆರ್.ಪುಷ್ಪಾ ಮಾತನಾಡಿ, ಈ ಬಾರಿ ದಿನಾಚರಣೆಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸೋಣ. ಶಿಕ್ಷಕರ ದಿನಾಚರಣೆಗೆ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ಇಲಾಖೆಯಿಂದ ಶಿಕ್ಷಕರ ದಿನಾಚರಣೆ ಕಾರ್ಯ ಕ್ರಮಕ್ಕಾಗಿ 20 ಸಾವಿರ ಅನುದಾನ ನೀಡಲಾಗುತ್ತದೆ. ಆದರೆ, ಆ ಅನುದಾನ ಸಾಕಾಗುವುದಿಲ್ಲ. ಕಾರ್ಯಕ್ರಮಕ್ಕೆ ಮತ್ತಷ್ಟು ಅನುದಾನ ಕ್ರೋಢೀಕರಿಸಿ ಕಾರ್ಯಕ್ರಮ ಆಯೋಜಿಸಬೇಕಾಗುತ್ತದೆ. ಕಳೆದ ಬಾರಿ ಉತ್ತಮ ಕಾರ್ಯಕ್ರಮ ಮಾಡಲಾಗಿತ್ತು. ಈ ಬಾರಿ ಕೆಪಿಎಸ್‌ಸಿ ಪ್ರೌಢ ಶಾಲಾ ವಿಭಾಗದ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ತಾಲೂಕಿನ ಮೂರು ಶಿಕ್ಷಕರಿಗೆ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಶಿಕ್ಷಕರ ದಿನಾಚರಣೆ ಅಂಗವಾಗಿ ಆ. 28 ರಂದು ಶಿಕ್ಷಕರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಉತ್ತಮ ಉಪನ್ಯಾಸಕರಿಂದ ಶಿಕ್ಷಕರ ದಿನಾಚರಣೆ ವಿಶೇಷ ಉಪನ್ಯಾಸ ಏರ್ಪಡಿಸಬಹುದು ಎಂದರು.ಸಭೆಯಲ್ಲಿ ಪ್ರಾಥಮಿಕ ಶಾಲೆ 4 ಶಿಕ್ಷಕರನ್ನು ಹಾಗೂ ಪ್ರೌಢ ಶಾಲೆ 3 ಶಿಕ್ಷಕರನ್ನು ಸೇರಿ ಒಟ್ಟು 7 ಶಿಕ್ಷಕರನ್ನು ತಾಲೂಕಿನ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಅದ್ದೂರಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶಪ್ಪ, ಪ್ರಾಥಮಿಕ ಶಾಲಾ ಬಡ್ತಿ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಅಕ್ಷರ ದಾಸೋಹದ ಪ್ರಭಾರ ಸಹಾಯಕ ನಿರ್ದೇಶಕ ಡಿ.ಎನ್.ಮಂಜುನಾಥ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ್, ಇಸಿಓ ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.