ಕುಷ್ಟಗಿ: ಪರಿಸರದ ಮೂಲ ಸ್ವರೂಪ ಉಳಿಸಿಕೊಂಡಾಗ ಮಾತ್ರ ನೈಜ ಪರಿಸರ ರಕ್ಷಣೆಯಾಗುತ್ತದೆ ಎಂದು ಎಸ್‌ವಿಸಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಗದೀಶ್ ಅಂಗಡಿ ಹೇಳಿದರು.

ಪಟ್ಟಣದ ಎಸ್ ವಿಸಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತು ಪರಿಸರವನ್ನು ತಾನೇ ನಿರ್ಮಿಸಿಕೊಳ್ಳುತ್ತದೆ. ಸಹಸ್ರ ವರ್ಷಗಳಿಂದ ಈ ಪ್ರಕ್ರಿಯೆಯಿಂದ ಕಾಡುಗಳು ನಿರ್ಮಾಣಗೊಂಡವು ಗಿಡ ನೆಡುವ ಮೂಲಕ ಬೆಳೆಸುವ ಕಾಡು ಮೂಲ ಪರಿಸರದ ಸ್ವರೂಪಕ್ಕೆ ಪೂರಕವಾಗುವುದಿಲ್ಲ. ವಿಶ್ವ ಸೃಷ್ಟಿಸಿರುವ ಕಾಡನ್ನು ಹಾಗೂ ಪರಿಸರದ ಮೂಲ ಸ್ವರೂಪ ಹಾಳಾಗದಂತೆ ಉಳಿಸಿಕೊಳ್ಳುವುದೇ ನಿಜವಾದ ಅರ್ಥದಲ್ಲಿ ಪರಿಸರದ ಸಂರಕ್ಷಣೆ. ಆದ್ದರಿಂದ ಪರಿಸರದ ಮೂಲ ಸ್ವರೂಪ ಉಳಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಸುರೇಶ್ ಹೊಸಮನಿ ಮಾತನಾಡಿ, ಗಿಡ ನೆಡುವುದನ್ನು ವಿದ್ಯಾರ್ಥಿಗಳು ಕಾಯಕವನ್ನಾಗಿ ಮಾಡಿಕೊಳ್ಳಬೇಕು. ನೆಟ್ಟ ಗಿಡ ಬಲಿಷ್ಠವಾಗುವವರೆಗೂ ಅದಕ್ಕೆ ನೀರುಣಿಸಬೇಕು. ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮಾತ್ರ ಗಿಡ ಮರಗಳ ಕುರಿತು ಮಾತನಾಡದೇ ಪರಿಸರ ಸಂರಕ್ಷಣೆ ನಿತ್ಯದ ಮಂತ್ರವನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.

ಎಸ್ ವಿಸಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಸಿ.ತಿಪ್ಪಾಶೆಟ್ಟಿ ಮಾತನಾಡಿ, ಶುದ್ಧ ಗಾಳಿ,ನೀರು ಮತ್ತು ಕಾಡು ಉಳಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ನಿರಂತರ ಪ್ರಯತ್ನ ಮಾಡಿದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಸಾಧ್ಯ ಎಂದು ಹೇಳಿದರು.


ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಮಹದೇವ್ ಮಧಾಳೆ ಮಾತನಾಡಿ, ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಪದಾರ್ಥ ತ್ಯಜಿಸಬೇಕು. ಶುದ್ಧ ನೀರಿನ ಮೂಲ ಉಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರತಿಯೊಬ್ಬ ಶಿಕ್ಷಕರಿಗೆ ವಿವಿಧ ಗಿಡಗಳನ್ನು ಉಡುಗೊರೆಯಾಗಿ ನೀಡಿದರು.