ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ರಾಜ್ಯ ಮಟ್ಟದ ಕನ್ನಡಪರ ಸಂಘಟನೆಗಳು ಮೇಕೆದಾಟು ಯೋಜನೆ ಪರ ಗಟ್ಟಿಧ್ವನಿ ಎತ್ತಬೇಕಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಆರವಿಂದ್ ಅಭಿಪ್ರಾಯಪಟ್ಟರು.ನಗರದಲ್ಲಿರುವ ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಾಡಿನಲ್ಲಿರುವ ಹಲವಾರು ರಾಜ್ಯ ಮಟ್ಟದ ಕನ್ನಡಪರ ಸಂಘಟನೆಗಳ ಹೋರಾಟದ ಫಲದಿಂದ ಕನ್ನಡಿಗರ ಬದುಕು ಹಸನಾಗುತ್ತಿದೆ. ನೆಲ-ಜಲ, ಭಾಷೆ ಉಳಿವು, ಬೆಳವಣಿಗೆಗೆ ಪೂರಕವಾಗಿ ನಿಂತಿರುವುದು ಹೆಮ್ಮೆಯ ವಿಚಾರ. ಆದರೆ, ರೈತರ ಬದುಕಿಗಾಗಿ, ಜೀವಜಲ ರಕ್ಷಣೆಗಾಗಿ ಮೇಕೆದಾಟು ಯೋಜನೆ ಹೋರಾಟದಿಂದ ಮಾತ್ರ ರಚನೆಯಾಗಬಲ್ಲದು, ಗಟ್ಟಿಧ್ವನಿಯಿಂದ ಸಾಧ್ಯವಿದೆ ಎಂದು ನುಡಿದರು.ಅಂದಿನ ಕಾಲದಲ್ಲಿ ಡಾ.ರಾಜ್ ಮತ್ತು ಹಲವು ಗೋಕಾಕ್ ವರದಿ ಜಾರಿಗಾಗಿ ಚಳಿವಳಿಯನ್ನೇ ರೂಪಿಸಿ, ಹೊಸ ಇತಿಹಾಸ ನಿರ್ಮಾಣ ಮಾಡಿದರು. ಕನ್ನಡಪರ ಹೋರಾಟಗಾರರಿಗೂ ಇಂತಹ ಶಕ್ತಿ, ಚೈತನ್ಯವಿದೆ, ಎಲ್ಲರೂ ಒಗ್ಗೂಡಿ, ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಧುಮಕಬೇಕಿದೆ ಎಂದು ಮನವಿ ಮಾಡಿದರು.
ಪ್ರಗತಿಪರರು, ರೈತರು, ಕನ್ನಡಸಂಘಟನೆಗಳು ಸಾಕಷ್ಟು ಹೋರಾಟ ಮಾಡಿದ್ದರ ಫಲವಾಗಿ ಇಂದು ಬ್ಯಾಂಕ್‌ಗಳಲ್ಲಿ ಕನ್ನಡ ಚಲನ್ ಮುದ್ರಣವಾಗುತ್ತಿವೆ, ನಾಮಫಲಕಗಳನ್ನು ಕನ್ನಡದಲ್ಲಿ ಓದಬಹುದು, ಸಾಧಕರ ಜೀವನಚರಿತ್ರೆಗಳಲ್ಲಿ ಪಠ್ಯಗಳಲ್ಲಿ ಓದಬಹುದು, ಅನ್ಯಭಾಷಿಗರ ಉಪಟಳ ಕಡಿಮೆಯಾಗಿದೆ ಎಂದು ಸ್ಮರಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗಣ್ಯರು ಅಭಿನಂದಿಸಿದರು, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ನಡೆಯಿತು. ಭರತನಾಟ್ಯ ವಿದ್ಯಾರ್ಥಿಗಳಿಂದ ನೃತ್ಯಪ್ರದರ್ಶನ ಗಮನ ಸಳೆಯಿತು.
ಕಾರ್ಯಕ್ರಮದಲ್ಲಿ ಧನಗೂರುಮಠದ ಶ್ರೀಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯಸ್ವಾಮಿ, ರಾಷ್ಟ್ರೀಯ ಮಾನವಹಕ್ಕುಗಳ ಸಲಹೆಗಾರ ಎಂ.ಗುರುಪ್ರಸಾದ್, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಸಿಟಿ ಸಹಾಕರ ಬ್ಯಾಂಕ್ ಅಧ್ಯಕ್ಷ ಸಿ.ಸುಂದರ್, ನಿರ್ದೇಶಕ ಸಿ.ಬೋರೇಗೌಡ, ಕಸಿವೇ ಮಹಿಲಾ ಅಧ್ಯಕ್ಷೆ ಮಂಜುಳಾ, ಹಾವೇರಿ ಅಧ್ಯಕ್ಷ ನಾಗರಾಜು ಪು.ಮುದುಕಪ್ಪ, ತಾಲೂಕು ಅಧ್ಯಕ್ಷೆ ಶೈಲಜಾ, ರಾಜ್ಯ ಕಾರ್ಯದರ್ಶಿ ಸಿ.ಜೆ.ಸುಜಾತಾ, ಬಿದರಕೋಟೆ ನಾಗರಾಜು ಮತ್ತಿತರರಿದ್ದರು.ಮಂಡ್ಯ ನಗರದಲ್ಲಿರುವ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸಮಾರಂಭವನ್ನು ಜಿಲ್ಲಾ ಬಿಜೆಪಿ ಯುವ ಮುಖಂಡ ಎಚ್.ಆರ್.ಆರವಿಂದ್ ಉದ್ಘಾಟಿಸಿದರು.