ಸಾರಾಂಶ
ಮೂಲ್ಕಿ ತಾಲೂಕು ಆಡಳಿತದ ವತಿಯಿಂದ ಕಾರ್ನಾಡಿನ ಗಾಂಧಿ ಮ್ಯೆದಾನದಲ್ಲಿ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಧ್ವಜಾರೋಹಣ ನೆರವೇರಿಸಿದರು.
ಮೂಲ್ಕಿ: ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಯುವ ಪೀಳಿಗೆ ನೆನಪಿಸಿಕೊಳ್ಳಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ತಾಲೂಕು ಆಡಳಿತದ ವತಿಯಿಂದ ಕಾರ್ನಾಡಿನ ಗಾಂಧಿ ಮ್ಯೆದಾನದಲ್ಲಿ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.10 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಗೇರುಕಟ್ಟೆಯಲ್ಲಿನ ನೂತನ ಪ್ರಜಾಸೌಧದ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ತನ್ನ ಅವಧಿಯಲ್ಲಿ ಮೂಲ್ಕಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಕುಡಿಯುವ ನೀರಿನ ಶಾಶ್ವತ ಯೋಜನೆಯು ಅಂತಿಮ ಹಂತದಲ್ಲಿದೆ ಎಂದರು.ಮೂಲ್ಕಿ ತಾಲೂಕು ತಹಸೀಲ್ದಾರ್ ಶ್ರೀಧರ್ ಮುಂದಲಮನಿ ಮಾತನಾಡಿ, ಕೋಮು ಸೌಹಾರ್ದತೆಯಿಂದ ದೇಶದ ಅಭಿವೃದ್ಧಿ ಸಾಧ್ಯವಿದ್ದು, ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮಳೆಯಿಂದಾಗಿ ಪರೇಡ್ ರದ್ದು ಪಡಿಸಿದ್ದು, ಮಳೆಯ ನಡುವೆ ಗಣ್ಯರು ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದ ಸಾಧಕರು, ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್ ಅವರನ್ನು ಸನ್ಮಾನಿಸಲಾಯಿತು.ಮೂಲ್ಕಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ, ಪಂಚಾಯಿತಿ ಸದಸ್ಯರು, ಮೂಲ್ಕಿ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ್, ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಸುನೀಲ್ ಜತ್ತನ್ನ ಮತ್ತಿತರರಿದ್ದರು.ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಾಸುದೇವ ಬೆಳ್ಳೆ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ವಂದಿಸಿದರು. ನ್ಯಾಯವಾದಿ ಭಾಸ್ಕರ ಹೆಗ್ಡೆ ನಿರೂಪಿಸಿದರು.