ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು, ವೀರ ಸೈನಿಕರಿಗೆ ಈ ದೇಶದ ಪ್ರತಿಯೊಬ್ಬ ನಾಗರಿಕನು ಸ್ಮರಿಸುತ್ತಾ, ಗೌರವ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಹಸೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.ನಗರದ ಸೆಂಟ್ರಲ್ ಪ್ರೈಮರಿ ಸ್ಕೂಲ್ (ಸಿಪಿಎಸ್) ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಜಾತಿ, ಧರ್ಮ ಮರೆತು ಅನೇಕ ಮಹನೀಯರು ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಫಲವಾಗಿ ನಾವು ಸ್ವಾತಂತ್ರ್ಯರಾಗಿದ್ದೇವೆ ಎಂದರು.ದೇಶ ಸ್ವತಂತ್ರವಾದ ಮೇಲೆ ಸಂವಿಧಾನದ ರಚನೆಗೆ 2 ವರ್ಷ, 11 ತಿಂಗಳು, 17 ದಿನಗಳು ಬೇಕಾಯಿತು. ಭಾರತದ ಸಂವಿಧಾನ ಸಂಪೂರ್ಣ ಲಿಖಿತವಾಗಿದ್ದು, ಅದರಲ್ಲಿ 22 ಅಧ್ಯಾಯಗಳು ಮತ್ತು 395 ಅನುಚ್ಛೇದಗಳಿವೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನ ಪರಮೋಚ್ಛವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂತೆಯೇ ಜ.26ರ ದಿನವನ್ನು ಗಣರಾಜ್ಯ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಭಾರತವು ತನ್ನ 75ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸಿಕೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಿಳಿಸಿದರು.
ತಾಪಂ ಇಒ ಸೋಮಶೇಖರ್ ಬಿರಾದಾರ್ ಮಾತನಾಡಿ, ಗಣರಾಜ್ಯೋತ್ಸವವು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಾದ ಪೌರಾಯುಕ್ತ ರಮೇಶ್ ಬಡಿಗೇರ್, ಖಜನೆ ಅಧಿಕಾರಿ ಡಾ. ಎಂ.ಎಸ್. ಶಿರವಾಳ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಲ್ದಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೀಬಾ ಜಲಿಯನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶಿವಕುಮಾರ್ ದೇಸಾಯಿ, ಇನ್ಸ್‌ಪೆಕ್ಟರ್ ಎಸ್.ಎಂ. ಪಾಟೀಲ್, ಅಬಕಾರಿ ನಿರೀಕ್ಷಕ ವಿಜಯಕುಮಾರ್ ಹಿರೇಮಠ, ಹಿಂದುಳಿದ ವರ್ಗಗಳ ಅಧಿಕಾರಿ ಚೆನ್ನಪ್ಪಗೌಡ ಚೌದ್ರಿ, ಅಗ್ನಿಶಾಮಕ ಅಧಿಕಾರಿ ಮಚ್ಚೇಂದ್ರ, ಯೋಗಗುರು ಲಕ್ಷ್ಮಣ, ವೀರಭದ್ರ ಸೇರಿದಂತೆ ಇತರರಿದ್ದರು.