ರೋಣ: ಮಲೇರಿಯಾ ಅನಾಫಿಲಿಸ್ ಎಂಬ ಸೋಂಕಿತ ಹೆಣ್ಣು ಸೊಳ್ಳೆಯಿಂದ ಹರಡುತ್ತಿದ್ದು, ಸೊಳ್ಳೆಗಳನ್ನು ನಿರ್ಮೂಲನೆ ಮಾಡಿದಲ್ಲಿ ಮಲೇರಿಯಾ ರೋಗವನ್ನು ನಿರ್ಮೂಲಗೊಳಿಸಲು ಸಾಧ್ಯವಿದೆ. ಆದ್ದರಿಂದ ಮಲೇರಿಯಾವನ್ನು ಕೊನೆಗೊಳಿಸಲು ಇಡೀ ಸಮುದಾಯ ಸಂಕಲ್ಪ ಮಾಡಬೇಕಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ತಿಳಿಸಿದರು.
ತಾಲೂಕಿನ ಮಾಡಲಗೇರಿ ಗ್ರಾಮದ ಕಂಠಿಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಹಿರೇಹಾಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಜರುಗಿದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಳೆಗಾಲ ಆರಂಭವಾಗಿರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಹಾಕಿ ಸಂತಾನವೃದ್ಧಿ ಮಾಡಿಕೊಂಡು, ಮಲೇರಿಯಾ ಡೆಂಘೀ, ಚಿಕ್ಯೂನ್ ಗುನ್ಯಾದಂಥ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಮನೆಯ ಸುತ್ತಮುತ್ತ ಮನೆಯ ಒಳಗೆ ಮತ್ತು ಹೊರಗಡೆ ಮತ್ತು ಮೇಲ್ಮೈನಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಮುಕ್ತ ಪರಿಸರ ನಿರ್ಮಿಸಿಕೊಂಡು ಕೀಟಜನ್ಯ ರೋಗಗಳಿಂದ ವಿಮುಕ್ತಿ ಹೊಂದಬೇಕು ಎಂದರು.
ಸಮುದಾಯ ಆರೋಗ್ಯ ಅಧಿಕಾರಿ ಶ್ರೀಕಾಂತ ಚಿನ್ನೂರ ಮಾತನಾಡಿ, ಜನವಸತಿ ಪ್ರದೇಶದಲ್ಲಿ ಸೊಳ್ಳೆಮುಕ್ತ ಪರಿಸರ ಮಾಡಲು ವೈಯಕ್ತಿಕ ರಕ್ಷಣಾ ಕ್ರಮಗಳು, ಜೈವಿಕ ನಿಯಂತ್ರಣ ವಿಧಾನಗಳು, ರಾಸಾಯನಿಕ ನಿಯಂತ್ರಣ ವಿಧಾನಗಳು, ಆರೋಗ್ಯ ಇಲಾಖೆಯಲ್ಲಿ ಲಭ್ಯವಿದ್ದು, ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸಿದಲ್ಲಿ ಮಲೇರಿಯಾ ರೋಗವನ್ನು ಅಂತ್ಯಗೊಳಿಸಲು ಸಾಧ್ಯವಿದೆ. ಸಾರ್ವಜನಿಕರು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಒಟ್ಟಾಗಿ ಶ್ರಮಿಸಿದಲ್ಲಿ ಮಲೇರಿಯವನ್ನು ಅಂತ್ಯಗೊಳಿಸಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಎಸ್. ರಾವೂತ ಮಾತನಾಡಿ, ಆರೋಗ್ಯ ಇಲಾಖೆಯಿಂದ ನೀಡುವ ಸಲಹೆಗಳನ್ನು ಚಾಚು ತಪ್ಪದೇ ಪಾಲಿಸಿದಲ್ಲಿ, ಪ್ರಸ್ತುತ ಮಳೆಗಾಲದಲ್ಲಿಯೇ ಕಾಯಿಲೆಗಳಿಂದ ಮುಕ್ತವಾಗಿ ಬದುಕಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಶಾಲೆಯ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.