ಸನಾತನ ಧರ್ಮ ವಿರೋಧಿ ವ್ಯರ್ಥಾಲಾಪ ನಿಲ್ಲಿಸೋಣ: ಶ್ರೀ ಅಖಿಲೇಶ್ವರಾನಂದಗಿರಿ
KannadaprabhaNewsNetwork | Published : Oct 11 2023, 12:45 AM IST
ಸನಾತನ ಧರ್ಮ ವಿರೋಧಿ ವ್ಯರ್ಥಾಲಾಪ ನಿಲ್ಲಿಸೋಣ: ಶ್ರೀ ಅಖಿಲೇಶ್ವರಾನಂದಗಿರಿ
ಸಾರಾಂಶ
ಎಂಜಿಎಂ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ನ 60ನೇ ವರ್ಷಾಚರಣೆಯ ಅಂಗವಾಗಿ ನಡೆದ ಹಿಂದೂ ಸಮಾಜೋತ್ಸವ.
ಕನ್ನಡಪ್ರಭ ವಾರ್ತೆ ಉಡುಪಿ ಸನಾತನ ಧರ್ಮವನ್ನು ನಾಶ ಮಾಡುವ ಬಗ್ಗೆ ಮತ್ತೇ ವ್ಯರ್ಥಾಲಾಪಗಳು ಕೇಳಿ ಬರುತ್ತಿದ್ದು, ಅವುಗಳನ್ನು ಶಾಶ್ವತವಾಗಿ ನಿಲ್ಲಿಸಬೇಕಾಗಿದೆ ಎಂದು ಮಧ್ಯಪ್ರದೇಶದ ಭೋಪಾಲ್‌ನ ಮಹಾಮಂಡಲಾಧೀಶ್ವರ ಶ್ರೀ ಅಖಿಲೇಶ್ವರಾನಂದ ಗಿರಿ ಮಹರಾಜ್ ಕರೆ ನೀಡಿದ್ದಾರೆ. ಅವರು ಮಂಗಳವಾರ ಇಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ನ 60ನೇ ವರ್ಷಾಚರಣೆಯ ಅಂಗವಾಗಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು. ಹಿಂದೆ ಸನಾತನ ಧರ್ಮದ ವಿರುದ್ಧ ರಾವಣನೂ ದಾಳಿ ಮಾಡಿದ್ದ, ಕಂಸನೂ ದಾಳಿ ಮಾಡಿದ್ದ, ನಂತರ ತೈಮೂರ್, ಬಾಬರ್, ಔರಂಗಜೇಬ್, ಹುಮಾಯೂನ್, ಶಹಜಹಾನ್ ಕೂಡ ದಾಳಿ ಮಾಡಿದ್ದರು, ಬ್ರಿಟಿಷರು ಕೂಡ ದಾಳಿ ಮಾಡಿದ್ದರು, ಅವರೆಲ್ಲರ ದಾಳಿಯನ್ನು ಜಾಗ್ರತ ಹೋರಾಟದ ಮೂಲಕ ಹಿಮ್ಮೆಟ್ಟಿಸಿದ್ದೇವೆ. ಈಗ ಮತ್ತೆ ಕೆಲವರು ಸನಾತನ ಧರ್ಮವನ್ನು ನಾಶ ಮಾಡಬೇಕು ಎನ್ನುತ್ತಿದ್ದಾರೆ. ಅವರಿಗೆ ಅವರ ತಾತ ಮುತ್ತಾಂದಿರೂ ಸನಾತನಿಗಳಾಗಿದ್ದರು ಎಂಬುದನ್ನು ನೆನಪಿಸಬೇಕಾಗಿದೆ ಎಂದವರು ಸಲಹೆ ಮಾಡಿದರು. ಇನ್ನು ನಡೆಯಲಿರುವ ಸನಾತನ ಧರ್ಮವನ್ನು ಉಳಿಸುವ ಅಭಿಯಾನ ಕೇವಲ ಭಾರತದ ಭೌಗೋಳಿಕ ಸೀಮೆಗಳಿಗೆ ಸೀಮಿತವಾಗಿರುವುದಿಲ್ಲ, ಅದು ಇಡೀ ವಿಶ್ವಕ್ಕೆ ಹರಡಲಿದೆ ಎಂದವರು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ಆರ್.ಎಸ್.ಎಸ್. ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್, ಸನಾತನ ಧರ್ಮವೊಂದೇ ವಿಶ್ವ ಶಾಂತಿಯನ್ನು ಬಯಸುವ ಧರ್ಮವಾಗಿದೆ. ಸನಾತನ ಧರ್ಮ ನಾಶವಾದರೇ ಮರುಕ್ಷಣ ಜಗತ್ತೇ ನಾಶವಾಗಲಿದೆ. ಶೌರ್ಯ ರಹಿತ ಸಮಾಜಕ್ಕೆ ಸಾವು ನಿಶ್ಚಿತ, ಭಾರತದ ಸಮಾಜ ಬದುಕಿರುವುದು ತನ್ನ ಶೌರ್ಯದಿಂದಲೇ ಎಂದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಮತ್ತು ಶ್ರೀ ಅಖಿಲೇಶ್ವರಾನಂದ ಗಿರಿ ಮಹಾರಾಜ್ ಜೊತೆಯಾಗಿ ಸಮಾಜೋತ್ಸವವನ್ನು ಉದ್ಘಾಟಿಸಿದರು. ಉದ್ಯಮಿ ಮನೋಹರ್ ಶೆಟ್ಟಿ ಅವರು ಸಮಾಜೋತ್ಸವದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಹಿಂಪನ ಪ್ರಮುಖರಾದ ಎಂ.ಬಿ.ಪುರಾಣಿಕ್, ಮಹಾಬಲೇಶ್ವರ ಹೆಗಡೆ, ವಿಷ್ಣುಮೂರ್ತಿ ಆಚಾರ್ಯ, ಬಜರಂಗದಳದ ಪ್ರಮುಖರಾದ ಸೂರ್ಯನಾರಾಯಣ, ಸುನೀಲ್ ಕೆ.ಆರ್, ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್ ನಾಯಕ್, ಉದ್ಯಮಿಗಳಾದ ಗಣೇಶ್ ಹೆಗ್ಡೆ ಪುಣ್ಚೂರು, ಹರಿಯಪ್ಪ ಕೋಟ್ಯಾನ್, ರಮೇಶ್ ಬಂಗೇರ, ಕಡ್ತಲ ವಿಶ್ವನಾಥ್ ಪೂಜಾರಿ, ರವೀಂದ್ರ ಶೆಟ್ಟಿ ಬಜಗೋಳಿ ಉಪಸ್ಥಿತರಿದ್ದರು. ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕ ಸ್ವಾಗತಿಸಿ, ವಿಹಿಂಪ ಪ್ರ.ಕಾರ್ಯದರ್ಶಿ ದಿನೇಶ್ ಮೆಂಡನ್ ಪ್ರಾಸ್ತಾವಿಕ ಮಾತನಾಡಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ಸಂಯೋಜಿಸಿದರು. ಸುಮ್ಮನಿದ್ದರೇ ನೆಲೆ ಇಲ್ಲವಾದೀತು: ಪೇಜಾವರ ಶ್ರೀ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಸಾವಿರಾರು ಹಿಂದುಗಳು ಭಾಗವಹಿಸಿದ್ದ ಈ ಶೌರ್ಯ ಜಾಗರಣಾ ರಥಯತ್ರೆಯ ಸಂದರ್ಭದಲ್ಲಿ ಒಂದೇ ಒಂದು ಅಂಗಡಿಗೆ ಕಲ್ಲು ಬೀಳಲಿಲ್ಲ, ವಾಹನ ದ್ವಂಸ ಆಗಿಲ್ಲ, ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಹಾಕಲಿಲ್ಲ, ಮನೆಯ ಕಿಟಕಿಗಳು ಪುಡಿಯಾಗಿಲ್ಲ, ಯಾಕೆಂದರೆ ನಾವು ಶಾಂತಿಪ್ರಿಯರು ಎಂದ ಶ್ರೀಗಳು, ಆದರೆ ಕೆಲವರು ನಮ್ಮ ಮನೆಯನ್ನೇ ನಾಶ ಮಾಡುತ್ತೇವೆ ಎನ್ನುವಾಗ ನಾವು ಸುಮ್ಮನಿದ್ದರೆ ಮುಂದೆ ನಮಗೆ ನೆಲೆ ಇಲ್ಲದಂತಾಗಬಹುದು ಎಂದು ಎಚ್ಚರಿಸಿದರು. ಕೊಳೆತ ಕುಂಬಳಕಾಯಿ ಪರಿಸ್ಥಿತಿ: ಅದಮಾರು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ, ಗುರುಸ್ಥಾನದಲ್ಲಿರುವ ಭಾರತದತ್ತ ವಿಶ್ವವೇ ತಿರುಗಿ ನಿಂತಿರುವಾಗ, ಅದನ್ನು ವಿರೋಧಿಸುವವರು ಹೆದರಿಹೋಗಿದ್ದಾರೆ. ಆದ್ದರಿಂದಲೇ ಅವರು ಮಾತಿನಲ್ಲಿ ಉತ್ತರ ನೀಡಲಿಕ್ಕೆ ಆಗದೇ ಹೊಡೆದಾಟ ಬಡಿದಾಟಕ್ಕೆ ಇಳಿದಿದ್ದಾರೆ, ಕುಂಬಳಕಾಯಿ ಒಳಗೊಳಗೇ ಕೊಳೆತ ಪರಿಸ್ಥಿತಿ ಅವರದ್ದು ಎಂದು ಹೇಳಿದರು. ಕೇಸರಿಮಯ ಶಾಂತಿಯುತ ರಥಯಾತ್ರೆ: ಸಮಾಜೋತ್ಸವಕ್ಕೆ ಮೊದಲು ನಗರದ ಜೋಡುಕಟ್ಟೆಯಿಂದ ಎಂಜಿಎಂ ಕಾಲೇಜು ಮೈದಾನದವರೆಗೆ ನಡೆದ ಶೌರ್ಯ ಜಾಗರಣಾ ರಥಯತ್ರೆಯಲ್ಲಿ ಗಣ್ಯರು, ಶಾಸಕರು, ಬಿಜೆಪಿ ಮತ್ತು ಹಿಂದೂ ನಾಯಕರು ಭಾಗವಹಿಸಿದ್ದರು. ವಾದ್ಯ, ಚಂಡೆ, ಭಜನಾ ತಂಡಗಳು, ವೈವಿಧ್ಯಮಯ ಸ್ತಬ್ಧಚಿತ್ರಗಳೊಂದಿಗೆ ಕೇಸರಿಮಯವಾಗಿದ್ದ ರಥಯಾತ್ರೆಯು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶಾಂತಿಯುತವಾಗಿ ನಡೆಯಿತು.