ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ವೈದ್ಯಕೀಯ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಡಾ.ಸಿ.ಎನ್ .ಮಂಜುನಾಥ್ ಪಕ್ಷಾತೀತ ವ್ಯಕ್ತಿಯಾಗಿದ್ದಾರೆ. ಮೈತ್ರಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ - ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ನಗರದ ಖಾಸಗಿ ಕಲ್ಯಾಣ ಮಂಪಟದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಲು ಎರಡು ಪಕ್ಷದ ಕಾರ್ಯಕರ್ತರು ಹಾಗು ಮುಖಂಡರು ಕೆಲಸ ಆರಂಭಿಸಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ವರಿಷ್ಠರಾದ ಅಮಿತ್ ಷಾ ಅವರು ತಂದೆ ಮಾಜಿ ಸಿಎಂ ಕುಮಾರಸ್ವಾಮಿಗೆ ಪೋನ್ ಮಾಡಿದ್ದರು. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಚರ್ಚಿಸಿ ಬಿಜೆಪಿ ಅಭ್ಯರ್ಥಿ ಮಾಡಲು ಸಹಕಾರ ಕೋರಿದ್ದರು ಎಂದು ಹೇಳಿದರು.ಕಾಂಗ್ರೆಸ್‌ನೊಂದಿಗೆ ಈ ಹಿಂದೆ ಜೆಡಿಎಸ್ ಮೈತ್ರಿ ಅನ್ ನ್ಯಾಚುರಲ್ (ಅನೈಸರ್ಗಿಕ)ವಾಗಿತ್ತು. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ನ್ಯಾಚುರಲ್(ನೈಸರ್ಗಿಕ)ವಾಗಿದೆ. ಎನ್‌ಡಿಎ ಮೈತ್ರಿಯ ಭಾಗವಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಒಗ್ಗಟ್ಟಿನಿಂದ ಈ ಬಾರಿ ಲೋಕಸಭಾ ಚುನಾವಣೆ ಎದುರಿಸಲಿದೆ ಎಂದರು.
ನರೇಂದ್ರಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಪಕ್ಷವನ್ನು ಮಿಲೀನಗೊಳಿಸದೆ ಬಿಜೆಪಿಗೆ ಬೆಂಬಲ ಸೂಚಿಸಿದ್ದೇವೆ. ಎರಡು ಪಕ್ಷಗಳ ಮೈತ್ರಿ ಸಂಬಂಧ ಗೃಹ ಸಚಿವ ಅಮಿತ್ ಷಾ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ನಾನು ಸಹ ಭೇಟಿಯಾಗಿದ್ದೇ. ಇದರ ಉದ್ದೇಶ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮೋದಿಗೆ ಉಡುಗೊರೆ ನೀಡುವುದೇ ಆಗಿದೆ ಎಂದು ತಿಳಿಸಿದರು.ಲೋಕಸಭಾ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನವನ್ನು ಕೇಳಿಲ್ಲ. ವಿಧಾನಸಭಾ ಚುನಾವಣೆಯಾಗಿದ್ದರೆ ಹೆಚ್ಚಿನ ಸ್ಥಾನವನ್ನು ಕೇಳಬಹುದಾಗಿತ್ತು. ಇದು ಲೋಕಸಭಾ ಚುನಾವಣೆ ಹಾಗಾಗಿ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವಂತೆ ಕೇಳಿದ್ದೇವೆ ಎಂದರು.
ಮಂಡ್ಯ, ಹಾಸನ ಕ್ಷೇತ್ರಗಳ ಜೊತೆ ಕೋಲಾರ ಕ್ಷೇತ್ರವು ನಮಗೆ ಸಿಕ್ಕಿದೆ. ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ 3 ಜೆಡಿಎಸ್ ಶಾಸಕರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ವ್ಯಾಪ್ತಿಯಲ್ಲಿ ಜೆಡಿಎಸ್ 5 ಲಕ್ಷಕ್ಕೂ ಹೆಚ್ಚಿನ ಮತವನ್ನು ಪಡೆದುಕೊಂಡಿತ್ತು ಎಂದು ಹೇಳಿದರು.ಕೋಲಾರ ಕ್ಷೇತ್ರವನ್ನು ಜೆಡಿಎಸ್ ತೆಕ್ಕೆಗೆ ಪಡೆಯಬೇಕು. ಹೀಗಾಗಿ ಲೋಕಸಭಾ ಕ್ಷೇತ್ರದ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಈ ಸಂಬಂಧ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಈ ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕೆಂಬುದು ನಮ್ಮ ಉದ್ದೇಶ. ಮಂಡ್ಯ, ಹಾಸನ ಹಾಗೂ ಕೋಲಾರದಲ್ಲಿ ಬಿಜೆಪಿ ಸಹಮತ ಕೇಳಿದ್ದೇವೆ. ಇಂದು ರಾತ್ರಿ ಅಂತಿಮ ವಾಗಲಿದೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಾವು ಸಹ ಸಮರ್ಥವಾಗಿ ಎದುರಿಸುತ್ತೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು 26 ಲಕ್ಷಕ್ಕೂ ಹೆಚ್ಚಿನ ಮತದಾರರಿದ್ದಾರೆ. ಈಗಾಗಲೇ ಈ ಎಲ್ಲಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ ಪ್ರಚಾರ ಆರಂಭಿಸಿದ್ದೇವೆ ಎಂದು ಹೇಳಿದರು.ಜೆಡಿಎಸ್ - ಬಿಜೆಪಿ ಮೈತ್ರಿ ವಿಚಾರ, ಅಭ್ಯರ್ಥಿ ಕುರಿತು ರಾಮನಗರ ಜಿಲ್ಲೆಯ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಅವರಿಗೆ ಚುನಾವಣೆ ಸಮಯದಲ್ಲಿ ಮುಳುವಾಗಲಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ರಾಜಶೇಖರ್, ಉಮೇಶ್, ದೊರೆಸ್ವಾಮಿ, ನರಸಿಂಹಮೂರ್ತಿ, ಅಶ್ವತ್ಥ್, ಗೂಳಿಗೌಡ, ಮಂಜುನಾಥ್ ಇತರರಿದ್ದರು.
ಮಂಡ್ಯದಲ್ಲಿ ಮತ್ತೆ ಪಕ್ಷ ಕಟ್ಟುವ ಜವಾಬ್ದಾರಿಮಂಡ್ಯ ಕ್ಷೇತ್ರದಲ್ಲಿ ಕಳೆದ ಬಾರಿ ನನ್ನ ಸೋಲಿನ ನೋವು, ಆಕ್ರೋಶ ಕಾರ್ಯಕರ್ತರಲ್ಲಿದೆ. ಅವರ ಭಾವನೆ ಗೌರವಿಸುತ್ತೇನೆ. ಎಚ್.ಡಿ.ಮಾರಸ್ವಾಮಿ ಸ್ಪರ್ಧೆ ಮಾಡಿದರೆ ಪಕ್ಷವನ್ನು ಬಲಿಷ್ಟವಾಗಿ ಕಟ್ಟಲು ಸಾಧ್ಯ ಎಂಬ ಭಾವನೆ ಜನರಲ್ಲಿದೆ. ಅಲ್ಲಿ ಪಕ್ಷ ಕಟ್ಟಿರುವ ಬಲಿಷ್ಟ ನಾಯಕರು ಇದ್ದಾರೆ. ತಂದೆಯವರು ಶಸ್ತ್ರ ಚಿಕಿತ್ಸೆ ಗೆ ಒಳಗಾಗುವ ಕಾರಣ ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.