ದೇಶದಲ್ಲೇ ಮೊದಲ ಕ್ಷಯಮುಕ್ತ ಜಿಲ್ಲೆಯಾಗಿಸಲು ಪಣತೊಡೋಣ: ಸಚಿವ ಜೋಶಿ

| Published : Sep 18 2025, 01:10 AM IST

ಸಾರಾಂಶ

ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುವುದು. ಸ್ವಾಸ್ಥ್ಯ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದೊತ್ತಡ, ಡಯಾಬಿಟಿಸ್, ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ರಕ್ತಹೀನತೆ ಸೇರಿದಂತೆ ಹಲವಾರು ರೋಗಗಳ ತಪಾಸಣೆ ಮಾಡಲಾಗುತ್ತದೆ.

ಹುಬ್ಬಳ್ಳಿ: ಭಾರತ ದೇಶ ಪೊಲೀಯೋ ಮುಕ್ತ ರಾಷ್ಟ್ರವಾದಂತೆ 2026ರ ಮಾರ್ಚ್ ತಿಂಗಳೊಳಗೆ ಕ್ಷಯ ಮುಕ್ತ ರಾಷ್ಟ್ರವಾಗಬೇಕು. ಧಾರವಾಡ ಜಿಲ್ಲೆಯನ್ನು ದೇಶದಲ್ಲೇ ಮೊದಲ ಕ್ಷಯಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಪಣತೊಡೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕಲಘಟಗಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಆರೋಗ್ಯವಂತ ಮಹಿಳೆ, ಸಶಕ್ತ ಪರಿವಾರ ಅಭಿಯಾನಕ್ಕೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸೆ. 17 ರಂದು ವಿಶ್ವಕರ್ಮ ಜಯಂತಿಯ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತದೆ. ಸೆ.17 ರಿಂದ ಅ. 2ರ ವರೆಗೆ 15 ದಿನಗಳ ಕಾಲ ಸೇವಾ ಪಾಕ್ಷಿಕ ಎಂದು ಆಚರಿಸಲಾಗುವುದು. 15 ದಿನಗಳ ಕಾಲ ತಾವು ವಾಸಿಸುವ ಬಡಾವಣೆ, ಶಾಲೆ, ಕಾಲೇಜು, ಉದ್ಯಾನವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುವುದು. ಸ್ವಾಸ್ಥ್ಯ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದೊತ್ತಡ, ಡಯಾಬಿಟಿಸ್, ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್, ರಕ್ತಹೀನತೆ ಸೇರಿದಂತೆ ಹಲವಾರು ರೋಗಗಳ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಶಿಬಿರದಲ್ಲಿ ವಿತರಿಸುವ ಔಷಧಿಗಳನ್ನು ಸತತವಾಗಿ ತೆಗೆದುಕೊಳ್ಳಬೇಕು. ಇದರಿಂದ ರೋಗಗಳನ್ನು ಕಡಿಮೆ ಸಮಯದಲ್ಲಿ ಗುಣಪಡಿಸಬಹುದು ಎಂದು ಅವರು ತಿಳಿಸಿದರು.

ವಿಕಸಿತ ಭಾರತ: 2047ಕ್ಕೆ ಭಾರತ ದೇಶ ವಿಕಸಿತ ಭಾರತ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಎಲ್ಲರೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗುತ್ತದೆ‌. ಈಗಾಗಲೇ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ಹಲವಾರು ಸಮೀಕ್ಷೆಗಳು ತಿಳಿಸಿವೆ. ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು. ಎಲ್ಲರೂ ಆರೋಗ್ಯವಂತರಾಗಬೇಕು ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದಡಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಫಲಾನುಭವಿ ತಾಯಂದಿರಿಗೆ ಸಹಾಯಧನ ಜಮೆ ಹಾಗೂ ಆರೋಗ್ಯ ತಪಾಸಣೆ, ಯುವಕ ಯುವತಿಯರಿಂದ ರಕ್ತದಾನ ಶಿಬಿರ, ಶಿಶುಗಳಿಗೆ ಅನ್ನಪ್ರಾಶನ, ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಉಚಿತವಾಗಿ ಸಹಾಯಕ ಸಾಧನ ಮತ್ತು ಉಪಕರಣಗಳನ್ನು ವಿತರಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಎಸ್ಪಿ ಗುಂಜನ್ ಆರ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಮುಖಂಡರಾದ ನಾಗರಾಜ ಛಬ್ಬಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.