ಮುರುಗಿ ಪರಂಪರೆ ಕುರಿತು ಇನ್ನಷ್ಟು ಅಧ್ಯಯನ ಆಗಲಿ

| Published : Sep 28 2025, 02:00 AM IST

ಸಾರಾಂಶ

ಮುರುಗಿ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತ ಗೋಷ್ಠಿಯಲ್ಲಿ ವಿದ್ವಾಂಸರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುರುಗಿ ಪರಂಪರೆ ಕುರಿತ ಅಧ್ಯಯನಗಳು ಅಪೂರ್ಣವಾಗಿದ್ದು, ಆ ದಿಕ್ಕಿನಲ್ಲಿ ಇನ್ನಷ್ಟು ಅಧ್ಯಯನ ಆಗಬೇಕಾಗಿದೆ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರಿಗೆ ಶಾಂತವೀರ ಮಹಾಸ್ವಾಮಿಜಿ ಕೃತಿಗಳ ಕುರಿತು ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ಮಾತನಾಡಿದರು.

ಮುರುಗಿ ಶಾಂತವೀರ ಸ್ವಾಮಿಗಳ ಚರಿತ್ರೆಯನ್ನು ಹಲವು ಆಯಾಮಗಳಲ್ಲಿ ಅಧ್ಯಯನಕ್ಕೆ ಒಳಪಡಿಸಬಹುದಾಗಿದೆ. ಅವರ ಕೃತಿಗಳನ್ನು ಸಮಕಾಲೀನ ಕವಿಗಳ ಕೃತಿಗಳ ಮೂಲಕ ತೌಲನಿಕ ಅಧ್ಯಯನ ಮಾಡುವ ಮೂಲಕ ಸತ್ಯಾನ್ವೇಷಣೆಯ ಅಳನೋಟಗಳ ಕಡೆಗೆ ಸಾಗಬೇಕಿದೆ ಎಂದರು.

ಹಂಪಿಯ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಸಮಾರೋಪ ನುಡಿಗಳನ್ನಾಡಿದರು. ಕರ್ನಾಟಕದ ಮಠಗಳನ್ನು ಮುರುಘಾಮಠವು ಅತ್ಯಂತ ವೈಶಿಷ್ಟ್ಯ ಪೂರ್ಣವಾದುದು. ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಗಳನ್ನು ನಡೆಸುತ್ತಾ ಬಂದು ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸ ಮಾಡಿದೆ ಎಂದರು.

ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ, ಡಾ.ಸಿ.ವಿ.ಮಂಜುನಾಥ್‌, ವಿದ್ವಾಂಸ ಡಾ.ಸಿ.ನಾಗಭೂಷಣ, ಸಂಸ್ಕೃತ ವಿದ್ವಾಂಸ ಡಾ.ಸಿ.ಶಿವಕುಮಾರ ಸ್ವಾಮಿ, ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಾಜಶೇಖರ್‌ ವಿಚಾರಗಳನ್ನು ಮಂಡಿಸಿದರು.

ಗೋಷ್ಠಿಯಲ್ಲಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಸ್ವಾಮೀಜಿ, ಇನ್ನಿತರ ಸ್ವಾಮೀಜಿ ಭಾಗವಹಿಸಿದ್ದರು. ಉಮೇಶ್‌ ಪತ್ತಾರ ವಚನಗೀತೆ ಹಾಡಿದರು. ಬಸವ ಮಹಂತ ಸ್ವಾಮಿಗಳು ಸ್ವಾಗತಿಸಿದರು.