ದೇಶದ ಅಖಂಡತೆ ರಕ್ಷಣೆ ಮಾಡುವರನ್ನು ಬೆಂಬಲಿಸೋಣ

| Published : Mar 29 2024, 12:54 AM IST

ಸಾರಾಂಶ

ನಮ್ಮ ಸನಾತನ ಧರ್ಮ, ಪ್ರಜಾಪ್ರಭುತ್ವ, ರಾಮ ರಾಜ್ಯದ ಕಲ್ಪನೆ ಸಾಕಾರಗೊಳಿಸುವ ಮತ್ತು ದೇಶದ ಅಖಂಡತೆಯನ್ನು ರಕ್ಷಣೆ ಮಾಡುವವರನ್ನು ಈ ಚುನಾವಣೆಯಲ್ಲಿ ಬೆಂಬಲಿಸೋಣ ಎಂದು ಉಡುಪಿಯ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ನಮ್ಮ ಸನಾತನ ಧರ್ಮ, ಪ್ರಜಾಪ್ರಭುತ್ವ, ರಾಮ ರಾಜ್ಯದ ಕಲ್ಪನೆ ಸಾಕಾರಗೊಳಿಸುವ ಮತ್ತು ದೇಶದ ಅಖಂಡತೆಯನ್ನು ರಕ್ಷಣೆ ಮಾಡುವವರನ್ನು ಈ ಚುನಾವಣೆಯಲ್ಲಿ ಬೆಂಬಲಿಸೋಣ ಎಂದು ಉಡುಪಿಯ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು.

ಸ್ಥಳೀಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫಲ, ಮಂತ್ರಾಕ್ಷತೆ ನೀಡಿ ಮಾತನಾಡಿದ ಅವರು, ಈ ದೇಶದಲ್ಲಿಯೇ ಹುಟ್ಟಿ ಬೆಳೆದು, ಅನ್ನ, ನೀರಿನ ಜೊತೆಗೆ ಅಧಿಕಾರ, ಅಂತಸ್ತು ಪಡೆದುಕೊಂಡ ಅನೇಕರು ಈ ದೇಶದ ಅಖಂಡತೆ ಮತ್ತು ಸನಾತನ ಧರ್ಮ ನಾಶ ಮಾಡಲು ಹೊರಟಿರುವುದು ದುರಾದೃಷ್ಟಕರ ಸಂಗತಿ ಎಂದರು.ಇಂತವರು ಕೂಡ ಧರ್ಮ ಮತ್ತು ಸನ್ಮಾರ್ಗದಲ್ಲಿ ಬರಲಿ ಎಂದು ನಾವೆಲ್ಲ ಭಗವಂತನಲ್ಲಿ ಪಾರ್ಥಿಸೋಣ. 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಒಳ್ಳೆಯ ಸರ್ಕಾರ ಆಯ್ಕೆ ಮಾಡಿದಲ್ಲಿ ಮಾತ್ರ ರಾಮ ರಾಜ್ಯದ ನಮ್ಮ ಕನಸು ನನಸಾಗುವುದಿಲ್ಲ. ಇದಕ್ಕಾಗಿ ನಾವೆಲ್ಲ ಧರ್ಮದ ದಾರಿಯಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.ಅದೆಷ್ಟೋ ಜನ್ಮಗಳಲ್ಲಿ ಪುಣ್ಯ ಮಾಡಿದ ಪರಿಣಾಮ ನಮಗೆ ಮನುಷ್ಯ ಜನ್ಮಕ್ಕೆ ಬಂದಿರುವ ನಾವು ದೇಶದ ಮತ್ತು ಧರ್ಮದ ಒಳಿತಿಗಾಗಿ ನಿರಂತರ ಜಪ, ತಪ, ಪ್ರಾರ್ಥನೆ, ಸ್ತೋತ್ರಗಳ ಪಠಣ ಮಾಡಬೇಕು. ಆಗ ಮಾತ್ರ ನಮ್ಮ ಮಕ್ಕಳೂ ಧರ್ಮದಿಂದ ಮುನ್ನಡೆಯುತ್ತಾರೆ. ಪುಸ್ತಕ ಓದಲು ನಾವು ದೀಪ ಹಚ್ಚಿದಾಗ ಆ ದೀಪ ಪುಸ್ತಕ ಓದುವ ನಮಗೆ ಮಾತ್ರ ಬೆಳಕು ನೀಡುವುದಿಲ್ಲ. ಆ ಕೋಣೆಯಲ್ಲಿ ಇರುವವರೆಲ್ಲರಿಗೂ ಬೆಳಕು ನೀಡುವಂತೆ ನಾವು ಮಾಡಿದ ಪ್ರಾರ್ಥನೆ, ಜಪ, ತಪ, ಸ್ತೋತ್ರಗಳ ಪಠಣದಿಂದ ನಮಗೆ ಮಾತ್ರ ಅಲ್ಲ ನಮ್ಮ ಜೊತೆಗಿರುವ ಮಕ್ಕಳಿಗೂ ಪುಣ್ಯ ಬರುತ್ತದೆ ಎಂದರು.ನಮಗೆ ಮರಣ ಯಾವ ಸಮಯದಲ್ಲಾದರೂ ಬಂದು ನಮ್ಮ ಅಸ್ತಿತ್ವ ಕಳೆದುಕೊಳ್ಳಬಹುದು. ಇದು ಸತ್ಯ ಹೀಗಾಗಿ ಪ್ರತಿ ಕ್ಷಣವೂ ಸತ್ಕಾರ್ಯಗಳಲ್ಲಿ ತೊಡಗುವುದರ ಜೊತೆಗೆ ದೇವರ ನಾಮಸ್ಮರಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಠಾಧಿಕಾರಿ ಪಂ.ಎಂ.ಜಿ.ಜೋಶಿ, ಪಂ.ಬಿಂದುಮಾಧವ ಜೋಶಿ, ಪಂ.ಆರ್.ಜಿ.ಗುಡಿ, ಬ್ರಾಹ್ಮಣ ಸಮಾಜ ಸಂಘಟನೆಯ ಕಾರ್ಯಾಧ್ಯಕ್ಷ ಶ್ರೀರಾಮ ಕಟ್ಟಿ, ರಾಘವೇಂದ್ರ ಮಠದ ಟ್ರಸ್ಟಿಗಳಾದ ಎಸ್.ವಿ.ಜೋಶಿ, ಅನೀಲ ದೇಶಪಾಂಡೆ (ಹಿಡಕಲ್), ಎಲ್.ವಿ.ಕುಲಕರ್ಣಿ, ರಾಜು ಪಾಟೀಲ, ವಿಶ್ವ ಮಧ್ವ ಪರಿಷತ್ ಶ್ರೀನಿವಾಸ ಜೋಶಿ, ಬ್ರಾಹ್ಮಣ ಸಮಾಜದ ಅರವಿಂದ ದೇಶಪಾಂಡೆ, ಸುಧೀಂದ್ರ ಬಾದರಾಯಣಿ, ವಾದಿರಾಜ ಜಂಬಗಿ, ಎನ್.ಕೆ.ಪಾಟೀಲ, ಲಕ್ಷ್ಮಣ ರಾಮದಾಸಿ, ಬಾಬು ಕುಲಕರ್ಣಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿಪ್ರ ಸಮುದಾಯದವರು ಉಪಸ್ಥಿತರಿದ್ದರು. ನಂತರ ಶ್ರೀಗಳು ಫಲ, ಮಂತ್ರಾಕ್ಷತೆ ನೀಡಿದರು.----ಈ ದೇಶದ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆಗೆ ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಾಮಾಣಿಕವಾಗಿ ದೇಶಕ್ಕೆ ನಿಷ್ಠರಾದಾಗ ಮಾತ್ರ ನಿಜವಾಗಿ ರಾಮ ರಾಜ್ಯದ ಕನಸು ಸಾಕಾರಗೊಳ್ಳಲು ಸಾಧ್ಯವಾಗುತ್ತದೆ. ಆಗ ಮಾತ್ರ ಭಾರತ ವಿಶ್ವ ಗುರುವಿನ ಸ್ಥಾನ ಪಡೆದುಕೊಳ್ಳಲು ಸಾಧ್ಯ. ರಾಮರಾಜ್ಯ ವಿಧಾನಸಭೆಯಲ್ಲಾಗಲಿ ಅಥವಾ ಸಂಸತ್ ಭವನದಲ್ಲಿ ಒಮ್ಮಿಂದೊಮ್ಮೆಲೆ ನಿರ್ಮಾಣ ಆಗುವುದಿಲ್ಲ. ಇದಕ್ಕಾಗಿ ತಂದೆ-ತಾಯಿ, ನಿಸ್ವಾರ್ಥದ ಸೇವೆಯ ಪಾಠ ಬೋಧಿಸಿದ ಶ್ರೀರಾಮ ಚಂದ್ರನ ಆದರ್ಶ ಪಾಲಿಸಿಕೊಂಡು ಹೋಗಬೇಕು.ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ, ಉಡುಪಿಯ ಉತ್ತರಾದಿ ಮಠ.