ಬ್ಯಾಡಗಿ: ಪರಿಸರ ಸಂರಕ್ಷಣೆ ಕುರಿತು ವಿಶೇಷ ಕಾಳಜಿ ಹಾಗೂ ರಕ್ಷಿತ ಅರಣ್ಯ ಪ್ರದೇಶಗಳ ಅಭಿವೃದ್ಧಿ ವಿಷಯದಲ್ಲಿ ಸಾಮೂಹಿಕ ಹೊಣೆಗಾರಿಕೆ ಮತ್ತು ಪಾರದರ್ಶಕ ಚಿಂತನೆಗಳು ನಡೆಯದಿದ್ದರೇ ಜೀವ ಸಂಕುಲಗಳ ಅವನತಿಗೆ ನಾವೇ ಹೊಣೆಗಾರರಾಗಲಿದ್ದೇವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಪಟ್ಟಣದ ಕಲಾಭವನ ರಸ್ತೆಯಲ್ಲಿ ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸಂಪನ್ಮೂಲಗಳ ಶೋಷಣೆ: ಪರಿಸರ ನಾಶದ ಕುರಿತು ಜಾಗತಿಕ ಮಟ್ಟದಲ್ಲಿ ಗಮನಾರ್ಹವಾದ ಪರಿಣಾಮ ಬೀರುತ್ತದೆ. ಪರಿಸರದಲ್ಲಿನ ವ್ಯವಸ್ಥೆಗಳನ್ನು ಬಿಟ್ಟು ಯಾವುದೇ ಜೀವಸಂಕುಲಗಳು ಬದುಕಲು ಸಾಧ್ಯವಿಲ್ಲ, ಅತಿಯಾದ ಕೈಗಾರೀಕರಣ, ಅರಣ್ಯನಾಶ, ಮಾಲಿನ್ಯ ಅದರಲ್ಲಿನ ಸಂಪನ್ಮೂಲಗಳ ಅತಿಯಾದ ಶೋಷಣೆ ಮಾನವ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ ಎಂದರು.

ಖಾಲಿಯಾಗುತ್ತಿದೆ ಪ್ರಾಕೃತಿಕ ಸಂಪತ್ತು: ಮಾಜಿ ಶಾಸಕ ಸುರೇಶಗೌಡ ಮಾತನಾಡಿ, ನೀರು, ಇಂಧನ, ಮರಳು, ಅರಣ್ಯ ಪ್ರದೇಶದಲ್ಲಿರುವ ಗಿಡಮರಗಳು ಸೇರಿದಂತೆ ಖನಿಜಗಳು ನಮ್ಮೆಲ್ಲರ ಪ್ರಾಕೃತಿಕ ಸಂಪತ್ತು. ಆದರೆ ತಿಳಿದೋ ಅಥವಾ ತಿಳಿಯದೆಯೋ ಸಂಪನ್ಮೂಲಗಳ ಅತೀಯಾದ ಬಳಕೆಯಿಂದಾಗಿ ಕೊರತೆಯಾಗುತ್ತಿದೆಯಲ್ಲದೇ ನಮ್ಮ ಅರಿವಿಗೆ ಬಾರದಂತೆ ಖಾಲಿಯಾಗುತ್ತಿದ್ದು ಇದರಿಂದಾಗುವ ದುಷ್ಪರಿಣಾಮಗಳನ್ನು ನಾವೆಲ್ಲರೂ ಎದುರಿಸಬೇಕಾಗುತ್ತದೆ ಎಂದರು.

ಆರೋಗ್ಯದ ಮೇಲೆ ದುಷ್ಪರಿಣಾಮ: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕೈಗಾರಿಕಾ ತ್ಯಾಜ್ಯದಿಂದ ಪರಿಸರ ಮಾಲಿನ್ಯ ಹಾಗೂ ಅರಣ್ಯ ನಾಶದಿಂದ ಆರೋಗ್ಯದಂತಹ ಸಮಸ್ಯೆಗಳು ಸಹಜವಾಗಿ ಉಲ್ಬ ಣಗೊಳ್ಳಲಿವೆ, ಹವಾಮಾನ ಬದಲಾವಣೆಯಿಂದ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕಲುಷಿತ ನೀರಿನಿಂದ ಮಾರಕವಾದ ಕಾಯಿಲೆಗಳಿಗೆ ಮನುಷ್ಯ ತುತ್ತಾಗಬಹುದು. ಅಷ್ಟೇಏಕೆ ಪರಿಸರದ ಅವನತಿಯಿಂದ ಕೃಷಿ ಉತ್ಪಾದಕತೆಯಲ್ಲಿ ಹಿನ್ನಡೆಯಾಗಲಿದೆ ಎಂದರು.


ಈ ಸಂದರ್ಭದಲ್ಲಿ ತಾಪಂ ಇಓ ಮಲ್ಲಿಕಾರ್ಜುನ, ತಹಸೀಲ್ದಾರ್ ಚಂದ್ರಶೇಖರ ನಾಯಕ್, ಮುಖ್ಯಾಧಿಕಾರಿ ವಿನಯಕುಮಾರ, ವಲಯ ಅರಣ್ಯಾಧಿಕಾರಿ ಲೋಕೇಶ ಚೌವ್ಹಾಣ, ಮುಖಂಡರಾದ ದಾನಪ್ಪ ಚೂರಿ, ಎ.ಎಂ. ಸೌದಾಗರ, ಮಾಲತೇಶ ಆಡಿನವರ, ದುರ್ಗೇಶ ಗೊಣೇಮ್ಮನವರ, ಮಂಜುನಾಥ ಬೋವಿ, ಖಾದರಸಾಬ ದೊಡ್ಡಮನಿ, ರಾಜೇಸಾಬ ಕಳ್ಯಾಳ, ಡಿ.ಎಚ್. ಬುಡ್ಡನಗೌಡ್ರ, ಮಜೀದ ಮುಲ್ಲಾ, ಮುನಾಫ್ ಎರೇಶೀಮಿ ಸೇರಿದಂತೆ ಇನ್ನಿತರರಿದ್ದರು.