ಸಾರಾಂಶ
- ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿಗೆ ಮಾಜಿ ಸಚಿವ ರೇಣುಕಾಚಾರ್ಯ ಸವಾಲು
- ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪಕ್ಷಕ್ಕೆ ಹೊಸ ರೂಪ ಬಂದಿದೆ- ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಟಿಪ್ಪು ವೇಷ ಹಾಕಿ ಖಡ್ಗ ಹಿಡಿದಿದ್ದನ್ನೇ ಯತ್ನಾಳ್ ಮರೆತಿರಬೇಕು - - - ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದು ಕೇಂದ್ರದ ನಾಯಕರು. ವಿಜಯೇಂದ್ರ ಅಧ್ಯಕ್ಷರಾದ ನಂತರ ಬಿಜೆಪಿಗೆ ಹೊಸ ರೂಪ ಬಂದಿದೆ. ಅವರ ನಾಯಕತ್ವದಲ್ಲಿ ಪಕ್ಷ ಸಂಘಟನೆ ಆಗಿಲ್ಲವೇ? ನಿಮಗೆ ತಾಕತ್ತಿದ್ದರೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ನೋಡೋಣ ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲೆಸೆದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಹಗರಣ ಬಯಲಿಗೆಳೆದಿದ್ದೇ ಬಿ.ವೈ.ವಿಜಯೇಂದ್ರ ಸಾರಥ್ಯದಲ್ಲಿ. ಮೈಸೂರಿನ ಮುಡಾ ಸೈಟ್ ಹಗರಣದ ವಿರುದ್ಧ ಹೋರಾಟ ನಡೆಸಿದರು. ಇದೀಗ ವಕ್ಪ್ ಮಂಡಳಿಯು ರಾಜ್ಯದ ಹಿಂದುಗಳು, ರೈತರು, ಮಠಗಳು, ದೇವಸ್ಥಾನಗಳ ಆಸ್ತಿ ಕಬಳಿಸಲು ಹೊರಟಿದ್ದರ ವಿರುದ್ಧ ನ.4ರಂದು ರಾಜ್ಯವ್ಯಾಪಿ ಹೋರಾಟಕ್ಕೂ ಕರೆ ನೀಡಿದ್ದಾರೆ ಎಂದು ತಿಳಿಸಿದರು.
ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯಾಗಿ, ಜೆಡಿಎಸ್‌ಗೆ ಹೋಗಿದ್ದರು. ಅಲ್ಲಿ ಟಿಪ್ಪು ಸುಲ್ತಾನ್ ವೇಷ ಹಾಕಿಕೊಂಡು, ಖಡ್ಗ ಹಿಡಿದಿದ್ದನ್ನೇ ಯತ್ನಾಳ್ ಮರೆತಿರಬೇಕು. ಹಿಂದು ಹುಲಿ ಅಂತಾ ತಮಗೆ ತಾವೇ ಲೇಬಲ್ ಹಾಕಿಕೊಂಡಿದ್ದಾರೆ ಎಂದರು.ರಾಜ್ಯದಲ್ಲಿ ಯಡಿಯೂರಪ್ಪ ಅವರು ಸೈಕಲ್ಲನ್ನೇರಿ ಹಳ್ಳಿಹಳ್ಳಿಗಳ ಸುತ್ತಾಡಿ, ಬಿಜೆಪಿಯನ್ನು ಕಟ್ಟದೇ ಇದ್ದಿದ್ದರೆ ಇಂದು ಯತ್ನಾಳ್ ಶಾಸಕರಾಗಿ ಇರುತ್ತಿರಲಿಲ್ಲ. ಯಡಿಯೂರಪ್ಪನವರ ಕೈ-ಕಾಲು ಹಿಡಿದು, ಬಿಜೆಪಿಗೆ ಮರಳಿದ್ದನ್ನು ಅವರು ಮರೆತಿರಬೇಕು. ನೀವೊಬ್ಬರು ಹೇಳಿದಾಕ್ಷಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾ ಎಂದು ಕಿಡಿಕಾರಿದರು.
ಯತ್ನಾಳ್‌ರವರೇ, ನಿಮ್ಮನ್ನು ಸ್ಟಾರ್ ಮಾಡಿದ್ದೇ ಯಡಿಯೂರಪ್ಪ ಅನ್ನೋದೇ ಮರೆತಿರಾ? ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಅಂತಾ ಯತ್ನಾಳ್ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಬಿಜೆಪಿ ಗೆದ್ದರೆ ವಿಜಯೇಂದ್ರಗೆ ಹೆಸರು ಬರುತ್ತದೆಂದು ಕಾಂಗ್ರೆಸ್ ಜೊತೆಗೆ ಶಾಮೀಲಾಗಿ, ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷ ನಿಷ್ಟೆ ಇಲ್ಲದವರು ನೀವು. ನೀವು ಐದಾರು ಜನ ಸೇರಿಕೊಂಡು, ಸಭೆ ಮಾಡ್ತಿರಾ ಎಂದು ಅವರು ತರಾಟೆಗೆ ತೆಗೆದುಕೊಂಡರು.ನಾವು ಉಪ ಚುನಾವಣೆ ಮುಗಿದ ಬಳಿಕ ಮಾಜಿ ಸಚಿವರು, ಹಾಲಿ-ಮಾಜಿ ಶಾಸಕರು ಸೇರಿ, ಸಭೆ ಮಾಡುತ್ತೇವೆ. ಜಿಲ್ಲಾ ಮಟ್ಟದ ಎಲ್ಲಾ ನಾಯಕರ ಸಭೆಗಳನ್ನೂ ಮಾಡುತ್ತೇವೆ. ಕೇಂದ್ರದ ನಾಯಕರನ್ನು ನಾವೂ ಭೇಟಿ ಮಾಡುತ್ತೇವೆ. ವಿಜಯೇಂದ್ರ, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ಅಂತಹವರಿಗೆ ಮುಂದಿನ ದಿನಗಳಲ್ಲಿ ನಾವೂ ಉತ್ತರ ನೀಡುತ್ತೇವೆ ಎಂದು ರೇಣುಕಾಚಾರ್ಯ ಗುಟುರು ಹಾಕಿದರು.
- - -ಬಾಕ್ಸ್ * ಯತ್ನಾಳ್‌ಗೆ ಹೆಣ್ಣುಮಕ್ಕಳಿಂದ ಪೊರಕೆ ಸೇವೆ, ಎಚ್ಚರಿಕೆ
- ಬಿಎಸ್‌ವೈ ಮನೆಯಲ್ಲೇ ತಿಂದು, ಗಳ ಎಣಿಸುತ್ತೀರಾ?: ಮಾಡಾಳ್ ಮಲ್ಲಿಕಾರ್ಜುನ ಕನ್ನಡಪ್ರಭ ವಾರ್ತೆ, ದಾವಣಗೆರೆಇನ್ನು ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರೆ, ಪೊರಕೆ ಸೇವೆ ಮಾಡುವುದಕ್ಕೆ ಹೆಣ್ಣುಮಕ್ಕಳು ಮುಂದಾಗಲಿದ್ದಾರೆ ಎಂದು ಚನ್ನಗಿರಿ ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಎಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರರ ವಿರುದ್ಧ ಬಸವನಗೌಡ ಯತ್ನಾಳ್ ಅನವಶ್ಯಕವಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪನವರ ಬಗ್ಗೆ ಮಾತನಾಡಲು ಯತ್ನಾಳ್‌ಗೆ ನೈತಿಕತೆಯೇ ಇಲ್ಲ. ನೀವು ಹೀಗೇ ಮಾತನಾಡುತ್ತಿದ್ದರೆ ಪೊರಕೆ ಸೇವೆ, ಒನಕೆ ಸೇವೆ ಮಾಡುವುದಕ್ಕೂ ಮಹಿಳೆಯರು ಸಿದ್ಧವಾಗಿದ್ದಾರೆ ಎಂದರು.ಹೊಂದಾಣಿಕೆ ರಾಜಕಾರಣ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಕಾರಣರಾದವರೇ ನೀವು. ಬಿಜೆಪಿ ಸರ್ಕಾರದಲ್ಲಿ ಪಂಚಮಸಾಲಿ ಸಮಾಜದ ಹೋರಾಟ ಹಮ್ಮಿಕೊಂಡು, ಜನರನ್ನು ದಾರಿ ತಪ್ಪಿಸಿದ್ದಿರಿ. ಈಗ ನೀವ್ಯಾಕೆ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ನಡೆಸುತ್ತಿಲ್ಲ ಎಂದು ಯತ್ನಾಳರನ್ನು ಪ್ರಶ್ನಿಸಿದರು.
ಪಂಚಮಸಾಲಿ ಸೇರಿದಂತೆ ಲಿಂಗಾಯತರಿಗೆ 2ಎ ಮೀಸಲಾತಿ ಕೊಡಿಸುವುದಕ್ಕೆ, ಕೇಂದ್ರದಲ್ಲಿ ಒಬಿಸಿ ಮೀಸಲಾತಿ ದೊರಕಿಸಲು ಮಾಜಿ ಸಿಎಂ ಯಡಿಯೂರಪ್ಪನವರು ಮಾಡಿಲ್ಲವೇ? ಯಡಿಯೂರಪ್ಪನವರ ಮನೆಯಲ್ಲಿ ತಿಂದು, ಅವರ ಮನೆಯ ಗಳ ಎಣಿಸುತ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.- - - (ಫೋಟೋ: ರೇಣುಕಾಚಾರ್ಯ)