ಪಂಚಮಸಾಲಿ ಪೀಠದ ಲೆಕ್ಕ ಕೇಳಿದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ನನ್ನ ವಿರುದ್ಧ ಜಿಲ್ಲಾಧಿಕಾರಿಗೆ ಟ್ರಸ್ಟ್‌ನವರು ದೂರು ನೀಡಿದ್ದು, ತಮ್ಮ ವಿರುದ್ಧ ಟ್ರಸ್ಟ್‌ನವರು ಮಾಡಿದ ಆರೋಪಗಳೆಲ್ಲಾ ಸುಳ್ಳು ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದ್ದಾರೆ.
- ನಮ್ಮ ರಕ್ತವನ್ನೂ ಪರೀಕ್ಷೆ ಮಾಡಿಸಲಿ: ಮಾಜಿ ಶಾಸಕ ಅರುಣಕುಮಾರ ಪೂಜಾರ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪಂಚಮಸಾಲಿ ಪೀಠದ ಲೆಕ್ಕ ಕೇಳಿದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ನನ್ನ ವಿರುದ್ಧ ಜಿಲ್ಲಾಧಿಕಾರಿಗೆ ಟ್ರಸ್ಟ್‌ನವರು ದೂರು ನೀಡಿದ್ದು, ತಮ್ಮ ವಿರುದ್ಧ ಟ್ರಸ್ಟ್‌ನವರು ಮಾಡಿದ ಆರೋಪಗಳೆಲ್ಲಾ ಸುಳ್ಳು ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೀಠದಲ್ಲಿ ಲೆಕ್ಕ ಕೇಳಿದವರು ಗಲಾಟೆ ಮಾಡಿದ್ದಾರೆಂದು, ಅನ್ಯ ಸಮಾಜದವರನ್ನು ಕರೆ ತಂದಿದ್ದರೆಂದು, ಕುಡಿದು ಬಂದಿದ್ದರೆಂದೆಲ್ಲಾ ಸುಳ್ಳು ಆರೋಪಗಳನ್ನು ಮಾಡಿರುವ ಟ್ರಸ್ಟ್‌ನವರು ಅದನ್ನು ಸಾಬೀತುಪಡಿಸದಿದ್ದರೆ, ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿಯವರ ನಿವಾಸದ ಮುಂದೆ ಅದೇ ಬಾಟಲುಗಳ ಸಮೇತ ಪ್ರತಿಭಟನೆ ಮಾಡುತ್ತೇವೆ ಎಂದರು.ನಾವ್ಯಾರೂ ಮದ್ಯ ಸೇವನೆ ಮಾಡುವುದಿಲ್ಲ. ನಮ್ಮನ್ನು ಕುಡುಕರೆಂದು ಆರೋಪಿಸಿದವರ ಬ್ಲಡ್ ಸ್ಯಾಂಪಲ್ ಹಾಗೂ ನಮ್ಮೆಲ್ಲರ ಬ್ಲಡ್ ಸ್ಯಾಂಪಲ್ ತೆಗೆದು, ಯಾರು ಕುಡುಕರೆಂಬುದನ್ನು ಸಾಬೀತುಪಡಿಸಬೇಕು. ಪಂಚಮಸಾಲಿ ಪೀಠದೊಳಗೆ ಅನ್ಯ ಸಮಾಜದವರು ಯಾಕೆ ಬರುತ್ತಾರೆ? ಬೇರೆ ಸಮಾಜದವರನ್ನು ಕರೆ ತರುವ ಅಗತ್ಯವಾದರೂ ನಮಗೆ ಏನಿದೆ? ಸುಮಾರು 80 ಲಕ್ಷದಿಂದ 1 ಕೋಟಿ ಜನಸಂಖ್ಯೆಯ ನಮ್ಮದು ಅತ್ಯಂತ ದೊಡ್ಡ ಸಮಾಜ. ಸಮಾಜದಲ್ಲಿ ಅನ್ಯಾಯವಾದಾಗ ಲೆಕ್ಕ ಕೇಳುವ ಹಕ್ಕು ಎಲ್ಲರಿಗೂ ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.
ನಾವು ಯಾರು ಯಾರು ಗಲಾಟೆ ಮಾಡಿದ್ದೇವೆ ಎಂಬುದನ್ನು ಟ್ರಸ್ಟ್‌ನವರು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಕ್ಷಮೆ ಕೇಳಬೇಕು. ಇದಕ್ಕೆ ಸ್ಪಂದಿಸದಿದ್ದರೆ ಬಿ.ಸಿ.ಉಮಾಪತಿ ಸೇರಿದಂತೆ ದೂರು ನೀಡಿರುವ ಟ್ರಸ್ಟಿಗಳ ಮನೆ ಮುಂದೆ ಸಮಾಜ ಬಾಂಧವರು ಪ್ರತಿಭಟಿಸಲಿದ್ದಾರೆ. ನಾವ್ಯಾರೂ ಕುಡಿಯುವುದುಲಿಲ. ಆದರೂ, ನಮ್ಮ ಮೇಲೆ ಕುಡಿದು ಬಂದು ಗಲಾಟೆ ಮಾಡಿದ್ದ ಬಗ್ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಮದ್ಯದ ಬಾಟಲುಗಳ ಸಮೇತವೇ ಟ್ರಸ್ಟಿಗಳ ಮನೆ ಮುಂದೆ ಪ್ರತಿಭಟಿಸುತ್ತೇವೆ ಎಂದು ಅರುಣಕುಮಾರ ಎಚ್ಚರಿಸಿದರು.- - -
(ಬಾಕ್ಸ್)* ನನ್ನ ಕುಟುಂಬದ ಸದಸ್ಯನಿಗೆ ಪಕ್ಕ ಕೂಡಿಸಿ ಮಾತಾಡ್ತೀರಾ?
- ನಿಮ್ಮಂತೆ ನಾನು ಮಾಡುವುದಿಲ್ಲ: ಎಚ್ಚೆಸ್ ಶಿವಶಂಕರ ಗುಟುರು ಕನ್ನಡಪ್ರಭ ವಾರ್ತೆ ದಾವಣಗೆರೆನಗುತ್ತಾ ಮಾಡಿದ್ದನ್ನು ಅಳುತ್ತಾ ಅನುಭವಿಸಬೇಕಾಗುತ್ತದೆ ಎಂಬುದನ್ನು ಪಂಚಮಸಾಲಿ ಟ್ರಸ್ಟಿಗಳು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕರ್ಮ ಯಾರನ್ನೂ ಬಿಡುವುದಿಲ್ಲ. ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ಟ್ರಸ್ಟಿಗಳೆಲ್ಲರೂ 2008ರಿಂದ ಈವರೆಗಿನ ಪೈಸೆ ಪೈಸೆ ಲೆಕ್ಕವನ್ನೂ ಕೊಡಬೇಕು ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ತಾಕೀತು ಮಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟಿ ಬಿ.ಸಿ. ಉಮಾಪತಿ ಒಳ್ಳೆಯವರಿರಬಹುದು. ಅಂತಹವರ ಹೆಸರಿಗೆ ಕಳಂಕ ಬರುವುದೂ ಬೇಡ. ಉಮಾಪತಿಯವರೇ ಬಂದು ಪೈಸೆ ಪೈಸೆ ಲೆಕ್ಕ ಕೊಡಲಿ. ಪ್ರಧಾನ ಧರ್ಮದರ್ಶಿ ಉಮಾಪತಿ ಹೊರತುಪಡಿಸಿ, ಉಳಿದೆಲ್ಲಾ ಟ್ರಸ್ಟಿಗಳನ್ನೂ ಬದಲಾವಣೆ ಮಾಡಲಿ. ನಾವ್ಯಾರೂ ಕುಡುಕರಲ್ಲ, ಅನ್ಯ ಸಮಾಜದವರನ್ನು ಪೀಠದೊಳಗೆ ಕರೆ ತಂದಿಲ್ಲ. ಲೆಕ್ಕ ಕೇಳಲು ಬಂದವರಿಗೆ ಕುಡುಕರನ್ನು ಕರೆ ತಂದಿದ್ದರೆಂಬ ಆರೋಪ ಮಾಡಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದರು.ನಮ್ಮದೇ ಕುಟುಂಬದ ಸದಸ್ಯನನ್ನು ನೀವು ನಿಮ್ಮ ಜೊತೆಗೆ ಕೂಡಿಸಿಕೊಂಡು ಮಾತನಾಡಿದಂತೆ ನಾನು ಮಾಡುವುದಕ್ಕೆ ಹೋಗುವುದಿಲ್ಲ. ನಿಮ್ಮ ಕುಟುಂಬದಲ್ಲೂ ಒಡಕುಗಳಿವೆ. ನಿಮ್ಮ ಕುಟುಂಬದವರೇ ನನಗೆ ಹೇಳುತ್ತಿದ್ದಾರೆ. ನೀವು ಮಾಡಿದಂತೆ ನಾನು ಮಾಡುವುದಿಲ್ಲ. ಮೇ 20ರಂದು ಕೊಟ್ಟೂರಿನಲ್ಲಿ ಶ್ರೀ ಗುರು ಕೊಟ್ಟೂರೇಶ್ವರನ ಸನ್ನಿಧಿಯಲ್ಲಾಗಲೀ ಅಷ್ಟರ ಒಳಗಾಗಿ ಹನಗವಾಡಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಥವಾ ದಾವಣಗೆರೆ ದುಗ್ಗಮ್ಮನ ದೇವಸ್ಥಾನಕ್ಕೆ ಬಂದು, ಲೆಕ್ಕ ಕೊಟ್ಟು, ಉಮಾಪತಿಯವರು ಗಂಟೆ ಹೊಡೆಯಲಿ. ಆಗ ನಿಮ್ಮ ಬದ್ಥತೆಯನ್ನು ನಾವು ಒಪ್ಪುತ್ತೇವೆ ಎಂದು ಸವಾಲು ಹಾಕಿದರು.
- - -(ಕೋಟ್) ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಈ ಹಿನ್ನೆಲೆ ಸ್ವಾಮೀಜಿಗೆ ಸೂಕ್ತ ಭದ್ರತೆ, ರಕ್ಷಣೆ ಒದಗಿಸಬೇಕು. ಶ್ರೀಗಳಿಗೆ ಎಸ್ಕಾರ್ಟ್ ನೀಡುವಂತೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸುತ್ತೇವೆ. ಉಪ ಮುಖ್ಯಮಂತ್ರಿ, ಗೃಹ ಮಂತ್ರಿ, ರಾಜ್ಯ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠರಿಗೂ ಈ ಬಗ್ಗೆ ಮನವಿ ಮಾಡುತ್ತೇವೆ.
- ಎಚ್.ಎಸ್.ಶಿವಶಂಕರ, ಮಾಜಿ ಶಾಸಕ, ಪಂಚಮಸಾಲಿ ಮುಖಂಡ.- - -
(ಫೋಟೋ???)