ಮತ ಹಾಕಿ ಜವಾಬ್ದಾರಿ ನಿರ್ವಹಿಸೋಣ

| Published : Apr 27 2024, 01:15 AM IST

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೇ ೭ರಂದು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಜವಾಬ್ದಾರಿ ನಿರ್ವಹಿಸೋಣ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ.ಆರ್.ಮುಂಡರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೇ ೭ರಂದು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಜವಾಬ್ದಾರಿ ನಿರ್ವಹಿಸೋಣ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ.ಆರ್.ಮುಂಡರಗಿ ಹೇಳಿದರು.

ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಜಾಪ್ರಭುತ್ವದ ಹಬ್ಬ ಎಂದು ಅತ್ಯಂತ ಸಂಭ್ರಮದಿಂದ ಆಚರಿಸೋಣ. ಆದ್ದರಿಂದ ಎಲ್ಲರೂ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಮೇ 7ರಂದು ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಂಎಂ ತುಂಬರಮಟ್ಟಿ ಮಾತನಾಡಿ, ಯುವ ಮತದಾರರು ಮತ್ತು ಮೊಟ್ಟಮೊದಲ ಬಾರಿಗೆ ಮತ ನೀಡುತ್ತಿರುವವರು ಮತದಾನ ಮಾಡಿದರೆ ಮಾತ್ರ ಸುಭದ್ರವಾದ ಸರ್ಕಾರ ರಚಿಸಲು ಸಾಧ್ಯ. ನೀವು ಮತದಾನ ಮಾಡಿ ನಿಮ್ಮ ಕುಟುಂಬ ಹಾಗೂ ನಿಮ್ಮ ನೆರೆಹೊರೆಯವರೂ ಸಹ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ತಿಳಿಸಿದರು.ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ.ಅಲ್ಲಾಪೂರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಎಲ್ಲರೂ ತಪ್ಪದೇ ಮತದಾನ ಮಾಡಿ ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಿಸಲು ಸಹಕರಿಸಬೇಕು, ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಮತದಾನದಿಂದ ಯಾರೂ ಸಹ ಹೊರಗುಳಿಯಬಾರದು. ಆದ್ದರಿಂದ ಎಲ್ಲ ಮಹಿಳೆಯರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿ ಎಂದರು.

ಈ ವೇಳೆ ವಸತಿ ನಿಲಯದ ವಿದ್ಯಾರ್ಥಿನಿಯರು ಸೇರಿ ಮತದಾನ ಜಾಗೃತಿ ಕುರಿತು ಘೋಷಣೆಗಳನ್ನು ಕೂಗಿದರು ಮತ್ತು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ಸಹಾಯಕ ಯಾಸೀನ ಬಾಗವಾನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಕಲ್ಯಾಣಶೆಟ್ಟಿ, ಜಿಪಂ ಅಮೋಘಸಿದ್ದ ಗೌಳಿ, ವಿಶ್ವನಾಥ ಶಹಾಪೂರ, ಶ್ರೀಧರ ಹೊಸಮನಿ, ಪುನೀತ ಕೆಲೂರ, ಸುವರ್ಣ ಭಜಂತ್ರಿ ಮುಂತಾದವರು ಇದ್ದರು.