ಔಷಧಿ ಗಿಡಮೂಲಿಕೆಗಳ ಅಭಿವೃದ್ಧಿಗೂ ಶ್ರಮಿಸೋಣ

| Published : Oct 17 2023, 12:46 AM IST

ಸಾರಾಂಶ

ಹರ್ಬಲ್‌ ಔಷಧಿ ಮೂಲಕವೂ ರೋಗಿ ಗುಣಮುಕ್ತ, ಬೀದರ್‌ ಪಶು ವಿವಿಯ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಗೆಹ್ಲೋಟ್‌ ಅಭಿಮತ
ಬೀದರ್‌: ಅಲೋಪತಿ ಅಷ್ಟೇ ಅಲ್ಲ ಔಷಧಿ ಗುಣಗಳುಳ್ಳ ಗಿಡಮೂಲಿಕೆಗಳ ಮೂಲಕವೂ ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದಾಗಿದ್ದರಿಂದ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಇತ್ತ ಹೆಚ್ಚಿನ ಆಧ್ಯತೆ ನೀಡಲಿ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಅವರು ತಿಳಿಸಿದರು. ಇಲ್ಲಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಶುಗಳ ಆರೋಗ್ಯ ರಕ್ಷಣೆ ಹಾಗೂ ಸುಧಾರಣೆಯಲ್ಲಿ ಪಶು ವೈದ್ಯರ ಪಾತ್ರ ಹಿರಿದಾಗಿದೆ. ಅತ್ಯುತ್ತಮ ಅಧ್ಯಯನದ ಮೂಲಕ ಪದವಿಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ರಾಷ್ಟ್ರದ ಅಭಿವೃದ್ಧಿ ರೈತನ ಅಭಿವೃದ್ಧಿಯಲ್ಲಿ ಅಡಗಿದೆ. ಪಶು ಪಾಲನೆಯು ರೈತರ ಆದಾಯ ವೃದ್ಧಿಸುವದಲ್ಲದೆ ದೇಶದ ಆರ್ಥಿಕತೆಯನ್ನು ಸಹ ಉತ್ತುಂಗಕ್ಕೆ ಏರಿಸುವದರಲ್ಲಿ ಸಂದೇಹವಿಲ್. ಹೀಗಾಗಿ ಕೃಷಿ ಉತ್ಪಾದನೆ ಹಾಗೂ ರೈತರ ಆದಾಯ ವೃದ್ಧಿಸುವಲ್ಲಿಯೂ ನಾವೆಲ್ಲ ಅಗತ್ಯ ಶ್ರಮ ಹಾಕಬೇಕಿದೆ ಎಂದರು. ಇಂದು ಜಲ, ವನ, ವಾಯು ಭೂಮಿಯ ರಕ್ಷಣೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಅವಶ್ಯಕವಾಗಿದೆ ಎಂದು ತಿಳಿಸಿದರು. ವಿಶ್ವದ ಅತ್ಯುತ್ತಮ ಆರ್ಥಿಕ ಸ್ಥಿತಿ ಹೊಂದಿರುವ 5ನೇ ದೇಶವಾಗಿ ಭಾರತ ಹೊರಹೊಮ್ಮಿದ್ದು ಸ್ವಾತಂತ್ರ್ಯದ 100ನೇ ವರ್ಷದ ಒಳಗಾಗಿ ಇದು 3ನೇ ಸ್ಥಾನಕ್ಕೇರುವ ಎಲ್ಲ ಆಶಾಭಾವಗಳೂ ಇವೆ ಎಂದರು. ಆತ್ಮ ನಿರ್ಭರ ಭಾರತ, ಏಕ ಭಾರತ, ಶ್ರೇಷ್ಠ ಭಾರತ ಮಾಡುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಗ್ರಾಮೀಣ ವಿಕಾಸದ ಗುರಿ ಇಟ್ಟುಕೊಂಡು ಸ್ಥಾಪಿತವಾದ ಬೀದರ್‌ನ ಈ ಪಶು ವೈದ್ಯಕೀಯ ವಿಶ್ವವಿದ್ಯಾಲಯವು ಆ ಉದ್ದೇಶವನ್ನು ಪೂರ್ತಿ ಮಾಡಲು ಶ್ರಮಿಸುತ್ತಿದೆ ಎಂದರು. ಇಂದು ಪದವಿ ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳು, ತಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ. ಇಂದಿನ ಯುಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಲವಾರು ಸಂಶೋಧನೆಗಳನ್ನು ಮಾಡುವ ಮೂಲಕ ಕೃಷಿಕ ಸಮುದಾಯದಲ್ಲಿ ಪರಿವರ್ತನೆ ತರಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾದ ಕೆ.ವೆಂಕಟೇಶ, ಭಾರತೀಯ ಕೃಷಿ ಅನುಸಂಧಾನ (ಕೃಷಿ ಶಿಕ್ಷಣ) ಪರಿಷತ್ತು ನವ ದೆಹಲಿಯ ಉಪ ಮಹಾ ನಿರ್ದೇಶಕರಾದ ಡಾ. ಆರ್‌.ಸಿ. ಅಗ್ರವಾಲ್‌ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದರು. ಕುಲಪತಿಗಳಾದ ಪ್ರೊ. ಕೆ.ಸಿ ವೀರಣ್ಣ ಅವರು ಸ್ವಾಗತ ಭಾಷಣ ಮತ್ತು ಸಂಕ್ಷಿಪ್ತ ವರದಿ ವಾಚಿಸಿದರು. ಕುಲಸಚಿವ ಶಿವಶಂಕರ್‌ ಎಸ್‌, ಸಂಶೋಧನಾ ನಿರ್ದೇಶಕ ಡಾ. ಬಿ.ವಿ ಶಿವಪ್ರಕಾಶ, ವಿಸ್ತರಣಾ ನಿರ್ದೇಶಕ ಡಾ. ಎನ್‌ಎ ಪಾಟೀಲ್‌, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಶಿಲ್ಪಾ. ಎಂ, ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌, ಆಡಳಿತ ಮಂಡಳಿಯ ಸದಸ್ಯರು, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯರು, ವಿವಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.