ಸಾರಾಂಶ
ಮಕ್ಕಳಲ್ಲಿ, ಸಮಾಜದಲ್ಲಿ ಏಕತೆ ಭಾವನೆಯನ್ನು ಮರುಸ್ಥಾಪಿಸುವ ಕೆಲಸ ಆಗಬೇಕು
ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ೧ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರ ಚಾಲನೆ
ಕನ್ನಡಪ್ರಭ ವಾರ್ತೆ ಶಿರಸಿಮಕ್ಕಳಲ್ಲಿ, ಸಮಾಜದಲ್ಲಿ ಏಕತೆ ಭಾವನೆಯನ್ನು ಮರುಸ್ಥಾಪಿಸುವ ಕೆಲಸ ಆಗಬೇಕು ಎಂದು ೧ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಕಿರಣ ಕಿಣಿ ಹೇಳಿದರು.ಪೊಲೀಸ್ ಉಪವಿಭಾಗದಿಂದ ನಗರದಲ್ಲಿ ಶುಕ್ರವಾರ ನಡೆದ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಣ್ಣವರಿರುವಾಗನಿಂದಲೂ ನಾವೆಲ್ಲ ಒಂದು ಎಂದು ತಿಳಿದುಕೊಂಡು ಬಂದಿದ್ದೇವೆ. ಆದರೆ ಈಗ ಜಾತಿ, ಧರ್ಮ, ಪಂಥಗಳ ಆಧಾರದಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುವ ವಾತಾವರಣ ಬೆಳೆಯುತ್ತಿದೆ. ಮುಖ್ಯವಾಗಿ ಇದು ಭವಿಷ್ಯದ ಮಕ್ಕಳಲ್ಲಿ ಮನಸಲ್ಲಿಯೂ ಮೂಡುತ್ತಿದೆ. ಇದರಿಂದ ಸಮಗ್ರತೆ, ಏಕತೆಗೆ ಹಾನಿ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, 2014ರಿಂದಲೂ ಏಕತಾ ಹಾಗೂ ಸದ್ಭಾವನೆ ದಿವಸ ಆಚರಿಸಲ್ಪಡುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಯಾವ ಉದ್ದೇಶದಿಂದ ಏಕೀಕರಣ ಮಾಡಿದ್ದಾರೊ ಅದರ ಆಶಯಕ್ಕೆ ಧಕ್ಕೆ ಆಗಬಾರದು. ನಾವು ಏಕತೆಯಿಂದ ಇದ್ದರೆ ಸುರಕ್ಷಿತರಾಗಿರುತ್ತೇವೆ ಎಂದರು.ಡಿವೈಎಸ್‌ಪಿ ಗೀತಾ ಪಾಟೀಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್, ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ., ಗ್ರಾಮೀಣ ಠಾಣೆಯ ಪಿಎಸ್ಐ ಸಂತೋಷಕುಮಾರ್ ಎಂ., ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ, ಹೊಸ ಮಾರುಕಟ್ಟೆ ಠಾಣೆಯ ಪಿಪಿಎಸ್‌ಐ ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿ ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ನಂತರ ಪೊಲೀಸ್ ಸಿಬ್ಬಂದಿ ಒಳಗೊಂಡು ನಡೆದ ಏಕತಾ ಓಟ ವಿಕಾಸಾಶ್ರಮದಿಂದ ಪ್ರಾರಂಭವಾಗಿ ಅಶ್ವಿನಿ ವೃತ್ತ, ದೇವಿಕೆರೆ, ನಟರಾಜ ರಸ್ತೆ, ಬಿಡ್ಕಿಬೈಲ್, ಮಾರಿಕಾಂಬಾ ದೇವಸ್ಥಾನ, ಶಿವಾಜಿಚೌಕ, ರಾಘವೇಂದ್ರ ವೃತ್ತ ಮೂಲಕ ಸಾಗಿತು.ಮ್ಯಾರಾಥಾನ್‌ನಲ್ಲಿ ಭಾಗಿಯಾಗಿರುವ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 18 ವರ್ಷಕ್ಕಿಂತ ಒಳಗಿನವರಲ್ಲಿ ಮಾರಿಕಾಂಬಾ ಕಾಲೇಜಿನ ವಿದ್ಯಾರ್ಥಿ ಆದರ್ಶ ಗೌಡ (ಪ್ರಥಮ), ಆವೆ ಮರಿಯಾ ಶಾಲೆಯ ಆದಿತ್ಯ ಮಹೇಶ್ ನಾಯ್ಕ(ದ್ವಿತೀಯ) ಚಂದನ ಬಳ್ಳಾರಿ (ತೃತೀಯ), 18 ವರ್ಷದ ಮೇಲ್ಪಟ್ಟ ಮ್ಯಾರಥಾನ್‌ನಲ್ಲಿ ಅರಣ್ಯ ಮಹಾವಿದ್ಯಾಲಯದ ವಿಜಯ ಅರಬಾಳ (ಪ್ರಥಮ), ಪ್ರೋಗ್ರೆಸ್ಸಿವ್ ಕಾಲೇಜಿನ ಮುಸ್ತಾಪ ಗೌಸಫರ್(ದ್ವಿತೀಯ), ಅರಣ್ಯ ಮಹಾವಿದ್ಯಾಲಯದ ಲಕ್ಷ್ಮೀಕಾಂತ ಸುನೀಲಕುಮಾರ್ (ತೃತೀಯ) ಹಾಗೂ ಮಾರುಕಟ್ಟೆ ಪೊಲೀಸ್ ಠಾಣೆಯ ವಿಶ್ವನಾಥ್ ಭಂಡಾರಿ ಸ್ಫೂರ್ತಿಕರ ಬಹುಮಾನ ಪಡೆದರು. ವಿಜೇತರಿಗೆ ಬಹುಮಾನ ಹಾಗೂ ಪದಕವನ್ನು ಅಧ್ಯಕ್ಷತೆ ವಹಿಸಿದ್ದ ಡಿಎಸ್‌ಪಿ ಗೀತಾ ಪಾಟೀಲ್ ವಿತರಿಸಿದರು. ಮ್ಯಾರಾಥಾನ್‌ನಲ್ಲಿ ಸುಮಾರು 150 ರಿಂದ 200 ಜನರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))