ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಸರ್ಕಾರದ ಕಡೆಯಿಂದಲೂ ಸಂಸ್ಕೃತ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ಬೇಕು. ಈಗ ಇರುವ ಅಡಚಣೆ ದೂರವಾಗಲಿ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಶನಿವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಶಿರಸಿ ಶಿಕ್ಷಣಿಕ ಜಿಲ್ಲಾ ಘಟಕ ಹಮ್ಮಿಕೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.
ಸಂಸ್ಕೃತಕ್ಕೆ ಸರ್ಕಾರದ ಕಡೆಯಿಂದ ಉತ್ತೇಜನ ಕೊಡುವ ಅಗತ್ಯತೆ ಇದೆ. ಪ್ರೌಢ ಶಾಲಾ ಹಂತದಲ್ಲಿ ಸಂಸ್ಕೃತ ಮುಂದುವರಿಸುವುದೇ ಕಷ್ಟ ಎಂಬ ಸಂಗತಿ ಇದೆ. ಸಂಸ್ಕೃತ ಸಾಹಿತ್ಯ ಅರಿತರೆ ಉದ್ಯೋಗ ನಿರೀಕ್ಷೆ ಕಡಿಮೆ ಇದ್ದರೂ ಬದುಕಿಗೆ ಬರುತ್ತದೆ ಎಂದ ಅವರು, ಸಂಸ್ಕೃತ ಓದಿದವರಿಗೆ ಹೆಚ್ಚಿನ ಹೊಣೆಗಾರಿಕೆ ಸಮಾಜದಲ್ಲಿದೆ. ಪ್ರೌಢ ಶಾಲಾ ಹಂತದಲ್ಲಿ ಸಂಸ್ಕೃತ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ. ಸಂಸ್ಕೃತ ಓದುವವರಿಗೆ ಉತ್ತೇಜನ ನೀಡಲು ಇಂತಹ ಕಾರ್ಯಕ್ರಮ ಪ್ರಶಸ್ತ ಎಂದರು.ಸಂಸ್ಕೃತದೊಳಗಿನ ವಿಷಯ ಓದಿ ತಿಳಿದು ಸಮಾಜಕ್ಕೆ ಹೇಳುವ ಕಾರ್ಯ ಆಗಬೇಕು. ಸಂಸ್ಕೃತದಲ್ಲಿ ಅನೇಕ ಪ್ರಾಚೀನ ಭಾರತೀಯ ಜೀವನ ದೃಷ್ಟಿಕೋನ ಸಿಗಲಿದೆ ಎಂದ ಶ್ರೀಗಳು, ಸಂಸ್ಕೃತ ಪ್ರೌಢ ಶಾಲಾ ಹಂತದಲ್ಲಿ ಓದುತ್ತಾರೆ. ಅದನ್ನು ಮುಂದೆ ಕೂಡ ಇಟ್ಟು ಕೊಳ್ಳಬೇಕು. ಇಲ್ಲವಾದರೆ ಒಂದು ಹಂತದಲ್ಲಿ ಓದಿದ್ದಷ್ಟೇ ಆಗುತ್ತದೆ. ಅದರ ಆಳಕ್ಕೆ ಇಳಿಯಲು ಆಗದು. ಅನೇಕ ಸತ್ವಗಳಿಂದ ಕೂಡಿದ ಸಂಸ್ಕೃತವು ಒಳಗಿನ ಸತ್ವದಿಂದಲೇ ಉಳಿದಿದೆ. ಸಂಸ್ಕೃತ ಪಠ್ಯಕ್ಕೆ ಒಂದು ಮಿತಿ ಇದೆ. ಅಂಕದ ಮಿತಿಯೂ ಇದೆ. ಪಠ್ಯಕ್ರಮದಲ್ಲಿ ಹೊರತಾಗಿಯೂ ಓದಬೇಕು ಎಂದು ಹೇಳಿದರು.
ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಶಿಕ್ಷಣ ಸಂಯೋಜಕ ಪ್ರಸನ್ನ ಹೆಗಡೆ, ವಿ. ರಾಮಚಂದ್ರ ಭಟ್ ಉಮ್ಮಚಗಿ, ಸಂಸ್ಕೃತ ವಿಷಯ ಪರಿವೀಕ್ಷಕ ವೆಂಕಟರಮಣ ದೆ.ಭಟ್ಟ, ರಾಜ್ಯ ಸಂಘದ ಅಧ್ಯಕ್ಷ ವಿ.ಕೃಷ್ಣ ವಿ.ಭಟ್ಟ ಉಪಸ್ಥಿತರಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಗಿರೀಶ ಹೆಗಡೆ, ರಾಜಾರಾಮ ದೀಕ್ಷಿತ, ಕೆ.ಎಸ್.ವಿಘ್ನೇಶ್ವರ, ಗಣಪತಿ ಜೋಶಿ,ರಮಾಕಾಂತ ಭಟ್ಟ, ವಿನಾಯಕ ಹೆಗಡೆ, ಕೃಷ್ಣಮೂರ್ತಿ ಭಟ್ಟ ಇತರ ಪದಾಧಿಕಾರಿಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು.ನೋಡಿ ಹೆಜ್ಜೆ ಇಡಬೇಕುಇಡುವ ಹೆಜ್ಜೆ ನೋಡಿ ಇಡಬೇಕು. ನೀರನ್ನು ಶೋಧಿಸಿ ಕುಡಿಯಬೇಕು. ಆಡುವ ಮಾತುಗಳು ಶಾಸ್ತ್ರ ಸಮ್ಮತವಾಗಿರಬೇಕು. ಮನಸ್ಸಿಗೆ ತೃಪ್ತಿಯಾಗುವ ರೀತಿಯಲ್ಲಿ ಕಾರ್ಯಗಳನ್ನು ಮಾಡಬೇಕು. ಆಗ ಒಳಗಿನ ಅಂತಃ ಸಾಕ್ಷಿ ಸಂತೋಷವಾಗಿರುತ್ತದೆ.
ಸ್ವರ್ಣವಲ್ಲೀ ಶ್ರೀ