ಸಾರಾಂಶ
ಹುಬ್ಬಳ್ಳಿ:
ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತ ಭಾಷೆಯು ಜನರ ದಿನನಿತ್ಯ ಜೀವನದಲ್ಲಿ ಬಳಕೆಯಾಗುವಂತಾಗಲಿ. ಪ್ರಸ್ತುತ ದಿನಗಳಲ್ಲಿ ಸಂಸ್ಕೃತ ಭಾರತಿಯು ಸಂಸ್ಕೃತ ಭಾಷೆ ಉಳಿಸುವ ಕಾರ್ಯ ಮಾಡುತ್ತಿದೆ. ಜತೆಗೆ ಈ ಭಾಷೆ ಉಳಿಸಿ-ಬೆಳೆಸುವ ಕಾರ್ಯ ಇನ್ನಷ್ಟು ಹೆಚ್ಚಾಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಜಿಮ್‌ಖಾನಾ ಮೈದಾನದಲ್ಲಿ ಸಂಸ್ಕೃತ ಭಾರತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕೃತ ಪ್ರದರ್ಶಿನಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಇತಿಹಾಸ, ಪರಂಪರೆ ನೋಡಿದಾಗ ನಾಡಿನ, ದೇಶದ ಒಟ್ಟು ಭಾಷೆಗಳನ್ನು ಗಮನಿಸಿದಾಗ ಅತ್ಯಂತ ಪುರಾತನ ಭಾಷೆಗಳು ನಮ್ಮಲ್ಲಿವೆ. ವೇದ ಕಾಲದಲ್ಲಿ ವೇದಗಳ ರಚನೆಗೆ ಇದೇ ಭಾಷೆ ಬಳಕೆ ಮಾಡಲಾಗಿದೆ. ಅಷ್ಟೊಂದು ಭಾಷಾ ಸಂಪತ್ತು ಸಂಸ್ಕೃತಕ್ಕಿತ್ತು. ನಾವು ಸೇರಿದಂತೆ ಇಂದಿನ ಪಾಲಕರು ಆಂಗ್ಲ ಭಾಷೆ ಕಲಿತರೆ ಸಾಕು ಎನ್ನುವ ಮನಸ್ಥಿತಿಗೆ ಬಂದಿದ್ದೇವೆ. ಅಲ್ಲದೇ ಅನೇಕ ಪರಿಸ್ಥಿತಿಗಳಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು.ಈ ವೇಳೆ ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜೀತೇಂದ್ರ ಮಜೇಥಿಯಾ, ವಿಭವ ಇಂಡಸ್ಟ್ರೀಸ್‌ನ ಮುಖ್ಯ ಕಾರ್ಯನಿರ್ವಾಹಕ ನಂದಕುಮಾರ, ಕ್ಷಮತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಜೋಶಿ, ಪಂಚಾಮೃತ ಇಂಡಸ್ಟ್ರೀಸ್‌ನ ನಿರ್ದೇಶಕ ಚನ್ನಬಸಪ್ಪ ಹೊಸಮನಿ ಸೇರಿದಂತೆ ಹಲವರಿದ್ದರು.ಭಗವದ್ಗೀತೆ ಭಾರತದ ಪಾರಿಜಾತ: ಟೆಂಗಿನಕಾಯಿ
ಭಗವದ್ಗೀತೆಯನ್ನು ಭಾರತದ ಪಾರಿಜಾತ ಎಂದು ಕರೆಯಲಾಗುತ್ತದೆ. ಮನುಷ್ಯ ತನ್ನ ಜೀವನದ ಪ್ರತಿ ಗಳಿಗೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಈ ಭಗವದ್ಗೀತೆ ತಿಳಿಸುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಜಿಮ್ಖಾನಾ ಮೈದಾನದಲ್ಲಿ ಸಂಸ್ಕೃತ ಭಾರತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗೀತಾಮೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಸ್ಕೃತ ಅದ್ಭುತವಾದ ಭಾಷೆಯಾಗಿದೆ. ಇಡೀ ಜಗತ್ತಿನಾದ್ಯಂತ ಎಲ್ಲ ಕಡೆ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತ ಭಾಷೆ ಒಪ್ಪಿಕೊಳ್ಳಲಾಗುತ್ತಿದೆ. ಆದರೆ, ನಮ್ಮ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಹೇರುವ ಕಾರ್ಯವಾಗುತ್ತಿರುವಾಗಲೇ ಸಂಸ್ಕೃತ ಭಾರತಿ ವತಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಹ ಸಂಘಟನಾ ಮಂತ್ರಿ ದತ್ತಾತ್ರೇಯ ವಜ್ರಳ್ಳಿ ಪ್ರಾಸ್ತಾವಿಕ ಮಾತನಾಡಿ, ಭಗವದ್ಗೀತೆ 5 ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಜನರಿಗೆ ಗಾಢವಾದ ಭಾವನೆ ಬೀರಿದೆ. ಜಗತ್ತಿನ ಜಿಜ್ಞಾಸೆಗಳಿಗೆ ಪ್ರೇರಣೆಯಾದ ಗ್ರಂಥವಾಗಿದೆ ಎಂದು ಹೇಳಿದರು.
ಅಲ್ಲಲ್ಲಿ ಅನೇಕ ಅಪಸ್ವರಗಳು ಗೀತೆ ವಿರುದ್ಧ ಕೇಳಿಬಂದಿವೆ. ಅಂತಹವುಗಳಿಗೆ ನಾವು ಉತ್ತರ ನೀಡುವ ಅವಶ್ಯಕತೆ ಇಲ್ಲ. ಟೀಕೆ ಮಾಡುವವರಿಗೆ ಗೀತೆಯೇ ಕಾಲಕಾಲಕ್ಕೆ ಉತ್ತರ ನೀಡುತ್ತಿದೆ. ಅಂತಹ ಉತ್ತರಗಳಿಗೆ ನಾವು ಧ್ವನಿಯಾಗಬೇಕು. ಸಾರ್ವಕಾಲಿಕ ಮೌಲ್ಯಗಳನ್ನು ಸಾರುತ್ತಿರುವ ಏಕೈಕ ಗ್ರಂಥ ಭಗವದ್ಗೀತೆಯಾಗಿದೆ. ಇಂತಹ ಗ್ರಂಥವನ್ನು ಪೂಜಿಸುವ ಕಾರ್ಯ ಮಾಡದೆ ಪಾರಾಯಣ ಮಾಡುವ ಕಾರ್ಯ ನಮ್ಮಿಂದಾಗಬೇಕು ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಗೀತಾ ಸ್ಪರ್ಧೆ, ಉಪನ್ಯಾಸ, ವಸ್ತು ಪ್ರದರ್ಶಿನಿ, ಪುಸ್ತಕ ಪ್ರದರ್ಶಿನಿ, ಮಾರಾಟ, ರೂಪಕ ಹಾಗೂ ಸಂಪೂರ್ಣ ಅಧ್ಯಾಯಗಳನ್ನು ಕಂಠಸ್ಥ ಮಾಡಿದವರಿಗೆ ಸನ್ಮಾನಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷೆ ಭಾರತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹದೇವ ಕರಮರಿ, ಸದಾನಂದ ಕಾಮತ್ ಸೇರಿದಂತೆ ಹಲವರಿದ್ದರು.