ಸಂತೋಷ್‌ಜೀ ದೊಡ್ಡ ನಾಯಕರಿಗೆ ಸಂಯಮದ ಪಾಠ ಮಾಡಲಿ: ರಘುಪತಿ ಭಟ್‌

| Published : Nov 12 2025, 03:00 AM IST

ಸಾರಾಂಶ

ನಮ್ಮ ರಾಷ್ಟ್ರೀಯ ನಾಯಕರು ಕಾರ್ಯಕರ್ತರಿಗೆ ಸಂಯಮ ಬೇಕು ಎಂದಿದ್ದಾರೆ, ಆದರೆ ಈ ಸಂಯಮ ಕೇವಲ ಉಡುಪಿ ಜಿಲ್ಲೆಯ ಕಾರ್ಯಕರ್ತರಿಗೆ ಮಾತ್ರವೇ? ಇದು ಬೇರೆ ಜಿಲ್ಲೆಯರಿಗೂ ಅನ್ವಯಿಸುವುದಿಲ್ಲವೇ? ನಾವು ಸೀಟು ತಪ್ಪಿಸಿದರೂ ಪಕ್ಷವನ್ನು ತಲೆ ಮೇಲೆ ಹೊತ್ತು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದವರಿಗೆ ಗೊತ್ತು, ಅದಕ್ಕಾಗಿ ಕರಾವಳಿಯಲ್ಲಿ ಈ ಪ್ರಯೋಗ ಮಾಡುತ್ತಾರೆ ಎಂದವರು ಆರೋಪಿಸಿದರು.

ಸಂಯಮ ಕೇವಲ ಉಡುಪಿ ಕಾರ್ಯಕರ್ತರಿಗೆ ಮಾತ್ರವೇ?: ಪ್ರಶ್ನೆಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಉಡುಪಿಗೆ ಬಂದಿದ್ದಾಗ, ಪಕ್ಷದ ಕಾರ್ಯಕರ್ತರಿಗೆ ಸಂಯಮ ಇರಬೇಕು ಎಂದು ಹೇಳಿದ್ದು, ಇದಕ್ಕೆ ಮಾಜಿ ಶಾಸಕ, ಬಿಜೆಪಿಯಿಂದ ಅಮಾನತುಗೊಂಡಿರುವ ಕೆ. ರಘುಪತಿ ಭಟ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸಂಯಮದಿಂದಿರಲು ತಮಗೆ ಮಾತ್ರವಲ್ಲ, ಬಿ.ವೈ. ವಿಜಯೇಂದ್ರ, ಆರ್. ಅಶೋಕ್‌ ಅವರಿಗೂ ಹೇಳಲಿ ಎಂದು ಹೇಳಿದ್ದಾರೆ.ನಮ್ಮ ರಾಷ್ಟ್ರೀಯ ನಾಯಕರು ಕಾರ್ಯಕರ್ತರಿಗೆ ಸಂಯಮ ಬೇಕು ಎಂದಿದ್ದಾರೆ, ಆದರೆ ಈ ಸಂಯಮ ಕೇವಲ ಉಡುಪಿ ಜಿಲ್ಲೆಯ ಕಾರ್ಯಕರ್ತರಿಗೆ ಮಾತ್ರವೇ? ಇದು ಬೇರೆ ಜಿಲ್ಲೆಯರಿಗೂ ಅನ್ವಯಿಸುವುದಿಲ್ಲವೇ? ನಾವು ಸೀಟು ತಪ್ಪಿಸಿದರೂ ಪಕ್ಷವನ್ನು ತಲೆ ಮೇಲೆ ಹೊತ್ತು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದವರಿಗೆ ಗೊತ್ತು, ಅದಕ್ಕಾಗಿ ಕರಾವಳಿಯಲ್ಲಿ ಈ ಪ್ರಯೋಗ ಮಾಡುತ್ತಾರೆ ಎಂದವರು ಆರೋಪಿಸಿದರು.ಪಕ್ಷದ ದೊಡ್ಡ ನಾಯಕರಿಗೂ ಸಂಮಯದಿಂದಿರಲು ಹೇಳಲಿ, ಸಂಯಮದಿಂದ ವಿಜಯೇಂದ್ರ ಅವರಿಗೆ ಅಧಿಕಾರ ತ್ಯಾಗ ಮಾಡಿ ಪಕ್ಷಕ್ಕಾಗಿ ಇಡೀ ರಾಜ್ಯ ಪ್ರವಾಸ ಮಾಡುವುದಕ್ಕೆ ಹೇಳಲಿ. ಆರ್. ಅಶೋಕ ಅವರಿಗೆ ನಿನ್ನದು ಎಂಟು ಅವಧಿ ಆಯ್ತು, ಇನ್ನು ಬೇಡ ಎಂದು ಹೇಳಿ ಅವರ ಸಯಂಮ ಪರೀಕ್ಷೆ ಮಾಡಲಿ. ಆಗ ಅವರ ಸಂಯಮದ ಬುದ್ಧಿಮಾತು ಒಪ್ಪುತ್ತೇನೆ ಎಂದು ಭಟ್ ಖಾರವಾಗಿ ಹೇಳಿದರು.2013ರಲ್ಲಿ ನನಗೆ ಶಾಸಕನಾಗುವ ಟಿಕೆಟ್ ನಿರಾಕರಿಸಿದಾಗಲೂ ಸಯಂಮವನ್ನು ಕಳೆದುಕೊಳ್ಳಲಿಲ್ಲ, 2024ರಲ್ಲಿಯೂ ಟಿಕೆಟ್ ಸಿಗದಿದ್ದಾಗಲು ಸಂಯಮ ಕಳೆದುಕೊಳ್ಳಲಿಲ್ಲ. ಪಕ್ಷದ ಅಭ್ಯರ್ಥಿಯನ್ನು ನನ್ನ ಕಾರಿನಲ್ಲಿ ಕುಳ್ಳಿರಿಸಿ ಪ್ರಚಾರ ಮಾಡಿ ಗೆಲ್ಲಿಸಿದ್ದೇನೆ. ನನ್ನ ಹೆಂಡತಿಯನ್ನು ಪಕ್ಷದ ಪರವಾಗಿ ಪ್ರಚಾರಕ್ಕೆ ಕಳಿಸಿದ್ದೇನೆ. ಮೂರು ಬಾರಿ ಶಾಸಕನಾಗಿದ್ದ ನಾನು ಯಾವುದೇ ಅಧಿಕಾರ ಇಲ್ಲದೆ ಕೂತಿದ್ದೇನೆ, ನನ್ನನ್ನು ರಾಜ್ಯಕಾರ್ಯಕಾರಣಿ ಸದಸ್ಯ ಮಾಡಿಲ್ಲ, ಉಪಾಧ್ಯಕ್ಷ ಮಾಡಿಲ್ಲ, ಆದರೂ ಸಂಯಮ ಕಳ‍ೆದುಕೊಂಡಿಲ್ಲ ಎಂದರು.ಆಗ ನನ್ನ ನೆನಪಾಗುತ್ತದೆ!:

ನಾನು ರಾಜಕೀಯ ಕಾರ್ಯಕರ್ತ, ಸಂಯಮಕ್ಕೂ ಒಂದು ಮಿತಿ ಇರುತ್ತದೆ. ರಾಜಕೀಯ ಕಾರ್ಯಕರ್ತರಿಗೆ ಅಪೇಕ್ಷೆ ಇರಬೇಕು ಎಂದು ನಮ್ಮ ನಾಯಕರೇ ಹಿಂದೆ ಹೇಳಿದ್ದರು. ಅಪೇಕ್ಷೆ ಇಲ್ಲದಿದ್ದರೆ ಯಾರು ಕೆಲಸ ಮಾಡುವುದಿಲ್ಲ, ನನ್ನನ್ನು ಅಷ್ಟು ಸುಲಭದಲ್ಲಿ ಬಿಜೆಪಿ ನಿರ್ಲಕ್ಷ ಮಾಡಲು ಆಗುವುದಿಲ್ಲ. ಈಗ ಯಾವುದೇ ಚುನಾವಣೆ ಇಲ್ಲ, ಹಾಗಾಗಿ ನಾನು ಬೇಕಾಗಿಲ್ಲ. ಮುಂದೆ ಚುನಾವಣೆಗಳು ಇದ್ದಾಗ ಖಂಡಿತಾ ಈ ರಘುಪತಿ ಭಟ್ ನೆನಪಾಗುತ್ತಾರೆ ಎಂದವರು ಹೇಳಿದರು.ನಾನಿಗ್ಲೂ ಬಿಜೆಪಿ ಮೆಂಬರ್!:

ನನ್ನನ್ನು ಯಾಕೆ ಬಿಜೆಪಿ ದೂರವಿಟ್ಟಿದಿಯೋ ಗೊತ್ತಿಲ್ಲ, ನಾನೇನು ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿಲ್ಲ. ನಾನು ಬಂದರೆ ಯಾರಿಗೆ ಏನಾದರೂ ತೊಂದರೆ ಆಗುತ್ತದೊ ಗೊತ್ತಿಲ್ಲ. ಪಕ್ಷದ ನಾಯಕರು ನನ್ನನ್ನು ಉಚ್ಛಾಟಿಸಿರಬಹುದು, ಆದರೆ ನಾನು ಈಗಲೂ ಬಿಜೆಪಿ ಕಾರ್ಯಕರ್ತ. ಮಿಸ್ ಕಾಲ್ ಕೊಟ್ಟು ಕಾರ್ಯಕರ್ತನಾಗಿದ್ದೇನೆ. ಅದನ್ನು ಯಾರೂ ತಪ್ಪಿಸಲಿಕ್ಕಾಗುವುದಿಲ್ಲ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪಕ್ಷಕ್ಕೆ ಬೈಯ್ಯಬೇಕಾ, ಅದು ನನ್ನಿಂದ ಸಾಧ್ಯವಿಲ್ಲ!ಪ್ರಧಾನಿ ಮೋದಿಯವರನ್ನು ಬೈದವರಿಗೆ, ಸಂತೋಷ್ ಜಿಯನ್ನು ಬೈದವರನ್ನು ಪಕ್ಷಕ್ಕೆ ಕರೆತಂದು ಸಂಸದರನ್ನಾಗಿ ಮಾಡುತ್ತಾರೆ. ಬಿಜೆಪಿ ನಿರ್ನಾಮ ಆಗುತ್ತದೇ ಎಂದವರೇ ಪಕ್ಷದಿಂದ ಗೆದ್ದು ಕೇಂದ್ರ ಸಚಿವರಾಗುತ್ತಾರೆ. ಮುಖ್ಯಮಂತ್ರಿ ಆಗುತ್ತಾರೆ, ಆದರೇ ನಾನು ಒಂದೇ ಒಂದು ಶಬ್ದ ಪಕ್ಷಕ್ಕೆ, ಪಕ್ಷದ ನಾಯಕರಿಗೆ ಬೈದಿಲ್ಲ. ಬಹುಶಃ ನಾನು ಪಕ್ಷಕ್ಕೆ ನಾಯಕರಿಗೆ ಬೈಯ್ಯಬೇಕಾಗಿತ್ತು. ಆಗ ಕರೆದು ಟಿಕೇಟ್ ಕೊಡುತಿದ್ದರೇನೋ? ಆದರೆ ಪಕ್ಷದಿಂದ ಉಪಕೃತನಾಗಿದ್ದೇನೆ, 3 ಬಾರಿ ಶಾಸಕನಾಗಿದ್ದೇನೆ, ಆದ್ದರಿಂದ ಪಕ್ಷಕ್ಕೆ ಬೈಯಲು ಮನಸ್ಸು ಒಪ್ಪುವುದಿಲ್ಲ, ಸಾಧ್ಯವಿಲ್ಲ ಎಂದು ರಘುಪತಿ ಭಟ್‌ ಹೇಳಿದರು.