ಸಾರಾಂಶ
ಮರಿಯಮ್ಮನಹಳ್ಳಿ: ಸವಿತಾ ಸಮಾಜ ಹಿಂದುಳಿದಿದ್ದು, ಸಂಘಟಿತವಾಗಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳಯಬೇಕು ಎಂದು ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಭಾಷ ಹೇಳಿದರು.ಇಲ್ಲಿನ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ಮರಿಯಮ್ಮನಹಳ್ಳಿಯ ಸವಿತಾ ಸಮಾಜಕ್ಕೆ ಈ ಹಿಂದೆ ಮಾಜಿ ಶಾಸಕ ಎಸ್. ಭೀಮಾನಾಯ್ಕ ₹5 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸವಿತಾ ಸಮಾಜಕ್ಕೆ ನಿವೇಶವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸವಿತಾ ಸಮಾಜದ ಗೌರವಾಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಕೆ. ನಾಗೇಶ್ ಮಾತನಾಡಿ, ಸವಿತಾ ಮಹರ್ಷಿಯು ರಥಸಪ್ತಮಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತೀತಿ ಇದೆ ಎಂದು ವಿವರಿಸಿದರು.ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯೆ ಅಶ್ವಿನಿ ನಾಗರಾಜ ಮಾತನಾಡಿದರು. ಸವಿತಾ ಸಮಾಜದ ಅಧ್ಯಕ್ಷ ಸಿ.ಕೆ. ರಾಮುಡು ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಎಲ್. ವಸಂತ, ಸ್ಥಳೀಯ ಮುಖಂಡ ರೋಗಾಣಿ ಮಂಜುನಾಥ, ಸವಿತಾ ಸಮಾಜದ ಮಾಜಿ ಅಧ್ಯಕ್ಷ ಕೆ. ತಮ್ಮಣ್ಣ, ಸವಿತಾ ಸಮಾಜದ ಮಹಿಳಾ ಮುಖಂಡರಾದ ಶಿವಮ್ಮ, ಕೃಷ್ಣಮ್ಮ ಸೇರಿದಂತೆ ಸವಿತಾ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಅನಿಲ್ ಆಚಾರಿ ಪ್ರಾರ್ಥಿಸಿದರು. ಪ್ರಕೃತಿ ಎನ್. ದೇವನಕೊಂಡ ಸ್ವಾಗತಿಸಿದರು. ಪಿ. ಯೋಗೇಶ್ ನಿರೂಪಿಸಿದರು.