ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಯನ್ನು ತರುಣ ಸಮುದಾಯ ಬೆಳೆಸಿಕೊಂಡು ವಿಚಾರಮತಿಗಳಾಗಬೇಕು. ಸಮಾಜದ ಎಲ್ಲ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುವುದರೊಂದಿಗೆ ವಿಶ್ವದೃಷ್ಟಿಯನ್ನು ಹೊಂದುವಂತೆ ಸಾಹಿತಿ, ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಸಲಹೆ ನೀಡಿದರು.ಜಾಗೃತ ಕರ್ನಾಟಕದಿಂದ ನಗರದ ರೈತ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ಕ್ರಾಂತಿ ಕಹಳೆ-೫೦ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಇಂದಿನ ಯುವ ಸಮುದಾಯ ಕುವೆಂಪು ಆದರ್ಶಗಳನ್ನು ಯಾವ ರೀತಿ ಸ್ವೀಕರಿಸಲಿದೆ ಎನ್ನುವುದು ಮುಖ್ಯವಾಗಿದೆ. ವಿಚಾರವಂತರಾಗುವುದೇ ಮನುಷ್ಯತ್ವದ ಮೂಲವಾಗಿದ್ದು, ಬದುಕಿನ ಅನುಭವ, ಸತ್ಯಕ್ಕೆ ನಿಷ್ಠವಾದುದೇ ವಿಚಾರಮತಿ. ನಿರಂಕುಶಮತಿಗಳಾಗಿ ಎಂದರೆ ವಿಚಾರಮತಿಗಳಾಗಿ ಎಂದರ್ಥ. ವಿಚಾರ ಮಾರ್ಗದಲ್ಲಿ ಬೆಳೆದು ನಿಷ್ಪಕ್ಷಪಾತ, ಸತ್ಯದ ಪರವಾಗಿ ಆಲೋಚನೆ ಮಾಡುವುದರೊಂದಿಗೆ ಬೆಳವಣಿಗೆ ಕಾಣುವಂತೆ ತಿಳಿಸಿದರು.
ಆಧ್ಯಾತ್ಮಿಕತೆ ಎನ್ನುವುದು ಮತವಲ್ಲ. ಅದು ಇಡೀ ವಿಶ್ವಕ್ಕೆ ಯಾವುದು ನಿಯಮಿಕ ಶಕ್ತಿಯಾಗಿದೆಯೋ ಅದೇ ಆಧ್ಯಾತ್ಮ. ಪ್ರಕೃತಿಯೊಳಗೆ ನಡೆಯುವ ನಿಯಮಗಳನ್ನು ಎಲ್ಲರೂ ಅರಿತುಕೊಳ್ಳಬೇಕು. ಪ್ರತಿಯೊಂದಕ್ಕೂ ಒಂದು ನೀತಿ-ನಿಯಮ ಇರುತ್ತದೆ. ವಿಚಾರ ಮತಿಗಳಾಗುವುದರೊಂದಿಗೆ ಆತ್ಮಸಾಕ್ಷಿಯನ್ನು ಹರಿತಗೊಳಿಸಿಕೊಳ್ಳುವಂತೆ ತಿಳಿಸಿದರು.ಯೋಗಿಗಳು ಮಾಡುವ ತಪಸ್ಸು ತನ್ನ ಸಾಕ್ಷಾತ್ಕಾರಕ್ಕೆ. ಆದರೆ, ನೇಗಿಲಯೋಗಿ ಮಾಡುವುದು ಅನ್ನ ಸಾಕ್ಷಾತ್ಕಾರಕ್ಕೆ. ಅದು ಎಲ್ಲರ ಸಾಕ್ಷಾತ್ಕಾರಕ್ಕೂ ಹೌದು. ಯೋಗಿತನ ಇದ್ದವರು ಹಸಿದವರಿಗೆ ಅನ್ನ ಹಾಕುತ್ತಾರೆ. ಯುವಜನಾಂಗ ಯೋಗಿಗಳಾಗಿ ಪರಿವರ್ತನೆಯಾಗಬೇಕು. ಮನುಜಮತ ವಿಶ್ವಪಥ ಕುವೆಂಪು ಸಂದೇಶವನ್ನು ಸಾಕ್ಷಾತ್ಕಾರಗೊಳಿಸಬೇಕು ಎಂದರು.
ಸಾಹಿತಿ ಎಂ.ಜಿ.ಹೆಗಡೆ ಮಾತನಾಡಿ, ಕುವೆಂಪು ಆದರ್ಶದ ನೆರಳಿನಲ್ಲಿ ಬದುಕಬೇಕಾದ ಕರ್ನಾಟಕ ಹಾಗೂ ಸಂತರ ದೇಶದಲ್ಲಿ ಧರ್ಮ-ಮತಗಳ ವ್ಯತ್ಯಾಸವೇ ಗೊತ್ತಿಲ್ಲದೆ ಮತೀಯವಾದದ ನಡುವೆ ಬದುಕುತ್ತಿದ್ದೇವೆ. ದೇಶವನ್ನು ಹಂಚುವವರಿಗೆ ಒಂದಿಂಚೂ ಜಾಗ ಕೊಡಬೇಡಿ ಎಂದರು.೧೯೮೬ರ ನಂತರ ಹಿಂದುತ್ವದ ರಾಜಕಾರಣ ದೇಶದಲ್ಲಿ ಆರಂಭವಾಗಿದೆ. ಹಿಂದು-ಮುಸ್ಲಿಂರ ನಡುವೆ ಕೋಮುವಾದವನ್ನು ಮುಂದಿಡುತ್ತಾ ಅದನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಸಕ್ಕರೆ ನಾಡಿನಲ್ಲಿ ಕೋಮುಗಲಭೆ ಒಮ್ಮೆ ಶುರುವಾದರೆ ಒಬ್ಬರೇ ಒಬ್ಬ ಯುವಕರು ಕೃಷಿ ಭೂಮಿಯಲ್ಲಿ ಇರುವುದಿಲ್ಲ. ಮತೀಯವಾದಿಗಳಿಗೆ ಎಂದಿಗೂ ಅವಕಾಶ ಕೊಡಬೇಡಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ವಹಿಸಿದ್ದರು. ಭಾಷಣಕಾರರಾಗಿ ಶೃಂಗೇರಿಯ ಸುಧೀರ್‌ಕುಮಾರ್ ಮರೊಳ್ಳಿ, ಲೇಖಕಿ ಸೌಮ್ಯ ಕೋಡೂರು, ಕವಿ ರಾಜೇಂದ್ರ ಪ್ರಸಾದ್, ಮಹಿಳಾ ಮುನ್ನಡೆಯ ಪೂರ್ಣಿಮಾ, ಸಿ.ಕುಮಾರಿ, ಯುವ ಲೇಖಕಿ ತೇಜ ಯಾಲಕ್ಕಯ್ಯ, ಜಾಗೃತ ಕರ್ನಾಟಕ ಸಂಚಾಲಕ ಬಿ.ಸಿ. ಬಸವರಾಜು, ಪತ್ರಕರ್ತ ನಾಗೇಶ್ ಪಾಲ್ಗೊಂಡಿದ್ದರು.ಕಾರ್ಯಕ್ರಮಕ್ಕೂ ಮುನ್ನ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಕುವೆಂಪು ಘೋಷಗಳೊಂದಿಗೆ ಮಾನವ ಸರಪಳಿ ನಿರ್ಮಿಸಲಾಯಿತು.
ಮನುಷ್ಯನ ಪ್ರಯತ್ನಗಳಿಗೆ ಶುಭ ಕೋರುವವನೇ ದೇವರು..!ಕನ್ನಡಪ್ರಭ ವಾರ್ತೆ ಮಂಡ್ಯ
ನಾವು ಪಾಶ್ಚಿಮಾತ್ಯ ನಾಗರೀಕತೆಯನ್ನು ಅನುಸರಿಸಿ ಯಂತ್ರ ನಾಗರೀಕತೆಯನನ್ನು ತಂದಿದ್ದರೂ ವೈಚಾರಿಕ ದೃಷ್ಟಿಕೋನ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿಲ್ಲ. ಅಂತರಿಕ್ಷಕ್ಕೆ ಉಪಗ್ರಹ ಹಾರಿಸುವ ಮುನ್ನ ಪೂಜೆ ಸಲ್ಲಿಸುವಂತಹ ಕಂದಾಚಾರಗಳನ್ನೂ ಬಿಟ್ಟಿಲ್ಲ. ಇಂದಿಗೂ ಮೌಢ್ಯಗಳಿಗೆ ನಾವು ಶರಣಾಗಿದ್ದೇವೆ ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ಮೌಢ್ಯ ಪ್ರಚಲಿತದಲ್ಲಿದ್ದರೆ ಅದರಿಂದ ಯಾವುದೋ ಒಂದು ವರ್ಗ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಅಮಾಯಕರನ್ನು ದುಡಿಮೆಗಷ್ಟೇ ಸೀಮಿತಗೊಳಿಸುತ್ತದೆ. ಅಕ್ಷರ ಸಂಸ್ಕೃತಿ, ಶಾಸ್ತ್ರ ಸಂಸ್ಕೃತಿಯನ್ನು ಜೊತೆಗಿಟ್ಟುಕೊಂಡು ದೇವರ ಹೆಸರಿನಲ್ಲಿ ಕಂದಾಚಾರ, ಮೌಢ್ಯವನ್ನು ತುಂಬುತ್ತಾರೆ. ವಾಸ್ತವದಲ್ಲಿ ಮನುಷ್ಯನ ಎಲ್ಲಾ ಪ್ರಯತ್ನಗಳಿಗೆ ಶುಭ ಕೋರುವವನೇ ದೇವರು ಎಂದರು.