ಶಾಮನೂರಗೆ ವಯಸ್ಸಾಗಿಗೆ ಮನೆಯಲ್ಲಿ ಕೂರಲಿ: ಅರವಿಂದ ಬೆಲ್ಲದ

| Published : Dec 06 2024, 08:56 AM IST

ಸಾರಾಂಶ

ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಹಳ‌‌ ದಿನಗಳ ಹಿಂದೆಯೇ ಕಾರ್ಯಾಚರಣೆ ನಡೆಸಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ₹ 5000 ಕೋಟಿ ಅಕ್ರಮದಲ್ಲಿ‌ ಮುಖ್ಯಮಂತ್ರಿ ಕುಟುಂಬ ಭಾಗಿಯಾಗಿದೆ. ಅದಕ್ಕಾಗಿ ಇಡಿ ವ್ಯಾಪ್ತಿಗೆ ಬರಲಿದೆ.

ಧಾರವಾಡ:

ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದ್ದು, ಇನ್ನು ಮನೆಯಲ್ಲಿ ಕೂರುವುದು ಒಳ್ಳೆಯದು. ಈ‌ ರೀತಿ ಬಾಯಿಗೆ ಬಂದಂತೆ ಮಾತಾಡುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದರು.

ಸುದ್ದಿಗಾರೊಂದಿಗೆ ಮಾತನಾಡಿ ಅವರು, ಯತ್ನಾಳ ಅವರನ್ನು ಒಣ ಬಾವಿಗೆ ತಳ್ಳಬೇಕು ಎಂದು ಹೇಳಿದ ಶಾಸಕ ಶಾಮನೂರ ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರೀಯಿಸುತ್ತ, ಶಾಮನೂರ ಅವರು ಅಖಿಲ ಭಾರತ ಮಹಾಸಭಾದ ಅಧ್ಯಕ್ಷರು, ಹಿರಿಯರು, ಅವರ ಬಾಯಿಯಲ್ಲಿ ಈ‌ ರೀತಿ ಶಬ್ಧ ಬರಬಾರದು. ಇದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಬಸವ ಕಲ್ಯಾಣದಲ್ಲಿ ಏನು ಮಾಡಿದೆ? ಅಲ್ಲಿನ ಅನುಭವ ಮಂಟಪ ಅದಾಗಿ ಉಳಿದಿಲ್ಲ. ಅಲ್ಲಿ ಪೀರ ಬಾಷಾನ ಪೀರ್ ನಡೆಯುತ್ತಿದೆ. ಅದನ್ನು ತಡೆಯಲು ಚಕಾರ ಎತ್ತಿಲ್ಲ, ಈ ಸರ್ಕಾರ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದೇ‌ ಒಂದು ರುಪಾಯಿ ಬಿಡುಗಡೆ ಮಾಡಿಲ್ಲ ಎಂದರು.

ಸಿಎಂ ಕೊರಳಿಗೆ ಮುಡಾ ಹಗ್ಗ:

ಮುಡಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಹಳ‌‌ ದಿನಗಳ ಹಿಂದೆಯೇ ಕಾರ್ಯಾಚರಣೆ ನಡೆಸಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ₹ 5000 ಕೋಟಿ ಅಕ್ರಮದಲ್ಲಿ‌ ಮುಖ್ಯಮಂತ್ರಿ ಕುಟುಂಬ ಭಾಗಿಯಾಗಿದೆ. ಅದಕ್ಕಾಗಿ ಇಡಿ ವ್ಯಾಪ್ತಿಗೆ ಬರಲಿದೆ ಎಂದಿದೆ. ಮುಡಾ ಹಗರಣದ ಹಗ್ಗವು ಮುಖ್ಯಮಂತ್ರಿ ಕೊರಳಿಗೆ ಸಿಲುಕಲು ಬಹಳ ದಿನಗಳು ಉಳಿದಿಲ್ಲ ಎಂದು ಬೆಲ್ಲದ ಹೇಳಿದರು.

ಗೊಂದಲ ಶಾಂತ:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯದ ಭಿನ್ನಾಭಿಪ್ರಾಯ ಕುರಿತು ಪ್ರತಿಕ್ರಿಯಿಸಿ, ರಾಷ್ಟ್ರೀಯ ಪಕ್ಷ ಎಂದಾಗ ತುಸು ಭಿನ್ನಾಭಿಪ್ರಾಯ ಸಾಮಾನ್ಯ. ಪಕ್ಷದ ಹಿತದೃಷ್ಟಿಯಿಂದ ಇದೀಗ ಬೆಳವಣಿಗೆ ಆಗಿದ್ದು, ಪಕ್ಷದಲ್ಲಿ ಇದ್ದ ಗೊಂದಲ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಶಾಂತವಾಗಿದೆ. ಭಿನ್ನಾಭಿಪ್ರಾಯವು ಪಕ್ಷದ ಹಿರಿಯರ ಸಮ್ಮುಖದಲ್ಲಿ ಇತ್ಯರ್ಥ ಆಗುವ ಹಾದಿಯಲ್ಲಿದ್ದು, ಲಕ್ಷಾಂತರ ಕಾರ್ಯಕರ್ತರಿಗೂ ಖುಷಿಯಾಗಿದೆ ಎಂದರು.