ಸಮಾಜದ ತಿದ್ದುವಲ್ಲಿ ಚುಟುಕು ಸಾಹಿತ್ಯ ಪ್ರಮುಖ ಪಾತ್ರವಹಿಸಲಿ: ಶರಣಪ್ಪ ಮೆಟ್ರಿ

| Published : Sep 21 2025, 02:02 AM IST

ಸಮಾಜದ ತಿದ್ದುವಲ್ಲಿ ಚುಟುಕು ಸಾಹಿತ್ಯ ಪ್ರಮುಖ ಪಾತ್ರವಹಿಸಲಿ: ಶರಣಪ್ಪ ಮೆಟ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಹಿಳಾ ಕವಿಗೋಷ್ಠಿ ನಡೆಯಿತು.

ಕುಷ್ಟಗಿ: ಇತ್ತೀಚಿನ ದಿನಗಳಲ್ಲಿ ಚುಟುಕು ಮತ್ತು ಕವಿತೆಗಳು ಕೇವಲ ಪ್ರೀತಿ-ಪ್ರೇಮ ಅಷ್ಟೇ ಸೀಮಿತವಾಗದೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಾಹಿತಿ ಶರಣಪ್ಪ ಮೆಟ್ರಿ ಅಭಿಪ್ರಾಯಪಟ್ಟರು.

ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಚುಟುಕುಗಳ ಶೈಲಿ ಚಿಕ್ಕದಾದರೂ ಅದರ ಒಳಗಿನ ಅರ್ಥ, ಗಾಂಭೀರ್ಯ, ಬದುಕು ಕಟ್ಟಿಕೊಡುವ ಘನತೆ ಅರ್ಥಪೂರ್ಣವಾಗಿರುತ್ತದೆ. ಕಾಲದ ಮಿತಿಯೊಳಗೆ ಸಂಕ್ಷಿಪ್ತವಾಗಿ ಅರ್ಥಗರ್ಭಿತವಾಗಿ ವಿಷಯವನ್ನು ಸೇರಿಸಿ ಹೇಳುವ ಕಲೆಯೇ ಚುಟುಕು. ಈ ಚುಟುಕಿನಲ್ಲಿ ನೀತಿ, ತತ್ವ, ವಿಡಂಬನೆ ಜತೆಗೆ ಸುಭಾಷಿತ, ಉಪಮೆಯ, ರೂಪಕ, ದೃಷ್ಟಾಂತಗಳು ದಾರಿದೀಪವಾಗಿರುತ್ತವೆ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿ, ಚುಟುಕು ಸಮಾಜಕ್ಕೊಂದು ಹೊಸ ಸಂದೇಶ ನೀಡುವ ಸಾಹಿತ್ಯವಾಗಿದ್ದು, ಈ ಸಾಹಿತ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಅದರಂತಹ ಸಂತೋಷ ಬೇರೊಂದಿಲ್ಲ. ಇಡೀ ಸಮಾಜದ ಒಳತಿರುಳನ್ನು ಕೇವಲ ನಾಲ್ಕೈದು ಸಾಲುಗಳಲ್ಲಿ ಅರ್ಥಗರ್ಭಿತವಾಗಿರುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ ಮಾತನಾಡಿ, ಕನ್ನಡ ಕಾವ್ಯ ಪರಂಪರೆಯಲ್ಲಿ ಚುಟುಕು ಸಾಹಿತ್ಯದ ಪಾತ್ರ ಮಹತ್ವವಾದದ್ದು. ಚುಟುಕು ಕಾವ್ಯಕ್ಕೆ ಸುದೀರ್ಘ ಇತಿಹಾಸ ಇದೆ. ಹಲವಾರು ಕವಿಗಳು ಅದ್ಭುತವಾದ ಚುಟುಕು ಸಾಹಿತ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯದ ಸತ್ವವನ್ನು ಗಟ್ಟಿಗೊಳಿಸಿದ್ದಾರೆ ಎಂದರು. ಪ್ರಾಸ್ತಾವಿಕವಾಗಿ ನಿಂಗಪ್ಪ ಸಜ್ಜನ ಮಾತನಾಡಿದರು. ನೂತನ ಅಧ್ಯಕ್ಷ ಮಹೇಶ ಹಡಪದ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ದೇವೇಂದ್ರಪ್ಪ ಬಳೂಟಗಿ, ಶಿವಬಸಪ್ಪ ಕಡೆಮನಿ, ಮಹಾಂತೇಶ ಕಲಬಾವಿ, ಶರಣಪ್ಪ ವಡಗೇರಿ, ನಟರಾಜ ಸೋನಾರ, ವೀರೇಶ ಬಂಗಾರಶೆಟ್ಟರ, ಮಹಾಂತೇಶ ನೆಲಗಣಿ, ಗಿರಿಜಾ ಮಾಲಿಪಾಟೀಲ, ಶಾರದಾ ಶೆಟ್ಟರ, ರಶ್ಮಿ ಕುಲಕರ್ಣಿ, ಉಮಾದೇವಿ ಪಾಟೀಲ, ಶ್ರೀನಿವಾಸ ಕಂಟ್ಲಿ, ತಿಪ್ಪಣ್ಣ ಬಿಜಕಲ್, ಬಸವರಾಜ ಗುರಿಕಾರ, ಸಿದ್ರಾಮಪ್ಪ ವಂದಾಲಿ, ಶರಣಪ್ಪ ಜಿಗೇರಿ, ಯಮನೂರಪ್ಪ ಡೊಳ್ಳಿನ, ಹನುಮೇಶ ಗುಮಗೇರಿ, ಚಂದಪ್ಪ ಹಕ್ಕಿ, ಬುಡ್ನೇಸಾಬ ಕಲಾದಗಿ, ಶಿವಾಜಿ ಹಡಪದ, ವಿಶ್ವನಾಥ ಅಂಬ್ಲಿಕೊಪ್ಪಮಠ ಇದ್ದರು.