ಸಾರಾಂಶ
ರಾಮನಗರ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿರುವುದರಿಂದ, ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ ಒತ್ತಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಕುರಿತು ಬಿಜೆಪಿಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.ಸಿದ್ದರಾಮಯ್ಯ ಅವರು ಆಡಳಿತ ಮತ್ತು ವಿಪಕ್ಷದಲ್ಲಿದ್ದಾಗ ಅಧಿಕಾರದ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ. ಅವರ ಪತ್ನಿ ಪಾರ್ವತಿ ಮತ್ತು ಪುತ್ರ ಯತೀಂದ್ರ ಮುಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಎಲ್ಲಾ ಸಂಗತಿಯನ್ನು ತೀರ್ಪಿನಲ್ಲಿ ಹೈಕೋರ್ಟ್ ಉಲ್ಲೇಖ ಮಾಡಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಬೇಡ ಎಂದಿರಬೇಕು. ಬಹುಶಃ ಮುಖ್ಯಮಂತ್ರಿಗಳು ಹೈಕಮಾಂಡ್‌ಗೆ ಕಪ್ಪ ಕೊಡುತ್ತಿದ್ದಾರೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ವತಿಯಿಂದ ದೆಹಲಿ ಮಟ್ಟದಲ್ಲೂ ಸಿದ್ದರಾಮಯ್ಯರವರ ರಾಜೀನಾಮೆಗೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಸರ್ಕಾರದ ಭ್ರಷ್ಟಾಚಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ಲೋಕಾಯುಕ್ತವನ್ನೇ ರದ್ದುಪಡಿಸಿ ಎಸಿಬಿ ರಚಿಸಿದ್ದರು. ಎಸಿಬಿಯನ್ನು ಕೋರ್ಟ್ ರದ್ದುಪಡಿಸಿ ಲೋಕಾಯುಕ್ತಕ್ಕೆ ಮರುಜೀವ ಕೊಟ್ಟಿತು. ಇದೀಗ, ಅದೇ ಲೋಕಾಯುಕ್ತದಿಂದ ಸಿದ್ದರಾಮಯ್ಯ ಅವರು ತನಿಖೆ ಎದುರಿಸುವ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಸಿಬಿಐ ತನಿಖಾ ಸಂಸ್ಥೆ ರಾಜ್ಯಕ್ಕೆ ಬರಬಾರದು ಎಂಬ ತೀರ್ಮಾನ ಕಾಂಗ್ರೆಸ್ ತೆಗೆದುಕೊಂಡಿದೆ. ಸಿಬಿಐ ರಾಜ್ಯಕ್ಕೆ ಆಗಮಿಸಿದರೆ ವಾಲ್ಮೀಕಿ ಹಗರಣದಲ್ಲಿಯೂ ಸಿದ್ದರಾಮಯ್ಯ ಸಿಲುಕುತ್ತಾರೆ ಎಂಬ ಆತಂಕ ಇದಕ್ಕೆ ಕಾರಣ. ಆದ್ದರಿಂದಲೇ ಸಿಬಿಐಗೆ ನಿರ್ಬಂಧ ಹೇರಿ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಸಿದ್ದರಾಮಯ್ಯ ಅವರ ಈ ನಡೆ ಅನುಮಾನ ಮೂಡಿಸಿದೆ. ಹಗರಣದ ವಿಷಯದಲ್ಲಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ, ಪರಿಶಿಷ್ಟರ ಹಣ ದುರ್ಬಳಕೆ, ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸ್ವತಃ ಸಿದ್ದರಾಮಯ್ಯ ಅವರ ಕುಟುಂಬವೇ ಸಿಲುಕಿದೆ. ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ತಪ್ಪು ಮಾಡಿಲ್ಲವೆಂದರೆ ತನಿಖೆಗೆ ಹೆದರುವ ಅಗತ್ಯವೇನಿದೆ? ರಾಜ್ಯದಲ್ಲಿ ಸಿಬಿಐಗೆ ಅಂಕುಶ ಹಾಕುತ್ತಿರುವ ಸರ್ಕಾರದ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೂವರೆ ವರ್ಷದಲ್ಲೇ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಎಲ್ಲಾ ಪ್ರಕರಣಗಳಲ್ಲೂ ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದೆ ಎಂದು ಟೀಕಿಸಿದರು.ಮೈತ್ರಿಯಾದರೂ ಅಭಿಪ್ರಾಯವೇ ಬೇರೆ:ರಾಜಕೀಯ ಕಾರಣಕ್ಕೆ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರೂ, ಮುಡಾ ಹಗರಣದ ವಿಷಯದಲ್ಲಿ ಪಕ್ಷವಾರು ನಿಲುವು ಬೇರೆಯೇ ಇದೆ. ಹಾಗಾಗಿಯೇ ಕುಮಾರಸ್ವಾಮಿರವರು ಮುಖ್ಯಮಂತ್ರಿಯ ರಾಜೀನಾಮೆ ಕೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ಮುಖಂಡರಾದ ಗೌತಮ್ ಗೌಡ, ಆನಂದಸ್ವಾಮಿ, ಚಂದ್ರಶೇಖರ್, ರುದ್ರದೇವರು, ಶಿವಾನಂದ್, ನಾಗೇಶ್, ಪದ್ಮನಾಭ್, ಸುರೇಶ್, ಚೇತನ್, ಸಿದ್ದರಾಜು ಇದ್ದರು.