ಸಾರಾಂಶ
ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸರ್ಕಾರ. ಸರ್ಕಾರ ನಡೆಸುವವರಿಗೆ ನೈತಿಕತೆಯೇ ಇಲ್ಲ. ಭ್ರಷ್ಟಾಚಾರ ಎಲ್ಲಾ ಕಡೆಯೂ ತಾಂಡವ ಆಡುತ್ತಿದೆ. ಅಮಾಯಕರು ಮೃತಪಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಿದ್ದರಾಮಯ್ಯ ಹೆಸರನ್ನು ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಇಡಲಿ. ಇಡೀ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರೆ ಇಟ್ಟು ಬಿಡಲಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು. ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು ಇಡುವ ವಿಚಾರ ಕುರಿತು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮಹಾರಾಜರ ಮನೆತನಕ್ಕೆ ಸರ್ಕಾರ ಯಾಕೆ ಅಪಮಾನ ಮಾಡ್ತಿದೆ? ಸಿಎಂ ಈ ವಿಚಾರದಲ್ಲಿ ಜಾಣ ಮೌನದಲ್ಲಿದ್ದಾರೆ. ತಮ್ಮ ಬೆಂಬಲಿಗರ ಛೂಬಿಟ್ಟು ರಸ್ತೆಗೆ ತಮ್ಮ ಹೆಸರಿಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಮೈಸೂರಿಗೆ ನನ್ನ ಅವಧಿಯಲ್ಲೂ ಬಹಳ ಕೊಡುಗೆ ಕೊಟ್ಟಿದ್ದೇನೆ. ಹಾಗಂತ ನನ್ನ ಹೆಸರಿಡಿ ಎಂದು ಕೇಳಲು ಆಗುತ್ತಾ? ಈ ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಕೈ ಬಿಡಬೇಕು ಎಂದರು. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸರ್ಕಾರ. ಸರ್ಕಾರ ನಡೆಸುವವರಿಗೆ ನೈತಿಕತೆಯೇ ಇಲ್ಲ. ಭ್ರಷ್ಟಾಚಾರ ಎಲ್ಲಾ ಕಡೆಯೂ ತಾಂಡವ ಆಡುತ್ತಿದೆ. ಅಮಾಯಕರು ಮೃತಪಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಐದು ವರ್ಷವೂ ನಾನೇ ಸಿಎಂ ಆಗಿ ಇರ್ತಿನಿ ಅನ್ನೋ ರೀತಿ ಮಾತಾಡ್ತಿದ್ದಾರೆ. ಅದು ಅವರ ಪಕ್ಷದ ವಿಚಾರ. ನಾವು ಸುಮ್ಮನೆ ಎಲ್ಲವನ್ನೂ ನೋಡುತ್ತಿದ್ದೇವೆ ಎಂದು ಅವರು ತಿಳಿಸಿದರು.