ಸಿದ್ದು, ಡಿಕೆಶಿ, ಸಚಿವರು 3 ಕ್ಷೇತ್ರ ಗೆಲ್ಲುವ ಭ್ರಮೆಯಿಂದ ಹೊರಬರಲಿ: ರೇಣುಕಾಚಾರ್ಯ ಹೇಳಿಕೆ

| Published : Oct 23 2024, 12:42 AM IST

ಸಿದ್ದು, ಡಿಕೆಶಿ, ಸಚಿವರು 3 ಕ್ಷೇತ್ರ ಗೆಲ್ಲುವ ಭ್ರಮೆಯಿಂದ ಹೊರಬರಲಿ: ರೇಣುಕಾಚಾರ್ಯ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂರೂ ಕ್ಷೇತ್ರಗಳನ್ನು ಗೆದ್ದರೆ ನಾನೇ ಮುಖ್ಯಮಂತ್ರಿ ಅಂತಾ ಡಿ.ಕೆ.ಶಿವಕುಮಾರ, ಮೂರು ಕಡೆ ಗೆದ್ದರೆ ತಮ್ಮ ಸಿಎಂ ಕುರ್ಚಿ ಭದ್ರ ಅಂತಾ ಸಿದ್ದರಾಮಯ್ಯ, ಹಳ್ಳಿಯಲ್ಲಿ ಸೀಟು ಹಿಡಿಯಲು ಟವಲು ಹಾಕುವಂತೆ ಸೀಟ್‌ಗೆ ಫೆವಿಕಾಲ್ ಗಮ್ ಹಾಕಿಕೊಂಡು ಕುಳಿತ ಸಚಿವರೆಲ್ಲಾ ಭ್ರಮಾಲೋಕದಲ್ಲಿದ್ದಾರೆ. ಮೂರೂ ಕಡೆ ಕಾಂಗ್ರೆಸ್ ಸೋಲುವುದು ಶತಃಸಿದ್ಧ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ಕಾಂಗ್ರೆಸ್ಸಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮಾಜಿ ಸಚಿವ ಟೀಕೆ । - ಅತಿವೃಷ್ಟಿ ಬೆಳೆ, ಮನೆ ಹಾನಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮೂರೂ ಕ್ಷೇತ್ರಗಳನ್ನು ಗೆದ್ದರೆ ನಾನೇ ಮುಖ್ಯಮಂತ್ರಿ ಅಂತಾ ಡಿ.ಕೆ.ಶಿವಕುಮಾರ, ಮೂರು ಕಡೆ ಗೆದ್ದರೆ ತಮ್ಮ ಸಿಎಂ ಕುರ್ಚಿ ಭದ್ರ ಅಂತಾ ಸಿದ್ದರಾಮಯ್ಯ, ಹಳ್ಳಿಯಲ್ಲಿ ಸೀಟು ಹಿಡಿಯಲು ಟವಲು ಹಾಕುವಂತೆ ಸೀಟ್‌ಗೆ ಫೆವಿಕಾಲ್ ಗಮ್ ಹಾಕಿಕೊಂಡು ಕುಳಿತ ಸಚಿವರೆಲ್ಲಾ ಭ್ರಮಾಲೋಕದಲ್ಲಿದ್ದಾರೆ. ಮೂರೂ ಕಡೆ ಕಾಂಗ್ರೆಸ್ ಸೋಲುವುದು ಶತಃಸಿದ್ಧ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಮುದಹದಡಿ ಗ್ರಾಮ ಹಾಗೂ ಸುತ್ತಮುತ್ತ ಬತ್ತ ಇತರೆ ಕಡೆ ಅತಿವೃಷ್ಟಿಯಿಂದಾಗಿ ಬೆಳೆ, ಮನೆ ಹಾನಿಗೀಡಾದ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಎಡಪಂಥೀಯರ ಸರ್ಕಾರವಿದೆ. ಮೊದಲು ದೇವರನ್ನು ನಂಬಲ್ಲ ಅನ್ನುತ್ತಿದ್ದವರ ಹಣೆಯಲ್ಲಿ ಈಗ ಕುಂಕುಮ ಇದೆ. ಸಂಕಟ ಬಂದಾಗ ವೆಂಕಟರಮಣ ಗಾಂದೆಯಂತೆ ಮಾಡಬಾರದ್ದನ್ನು ಮಾಡಿ, ಈಗ ಮೈಸೂರಿನ ಶ್ರೀ ಚಾಮುಂಡೇಶ್ವರಿ, ಸವದತ್ತಿ ಶ್ರೀ ಯಲ್ಲಮ್ಮ ಸೇರಿದಂತೆ ದೇವಸ್ಥಾನಗಳಿಗೆ ಹೋಗಿ, ಬೇಡಿಕೊಳ್ಳುತ್ತಿದ್ದಾರೆ ಎಂದರು.

15 ದಿನಗಳಿಂದ ಅತಿವೃಷ್ಟಿಯಿಂದಾಗಿ ರೈತನ ಹೊಲ, ಗದ್ದೆಗಳು ಜಲಾವೃತವಾಗಿವೆ. ಬತ್ತ, ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಎಲೆಬಳ್ಳಿ, ಅಡಕೆ ಸೇರಿದಂತೆ ತೋಟಗಾರಿಕೆ, ಕೃಷಿ ಬೆಳೆಗಳು ನಷ್ಟವಾಗುತ್ತಿವೆ. ರಾಜ್ಯ ಸರ್ಕಾರ ರೈತ, ಜನಸಾಮಾನ್ಯರ ಕಷ್ಟ ಆಲಿಸುತ್ತಿಲ್ಲ. ರೈತರ ಬದಲಾಗಿ, ಅಭಿವೃದ್ಧಿ ಬದಲಾಗಿ, ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆಗಳ ಕಡೆಗಷ್ಟೇ ಗಮನ ಕೇಂದ್ರೀಕರಿಸಿದೆ. ಅಧಿಕಾರದಲ್ಲಿ ಇದ್ದಷ್ಟು ದಿನ ಬೆಳೆ ಹಾನಿ, ಮನೆ ಹಾನಿ ಪರಿಹಾರ ಕೊಡಿ, ರಸ್ತೆ ನಿರ್ಮಾಣ ಸೇರಿದಂತೆ ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದು ರೇಣುಕಾಚಾರ್ಯ ದೂರಿದರು.

ಭಗವಂತ ಒಳ್ಳೆಯ ಬೆಳೆ ಕೊಟ್ಟಿದ್ದರೂ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಒಂದು ಕಡೆ ಮನೆ ನಾಶವಾಗುತ್ತಿದೆ. ಮತ್ತೊಂದು ಕಡೆ ಬೆಳೆ ಪರಿಹಾರ ನೀಡುತ್ತಿಲ್ಲ. ಮನೆಗಳಿಗೆ ಕೇವಲ ₹6,500 ಕೊಡ್ತಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಎ, ಬಿ, ಸಿ ಅಂತಾ ವಿಂಗಡಿಸಿ, ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಷಣಕ್ಕೆ ₹5 ಲಕ್ಷ, ₹3 ಲಕ್ಷ, ₹50 ಸಾವಿರ ಪರಿಹಾರ ನೀಡುತ್ತಿದ್ದರು. ದಿನಸಿಗೂ ಕೊಡುತ್ತಿದ್ದೆವು. ಬಸವರಾಜ ಬೊಮ್ಮಾಯಿ ಸಹ ತಮ್ಮ ಸರ್ಕಾರದಲ್ಲೂ ಅದನ್ನೇ ಮುಂದುವರಿಸಿದ್ದರು. ನಮ್ಮ ಸರ್ಕಾರಕ್ಕೆ ಬದ್ಧತೆ ಇತ್ತು. ಆದರೆ, ಅದನ್ನೆಲ್ಲಾ ಈಗಿನ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಲೋಡ್ ಮರಳಿಗೆ ₹30 ಸಾವಿರ ಆಗುತ್ತದೆ. ಭಿಕ್ಷೆಗೆ ಕೊಟ್ಟಂತೆ ₹1 ಸಾವಿರ, ₹3 ಸಾವಿರ, ₹6500 ರು. ಪರಿಹಾರ ಕೊಡುತ್ತಿದ್ದಾರೆ. ಇಷ್ಟು ಹಣದಲ್ಲಿ ಮನೆ ಕಟ್ಟಲು ಆಗಲ್ಲ, ಸಂಕಷ್ಟ ಪರಿಹಾರ ಕಾಣಲ್ಲ. ಸರ್ಕಾರ ಬೆಳೆ ಪರಿಹಾರ ನೀಡುತ್ತಿಲ್ಲ. ಸಿಎಂ, ಡಿಸಿಎಂ, ಸಚಿವರು ಹಾನಿ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಈ ಎಲ್ಲರೂ ಕುರ್ಚಿಗೆ ಅಂಟಿ ಕುಳಿತಿದ್ದಾರೆ. ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ನಾಟಿ ಮಾಡುವಷ್ಟು ಹಾಳಾಗಿವೆ. ಭೀಕರ ಅಪಘಾತ, ಸಾವು-ನೋವು ಆಗುತ್ತಿವೆ. ಡ್ರೈನೇಜ್‌ಗಳಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಅಭಿವೃದ್ಧಿ ಇಲ್ಲ, ಒಂದು ಕಡೆ ಭ್ರಷ್ಟಾಚಾರ, ಮತ್ತೊಂದು ಕಡೆ ಅತಿವೃಷ್ಟಿ ಕೇಳುವವರಿಲ್ಲ ಎಂದು ರೇಣುಕಾಚಾರ್ಯ ಆರೋಪಿಸಿದರು.

ಇದೇ ವೇಳೆ ಬೆಳೆ ಹಾನಿಗೊಳಗಾದ ರೈತರು, ಮನೆ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳ ಮಹಿಳೆಯರು, ಮಕ್ಕಳು, ಹಿರಿಯರಿಗೆ ರೇಣುಕಾಚಾರ್ಯ ಇತರೆ ಮುಖಂಡರು ಧೈರ್ಯ ಹೇಳಿದರು. ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಪ್ರವೀಣ ಜಾಧವ್, ಎನ್.ಎಚ್. ಹಾಲೇಶ, ರಾಜು ವೀರಣ್ಣ, ಸ್ಥಳೀಯ ಮುಖಂಡರು, ಗ್ರಾಮಸ್ಥರು, ರೈತರು ಇದ್ದರು.

- - -

ಬಾಕ್ಸ್‌ * ಪರ್ಸೆಂಟೇಟ್‌ನಂತೆ ಕಾಂಗ್ರೆಸ್‌ ಸಚಿವರು, ಶಾಸಕರ ಅಲಾಟ್‌ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸರಣಿ ಸಭೆಗಳನ್ನು ಮಾಡುತ್ತಾ, ಒಂದೊಂದು ಕ್ಷೇತ್ರಕ್ಕೆ 10 ಸಚಿವರು, 30 ಶಾಸಕರನ್ನು ಹಂಚಿಕೆ ಮಾಡಿದ್ದಾರೆ. ಪರ್ಸೆಂಟೇಜ್‌ಗೆ ಅಲಾಟ್ ಮಾಡಿಕೊಳ್ಳುತ್ತಾರೋ ಹಾಗೆಯೇ ಕ್ಷೇತ್ರಗಳಿಗೆ ಸಚಿವರು, ಶಾಸಕರನ್ನು ಅಲಾಟ್ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು.

ಮುಡಾ ಸೈಟ್‌ನಲ್ಲಿಷ್ಟು, ವಾಲ್ಮೀಕಿ ನಿಗಮದಲ್ಲಿ ಇಷ್ಟು ಹಣಕ್ಕೆ ಇಷ್ಟು, ಯಾರು ಯಾರಿಗೆ ಹೋಯಿತೆಂಬಂತೆ ಕ್ಷೇತ್ರಗಳಿಗೂ ಸಚಿವರು, ಶಾಸಕರನ್ನು ಹಂಚಿಕೆ ಮಾಡಿದ್ದಾರೆ. ಈಗಾಗಲೇ ಸಚಿವರು, ಶಾಸಕರು ಕ್ಯಾಶ್ ಬ್ಯಾಗ್ ಹಿಡಿದುಕೊಂಡು ಹೋಗಿದ್ದಾರೆ. ಬರಿಗೈಲಿ ಹೋದರೆ ಏನೂ ಇಲ್ಲ. ಮಂತ್ರಿ ಆಗಬೇಕೆನ್ನುವವರು ಜಾಸ್ತಿ ಹಣದ ಚೀಲ ಒಯ್ದಿದ್ದಾರೆ. ಇನ್ನು ಮಂತ್ರಿ ಆಗಿರುವವರು ನಾನು ಹೆಚ್ಚು, ನಾನು ಹೆಚ್ಚು ಅಂತಾ ಸ್ಪರ್ಧೆ ಮಾಡಿ, ಹಣವನ್ನು ಖರ್ಚು ಮಾಡಲು ಅಲಾಟ್ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು. ಸಿಎಂ, ಡಿಸಿಎಂಗೆ ಕೇಳಲು ಇಚ್ಛಿಸುತ್ತೇನೆ; ನಿಮಗೆ ಉಪ ಚುನಾವಣೆ ಮುಖ್ಯವೋ, ರೈತರ ಹಿತ ಮುಖ್ಯವೋ ಎಂಬುದಕ್ಕೆ ಮೊದಲು ಉತ್ತರಿಸಬೇಕು.

- - - -22ಕೆಡಿವಿಜಿ5, 6:

ದಾವಣಗೆರೆ ತಾಲೂಕಿನ ಮುದಹದಡಿ ಗ್ರಾಮದಲ್ಲಿ ಬತ್ತದ ಬೆಳೆ ಹಾನಿಗೀಡಾದ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಂ.ಸತೀಶ ಭೇಟಿ ನೀಡಿ ಪರಿಶೀಲಿಸಿದರು. -22ಕೆಡಿವಿಜಿ7, 8:

ದಾವಣಗೆರೆ ತಾಲೂಕಿನ ಮುದಹದಡಿಯಲ್ಲಿ ಅತಿವೃಷ್ಟಿಗೆ ಹಾನಿಗೀಡಾದ ಮನೆಗಳನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಬಿ.ಎಂ.ಸತೀಶ ಪರಿಶೀಲಿಸಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.