ಸಾರಾಂಶ
- ಐಡಿಎಸ್‌ಜಿ ಕಾಲೇಜಿನಲ್ಲಿ ರಾಜ್ಯಮಟ್ಟದ ಕಾರ್‍ಯಾಗಾರ । ಸಂಶೋಧನೆಗಳ ಗುಣವರ್ಧನೆಗೆ ಕಿವಿಮಾತು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಪಾಲನೆಗೆ ನಿರಂತರ ಪರಿಶ್ರಮ ಅಗತ್ಯ ಎಂದು ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಚಾಂದಿನಿ ಅವರು ಹೇಳಿದರು.ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ಜಂಟಿ ನಿರ್ದೇಶಕರ ಕಛೇರಿ ಸಹಭಾಗಿತ್ವದಲ್ಲಿ ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಆಂತರಿಕ ಭರವಸೆಯ ಕೋಶವು ಆಯೋಜಿಸಿದ್ದ ರಾಜ್ಯಮಟ್ಟದ ಒಂದು ದಿನದ ಕಾರ್‍ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ ಎನ್‌ಐಆರ್‌ಎಫ್ ರಚನೆಗೊಂಡು ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತಂತೆ ವಿಚಾರ ಸಂಕಿರಣ ಚರ್ಚೆ ನಡೆಯಲಿದೆ. ಸಮುದಾಯದಲ್ಲಿ ಸಾಮಾಜಿಕ, ಆರ್ಥಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪೂರಕ ವಾಗಿ ಬೌದ್ಧಿಕ ಸಂಪತ್ತಿನ ಹಕ್ಕು ಅನಾವರಣಗೊಂಡಿದೆ. ನೂತನ ಆವಿಷ್ಕಾರ ಹಾಗೂ ಸಂಶೋಧನೆಗಳಲ್ಲಿ ಉತ್ತಮ ಮೌಲ್ಯ ಹಾಗೂ ಗುಣವರ್ಧನೆ ಇಂದಿನ ಅಗತ್ಯ ಎಂದರು. ನ್ಯಾಷನಲ್ ಇನ್ಸಿಟಿಟ್ಯೂಷನಲ್ ರ್‍ಯಾಂಕಿಂಗ್ ಕೌನ್ಸಿಲ್ ವಿಶೇಷ ಅಧಿಕಾರಿ ಡಾ.ವಿದ್ಯಾ ಮರಿಯಾ ಜೋಸೆಫ್ ಕಾರ್‍ಯಾಗಾರ ಉದ್ಘಾಟಿಸಿ ಮಾತನಾಡಿ, ಮೂಲಭೂತ ಸೌಕರ್‍ಯಗಳನ್ನು ಕಲ್ಪಿಸುವುದರೊಂದಿಗೆ ಉತ್ತಮ ಶಿಕ್ಷಣ ಶ್ರೀಸಾಮಾನ್ಯರಿಗೆ ಸಿಗಬೇಕು. ಉನ್ನತ ಶಿಕ್ಷಣದ ಅಗತ್ಯತೆಗಳನ್ನು ಪೂರೈಸುವಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ ಹಾಗೂ ನಿರ್ದೇಶನ ನೀಡಲು ನ್ಯಾಕ್ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಪ್ರತಿಯೊಂದು ವಿಶ್ವವಿದ್ಯಾನಿಲಯ ಪದವಿ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ನ್ಯಾಕ್ ತಂಡ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿಯ ಸೌಲಭ್ಯ, ಬೋಧನೆ ಮತ್ತು ಕಲಿಕೆ ಕುರಿತಂತೆ ವಿವಿಧ ಹಂತದಲ್ಲಿ ಮಾಪನ ಮಾಡಿ ಗ್ರೇಡ್ ನೀಡುತ್ತದೆ. ಉನ್ನತೀಕರಣ ಹಾಗೂ ಶೈಕ್ಷಣಿಕ ಮಟ್ಟ ಸುಧಾರಣೆಗೆ ಶಿಫಾರಸ್ಸುಗಳನ್ನು ಮಾಡಲಿದೆ ಎಂದರು. ಇತಿಯೋಪಿಯಾ ವಿ.ವಿ ಅಸೋಸಿಯೇಟ್ ಪ್ರೊಫೆಸರ್ ಡಾ.ಎನ್.ವೆಟ್ರಿವೆಲ್ ಮತ್ತು ಬೆಂಗಳೂರಿನ ಎನ್‌ಎಚ್‌ಸಿಎಇ ಪ್ರೊಫೆಸರ್ ಡಾ.ಅಗಲ್ಯಾ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.ಮುಕ್ತಾಯ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅರ್ಥಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ.ಲಕ್ಷ್ಮೀಕಾಂತ್ ಉನ್ನತ ಶಿಕ್ಷಣದಲ್ಲಿ ಹೊಸ ಸಂಶೋಧನೆ ಗಳು ಮತ್ತು ಆವಿಸ್ಕಾರಗಳು ನಡೆದು ಜನಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಪ್ರೇರೇಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್‍ಯಾಗಾರ ಸವಿಸ್ತಾರ ವಾಗಿ ಚರ್ಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಲಿದೆ. ನ್ಯಾಕ್ ಮಾನ್ಯತೆ ಹಾಗೂ ಶಿಫಾರಸ್ಸುಗಳ ಪಾಲನೆಗೆ ಪೂರಕವಾದ ಚರ್ಚೆ ಅರ್ಥಪೂರ್ಣವಾಗಿ ನಡೆದಿದೆ ಎಂದರು. ಕಾರ್‍ಯಾಗಾರದ ಸಂಚಾಲಕ ಡಾ.ಎಸ್.ಇ.ನಟರಾಜ್ ಪ್ರಾಸ್ತಾವಿಸಿದ್ದು, ಐಕ್ಯೂಎಸಿ ಸಂಯೋಜಕಿ ಡಾ.ಕಲಾವತಿ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ಜಗದೀಶ್ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಪುಷ್ಪಾ ಕಾರ್‍ಯಕ್ರಮ ನಿರೂಪಿಸಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಎನ್‌ಐಆರ್‌ಎಫ್ ಮತ್ತು ಐ.ಆರ್.ಪಿ. ಸಂಯೋಜಕರು ಕಾರ್‍ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯ 3 ಕಾಲೇಜಿಗೆ ಎ ಗ್ರೇಡ್1992 ರಲ್ಲಿ ನ್ಯಾಕ್ ಅಸ್ಥಿತ್ವಕ್ಕೆ ಬಂದಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದೆ. 853 ವಿಶ್ವವಿದ್ಯಾನಿಲಯಗಳು ಜೊತೆಗೆ 15,890 ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದಿವೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನೊಳಗೊಂಡ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿ ವ್ಯಾಪ್ತಿಯಲ್ಲಿ ಬರುವ 55 ಸರ್ಕಾರಿ ಕಾಲೇಜುಗಳು ಮತ್ತು 49 ಖಾಸಗಿ ಅನುದಾನಿತ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದಿವೆ. ಅದರಲ್ಲಿ ಐದು ಸರ್ಕಾರಿ ಕಾಲೇಜುಗಳು ಮಾತ್ರ ಎ-ಗ್ರೇಡ್ ಹೊಂದಿದ್ದರೆ ಅದರೊಳಗೆ 3 ಕಾಲೇಜುಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಎಂಬುದು ಇಲ್ಲಿಯ ಶೈಕ್ಷಣಿಕ ಪ್ರಗತಿಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.