ರಾಜ್ಯ ಸರ್ಕಾರ ಎನ್‌ಇಪಿ ಜಾರಿಗೊಳಿಸಲಿ: ಕಾಗೇರಿ

| Published : Sep 15 2024, 01:53 AM IST

ಸಾರಾಂಶ

ಶಿಕ್ಷಣ ಸಂಸ್ಥೆಗಳು ಸೌಲಭ್ಯದ ಜತೆ ಫಲಿತಾಂಶದ ಗುಣಮಟ್ಟ ಮಾತ್ರವಲ್ಲದೇ, ಸಾಮಾಜಿಕ ಜವಾಬ್ದಾರಿಯ ಅರಿವು ಹೆಚ್ಚಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಶಿರಸಿ: ನೂತನ ಶಿಕ್ಷಣ ನೀತಿ ಜಾರಿಗೊಂಡಾಗ ನಮ್ಮ ರಾಜ್ಯದ ಯುವಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡಲು ಸಾಧ್ಯ. ಎಲ್ಲ ಗೊಂದಲದಿಂದ ಹೊರಬಂದು ರಾಜ್ಯ ಸರ್ಕಾರ ಎನ್‌ಇಪಿ ಜಾರಿಗೊಳಿಸಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಪ್ರತಿಷ್ಠಿತ ಮೊಡರ್ನ್ ಎಜ್ಯುಕೇಶನ್ ಸೊಸೈಟಿಯ ಎಂಇಎಸ್ ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಸೌಲಭ್ಯದ ಜತೆ ಫಲಿತಾಂಶದ ಗುಣಮಟ್ಟ ಮಾತ್ರವಲ್ಲದೇ, ಸಾಮಾಜಿಕ ಜವಾಬ್ದಾರಿಯ ಅರಿವು ಹೆಚ್ಚಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದ್ದೇವೆ. ಆದರೆ ಮೌಲ್ಯಗಳು ಹಾಗೂ ಆದರ್ಶಗಳ ಅಧಃಪತನ ಕಾಣುತ್ತಿದ್ದೇವೆ. ನಾಗರಿಕ ಜವಾಬ್ದಾರಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಅದನ್ನು ಹೆಚ್ಚಿಸಲು ಇಂದಿನ ಶಿಕ್ಷಣ ಪದ್ಧತಿ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಮೂಲಭೂತ ಸೌಕರ್ಯ ಸರಿಯಾಗಿ ಒದಗಿಸಿದಾಗ ಆರ್ಥಿಕವಾಗಿ ಸುಧಾರಣೆಯಾಗುತ್ತದೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಶಿಕ್ಷಣ ಬಹಳ ಮಹತ್ವ, ವ್ಯಕ್ತಿ, ಸಮಾಜ ಸುಧಾರಣೆಗೆ ಹಾಗೂ ದೇಶದ ಅಭಿವೃದ್ಧಿಗೆ ಶಿಕ್ಷಣ ಮಹತ್ವದ್ದಾಗಿದೆ. ರಾಜ್ಯದಲ್ಲಿ ಒಟ್ಟೂ ೬೪,೬೮೯ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಖಾಲಿ ಇರುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ? ನಿವೃತ್ತಿ ಹಾಗೂ ರಾಜೀನಾಮೆ ನೀಡಿದ್ದರಿಂದ ಖಾಲಿಯಾದ ಹುದ್ದೆ ಭರ್ತಿ ಮಾಡಲು ಸರ್ಕಾರ ಕ್ರಮ ವಹಿಸಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯವನ್ನು ನೀಡಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲು ಸರ್ಕಾರ ಚಿಂತನೆ ಮಾಡಬೇಕು ಎಂದರು.

ಶಾಸಕ ಹಾಗೂ ಸಂಸ್ಥೆಯ ಉಪಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಮೂಲಸೌಕರ್ಯದ ಜತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು. ಶಿರಸಿಯಲ್ಲಿ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾನೂನು ಸಡಿಲಗೊಳಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ದಾನಿಗಳ ಸಹಕಾರದಿಂದ ಚೈತನ್ಯ ಪದವಿಪೂರ್ವ ಕಾಲೇಜಿನ ಕಟ್ಟಡ ಇಷ್ಟೊಂದು ಸುಂದರವಾಗಿ ನಿರ್ಮಾಣವಾಗಿದೆ. ಸಭಾಭವನಕ್ಕೆ ಡಾ.ಜಿ.ಎಂ. ಹೆಗಡೆ ₹೨೦ ಲಕ್ಷ ನೀಡಿದ್ದಾರೆ. ಟಿಎಂಎಸ್ ಆಡಳಿತ ಮಂಡಳಿ ಬಳಿ ವಿನಂತಿಸಿದಾಗ ₹೫ ಲಕ್ಷ ಮಂಜೂರು ಮಾಡಿದ್ದಾರೆ. ಆರ್.ಎನ್. ಹೆಗಡೆ ಬಂಡಿ ಅವರು ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ ₹೧೦ ಲಕ್ಷ ನೀಡಿದ್ದಾರೆ. ಎಂಇಎಸ್ ಅಂಗ ಸಂಸ್ಥೆಯ ಕಟ್ಟಡಕ್ಕೆ ಸುಮಾರು ₹೧೮ ಕೋಟಿ ವಿನಿಯೋಗ ಮಾಡಲಾಗಿದೆ ಎಂದು ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಹೇಳಿದರು.

ಎಂಇಎಸ್ ಉಪಾಧ್ಯಕ್ಷ ನಿತೀನ ಕಾಸರಗೋಡು, ಎಂ.ಜಿ. ಹೆಗಡೆ ಗಡಿಕೈ ಉಪಸ್ಥಿತರಿದ್ದರು. ಚೈತನ್ಯ ಕಾಲೇಜು ಸಮಿತಿ ಅಧ್ಯಕ್ಷ ಎ.ಬಿ. ಲೋಕೇಶ ಹೆಗಡೆ ಚೈತನ್ಯ ಕಾಲೇಜು ನಡೆದು ಬಂದ ಹಾದಿಯ ಕುರಿತು ವರದಿ ಮಂಡಿಸಿದರು. ಎಂಇಎಸ್ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಸ್ವಾಗತಿಸಿದರು. ಉಪನ್ಯಾಸಕಿ ಮೇಘನಾ ಹೆಗಡೆ ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ದಾನಿಗಳಿಗೆ ಸನ್ಮಾನ: ಟಿಎಂಎಸ್ ಸಂಸ್ಥೆಯ ಪರವಾಗಿ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಮಾಜಿ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಆರ್.ಎನ್. ಹೆಗಡೆ ಬಂಡಿ ಮತ್ತು ಕಟ್ಟಡ ನಿರ್ಮಿಸಿದ ಎಂಜಿನಿಯರ್ಸ್‌ಗಳನ್ನು ಗೌರವಿಸಲಾಯಿತು.