ಸಾರಾಂಶ
ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಕಲ್ಪಿಸಲಾಗುತ್ತಿದ್ದು, ಡಿಜಿಟಲೀಕರಣದ ಪರಿಜ್ಞಾನ ಹೊಂದುವ ಅಗತ್ಯವಿದೆ.
ಹಗರಿಬೊಮ್ಮನಹಳ್ಳಿ: ಬೀದಿಬದಿ ವ್ಯಾಪಾರಿಗಳಿಗೆ ಸ್ವ-ನಿಧಿ ಯೋಜನೆಯಡಿ ಆಧುನಿಕ ಕೌಶಲ ಹೊಂದಲು ಅಗತ್ಯ ತರಬೇತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಡೇ ನಲ್ಮ್ ಯೋಜನೆಯ ಪಿ.ಎಂ. ಸ್ವ-ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನಡೆದ ಸಮೃದ್ಧಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.ಬೀದಿಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಕಲ್ಪಿಸಲಾಗುತ್ತಿದ್ದು, ಡಿಜಿಟಲೀಕರಣದ ಪರಿಜ್ಞಾನ ಹೊಂದುವ ಅಗತ್ಯವಿದೆ. ವ್ಯಾಪಾರಿಗಳು ಆರ್ಥಿಕ ಸಧೃಡತೆ ಜೊತೆಗೆ ಅಚ್ಚುಕಟ್ಟಾದ ಜೀವನ ಸಾಗಿಸಬೇಕು. ಬೀದಿ ವ್ಯಾಪಾರಿಗಳು ಕೌಶಲ್ಯ ಹೊಂದುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಜತೆಗೆ ತಮ್ಮ ವೃತ್ತಿಯ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಟಿ.ಲಕ್ಷ್ಮೀ ಮಾತನಾಡಿ, ಪ್ರಮುಖವಾಗಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಆರೋಗ್ಯದ ಸುರಕ್ಷತೆ ಹೊಂದಬೇಕು. ಪಿ.ಎಂ.ಸ್ವ-ನಿಧಿ ಯೋಜನೆಯಡಿ ನೀಡಲಾಗುವ ಸಾಲದ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಗಬೇಕು ಎಂದರು.ಸಮುದಾಯ ಸಂಘಟನಾಧಿಕಾರಿ ಎಂ.ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಕಂದಾಯ ಅಧಿಕಾರಿ ಎಂ.ಮಾರೆಣ್ಣ, ಕಚೇರಿ ವ್ಯವಸ್ಥಾಪಕ ಟಿ.ಚಂದ್ರಶೇಖರ, ಬೀದಿ ಬದಿ ವ್ಯಾಪಾರಿಗಳ ಸಂಘದ ರೋಷನ್, ಮಂಜುನಾಥ ಉಪ್ಪಾರ್ ಇತರರಿದ್ದರು. ಸಿಆರ್‌ಪಿ ಕೆ.ಚೈತ್ರಾ, ಎ.ಶಂಕ್ರಮ್ಮ ನಿರ್ವಹಿಸಿದರು.