ಸಾರಾಂಶ
ಭಟ್ಕಳ: ವಿದ್ಯಾರ್ಥಿಗಳು ಮತ್ತು ಯುವಜನತೆ ಮೊಬೈಲ್‌ನಿಂದ ಆದಷ್ಟು ದೂರವಿದ್ದು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಿದೆ. ಸಾಹಿತ್ಯ ಕ್ಷೇತ್ರಕ್ಕೆ ಯುವಕರು ಹೆಚ್ಚು ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಶಿರಾಲಿಯ ಅಳ್ವೆಕೋಡಿಯ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ಕನ್ನಡ ಉಳಿಸಿ ಬೆಳೆಸಲು ನಾವೆಲ್ಲರೂ ಕಟಿಬದ್ಧರಾಗಬೇಕು. ಕನ್ನಡಕ್ಕೆ ತನ್ನದೇ ಆದ ಇತಿಹಾಸ, ಮಹತ್ವ ಇದೆ. ರಾಜಕಾರಣಿಗಳಿಗಿಂತ ಸಾಹಿತಿಗಳಲ್ಲಿ ಶಬ್ದ ಭಂಡಾರ ಹೆಚ್ಚಿರುತ್ತದೆ. ಎಲ್ಲೆಡೆ ಸಾಹಿತ್ಯಿಕ ಚಟುವಟಿಕೆಗಳು ಹೆಚ್ಚಾಗಬೇಕು. ವರ್ಷಂಪ್ರತಿ ಸಾಹಿತ್ಯ ಸಮ್ಮೇಳನ ನಡೆಸಬೇಕು. ಜಿಲ್ಲೆಯಲ್ಲಿ ಕನ್ನಡ ಭವನ ಇಲ್ಲದೇ ಇರುವುದು ಬೇಸರ ತಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ಭಟ್ಕಳದಲ್ಲಿ ಕನ್ನಡ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತಿ ಪರಿಷತ್ತಿನ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಭಟ್ಕಳದ ವ್ಯಾಕರಣ ಶಾಸ್ತ್ರಜ್ಞ ಭಟ್ಟಾಕಳಂಕನ ಕೊಡುಗೆ ಸಾಕಷ್ಟಿದೆ. ಕನ್ನಡವನ್ನು ಪರಿಶುದ್ಧವಾಗಿ ಮಾತನಾಡಬೇಕು. ಕನ್ನಡವನ್ನು ಎಂದಿಗೂ ನಶಿಸಲು ಬಿಡಬಾರದು. ದೃಶ್ಯ ಮಾಧ್ಯಮಗಳಲ್ಲಿ ಕನ್ನಡದೊಂದಿಗೆ ಆಂಗ್ಲ ಭಾಷೆ ಮಿಶ್ರಣ ಮಾಡಲಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಬಗ್ಗೆ ಅಸಡ್ಡೆ ತೋರುತ್ತಿರುವುದು ಸರಿಯಲ್ಲ ಎಂದರು.ಸಮ್ಮೇಳನಾಧ್ಯಕ್ಷ ನಾರಾಯಣ ಯಾಜಿ, ನಿವೃತ್ತ ನ್ಯಾಯಾಧೀಶ ರವಿ ಎಂ. ನಾಯ್ಕ, ಸಾಹಿತಿಗಳಾದ ಮಾನಾಸತು ಶಂಭು ಹೆಗಡೆ, ಡಾ. ಆರ್.ವಿ. ಸರಾಫ್, ಅಳ್ವೆಕೋಡಿ ದೇವಸ್ಥಾನದ ಟ್ರಸ್ಟಿ ನಾರಾಯಣ ದೈಮನೆ ಮಾತನಾಡಿದರು. ತಾಪಂ ಕಾರ್ಯನಿರ್ಹಹಣಾಧಿಕಾರಿ ವೆಂಕಟೇಶ ನಾಯಕ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಅಳ್ವೆಕೋಡಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಟ್ರಸ್ಟಿಗಳಾದ ಅರವಿಂದ ಪೈ, ಹನುಮಂತ ನಾಯ್ಕ, ಮಾರಿ ಜಾತ್ರಾ ಸಮಿತಿ ಅಧ್ಯಕ್ಷ ರಾಮಾ ಎಂ. ಮೊಗೇರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಕಸಾಪ ಖಚಾಂಚಿ ಶ್ರೀಧರ ಶೇಟ್ ಮುಂತಾದವರಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಪಾಂಡುರಂಗ ಅಳ್ವೆಗದ್ದೆ ಪುಸ್ತಕ ಪರಿಚಯ ಮಾಡಿದರು. ಪೂರ್ಣಿಮಾ ಕರ್ಕಿಕರ್ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಸಂತೋಷ ಆಚಾರ್ಯ ದ್ವಾರಗಳ ಪರಿಚಯ ಮಾಡಿದರು. ಕಸಾಪ ಕಾರ್ಯದರ್ಶಿ ನಾರಾಯಣ ನಾಯ್ಕ, ಶಿಕ್ಷಕಿ ಮಂಜುಳಾ ಶಿರೂರು ನಿರೂಪಿಸಿದರು. ಎಂ.ಪಿ. ಭಂಡಾರಿ ವಂದಿಸಿದರು. ಶಿಕ್ಷಕಿ ಸವಿತಾ ನಾಯ್ಕ ಅವರ ಭಾವತೋರಣ ಕವನ ಸಂಕಲನ ಮತ್ತು ನಿವೃತ್ತ ನ್ಯಾಯಾಧೀಶ ರವಿ ನಾಯ್ಕ ಅವರ ಭಟ್ಕಳ ಸುಮಗಳು ಹನಿಗವಿತೆಗಳ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದ ಪೂರ್ವದಲ್ಲಿ ಧ್ವಜಾರೋಹಣ ನಡೆಸಿ ಸಮ್ಮೇಳನಾಧ್ಯಕ್ಷ ನಾರಾಯಣ ಯಾಜಿ ಅವರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ಮಧ್ಯಾಹ್ನದ ನಂತರ ವಿಚಾರಗೋಷ್ಠಿ, ಕವಿ ಕಾವ್ಯ ಸಮಯ, ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ, ಸಮಾರೋಪ ಮತ್ತು ಸನ್ಮಾನ ನಡೆಯಿತು.ಸತ್ಯವನ್ನು ಪ್ರಿಯ, ಜಾಣ್ಮೆಯಿಂದ ಹೇಳುವವನೇ ಉತ್ತಮ ಸಾಹಿತಿಭಟ್ಕಳ: ಸಾಹಿತಿ ಸತ್ಯವನ್ನೇ ಹೇಳಬೇಕು. ಆ ಸತ್ಯವನ್ನು ಪ್ರಿಯವಾಗುವಂತೆ ಹೇಳಬೇಕು, ಬರೆಯಬೇಕು. ಇಂತಹ ಪ್ರಿಯವನ್ನು ಜಾಣತನದಿಂದ ಹೇಳುವವನೇ ಉತ್ತಮ ಸಾಹಿತಿ ಆಗಬಲ್ಲ ಎಂದು ತಾಲೂಕು 11ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾರಾಯಣ ಯಾಜಿ ಶಿರಾಲಿ ತಿಳಿಸಿದರು.ಅಳ್ವೆಕೋಡಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಸಾಹಿತ್ಯ ಎಲ್ಲರ ಹಿತ ಬಯಸುವ ಪ್ರಬಲ ಮಾಧ್ಯಮವಾಗಿದೆ. ಭಾಷೆ ಒಂದು ಜನಾಂಗವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧನೆ ಆಗುತ್ತದೆ. ಇಂತಹ ಸಂಸ್ಕಾರವನ್ನು ಒದಗಿಸುವ ತಾಕತ್ತು, ಶಕ್ತಿ ನಮ್ಮ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಐವತ್ತೊಂದು ಅಕ್ಷರಗಳಿರುವ ಕನ್ನಡ ಭಾಷೆಗೆ ಇದೆ. ಕನ್ನಡ ಸಾಹಿತ್ಯದ ಪುಸ್ತಕಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರಕಟಗೊಂಡು ನಮ್ಮ ಕನ್ನಡ ಭಾಷೆಯನ್ನು ಸಮೃದ್ಧಗೊಳಿಸುತ್ತಿವೆ ಎಂದರು.ಆಂಗ್ಲ ಭಾಷಾ ವ್ಯಾಮೋಹದಿಂದ ಪೋಷಕರು ಕನ್ನಡ ಭಾಷೆಗೆ ಒಲವನ್ನು ತೋರುತ್ತಿಲ್ಲ. ಶಾಲೆಗಳನ್ನು ಆಧುನಿಕರಣಗೊಳಿಸಲು ಗಮನ ಹರಿಸಬೇಕು. ವಸತಿ ಪ್ರದೇಶ, ಶಾಲೆ, ದೇವಸ್ಥಾನ, ಶ್ರದ್ಧಾ ಕೇಂದ್ರಗಳ ಸನಿಹದಲ್ಲಿ ಅಪಾಯಕಾರಿ ಮೊಬೈಲ್ ಟವರ್‌ಗಳನ್ನು ಹಾಕಲಾಗಿದೆ. ಸಾರ್ವಜನಿಕರು ಜಾಗೃತಗೊಂಡು ಇವುಗಳನ್ನೆಲ್ಲಾ ವಿರೋಧಿಸುವಂತಾಗಬೇಕು. ತಾಲೂಕಿನ ಜನರು ಜಾಗೃತರಾಗಿ ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ಮದ್ಯ, ಗುಟ್ಕಾ, ತಂಬಾಕು ಉತ್ಪನ್ನಗಳನ್ನು ತಡೆಯುವಂತಾಗಬೇಕು ಎಂದರು.