ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಆಶಯ ಅರಿಯಲಿ: ರಾಜು ಕುನ್ನೂರ

| Published : Sep 11 2025, 12:03 AM IST / Updated: Sep 11 2025, 12:04 AM IST

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಆಶಯ ಅರಿಯಲಿ: ರಾಜು ಕುನ್ನೂರ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಂವಿಧಾನ ಉಳಿಸುವ ಹಾಗೂ ದೇಶದ ಉಜ್ವಲ ಭವಿಷ್ಯ ಕಟ್ಟುವ ಜವಾಬ್ದಾರಿಯುತ ಹೊಣೆಗಾರಿಕೆ ಯುವಕರ ಕೈಯಲ್ಲಿದೆ. ಯುವಕರು ಅಂಥ ಜವಾಬ್ದಾರಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಕಲಿತುಕೊಳ್ಳಬೇಕು.

ಶಿಗ್ಗಾಂವಿ: ಪ್ರಜಾಪ್ರಭುತ್ವದ ಆಶಯಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳಬೇಕು ಎಂದು ಚನ್ನಬಸವೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಾಜು ಕುನ್ನೂರ ತಿಳಿಸಿದರು.ಪಟ್ಟಣದ ಚನ್ನಪ್ಪ ಕುನ್ನೂರ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಜಿಲ್ಲಾಮಟ್ಟದ ಯುವ ಸಂಸತ್ ಅಣಕು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಸಂವಿಧಾನ ಉಳಿಸುವ ಹಾಗೂ ದೇಶದ ಉಜ್ವಲ ಭವಿಷ್ಯ ಕಟ್ಟುವ ಜವಾಬ್ದಾರಿಯುತ ಹೊಣೆಗಾರಿಕೆ ಯುವಕರ ಕೈಯಲ್ಲಿದೆ. ಯುವಕರು ಅಂಥ ಜವಾಬ್ದಾರಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಕಲಿತುಕೊಳ್ಳಬೇಕೆಂದರು.ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಮಾತನಾಡಿ, ಯುವ ಸಂಸತ್ ಅಣಕು ಪ್ರದರ್ಶನವಾದರೂ ಅದರ ನೈಜತೆ ಹಾಗೂ ವಾಸ್ತವಿಕತೆಯನ್ನು ತಿಳಿದುಕೊಳ್ಳುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.ನಿರ್ಣಾಯಕರ ಪರವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಿ.ಎ. ಗೊಬ್ಬರಗುಂಪಿ ಅವರು, ವಿಜೇತರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಎಲ್ಲ ವಿದ್ಯಾರ್ಥಿಗಳು ಸಂಸತ್ತಿನ ನೈಜ ಅನುಭವವನ್ನು ಮೂಡಿಸಿದರು ಎಂದರು.ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಸಂಸತ್ ಕೇವಲ ಕಟ್ಟಡವಲ್ಲ, ಅದು ಚಿಂತನೆಗಳ ಮಂಟಪ. ವಾದ-ಪ್ರತಿವಾದಗಳ ತಾಣ ಮತ್ತು ಜನರ ಅಭಿಪ್ರಾಯಗಳಿಗೆ ಧ್ವನಿ ನೀಡುವ ವೇದಿಕೆ. ಇಂತಹ ಪವಿತ್ರ ಪರಂಪರೆಯನ್ನು ಅಣಕು ಪ್ರದರ್ಶನ ರೂಪದಲ್ಲಿ ಇಲ್ಲಿ ಮನೋಜ್ಞವಾಗಿ ಹಾಗೂ ಅರ್ಥಪೂರ್ಣವಾಗಿ ಅನುಭವಿಸಿದ್ದೇವೆ ಎಂದರು.ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜುಗಳಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹೊಸರಿತ್ತಿ ಜಿವಿ ಹಳ್ಳಿಕೇರಿ ಕಾಲೇಜಿನ ದೀಪಾ ಮರಿಗೌಡರ ಪ್ರಥಮ ಸ್ಥಾನ, ರಾಣಿಬೆನ್ನೂರಿನ ಕೆ.ವಿ. ಹೈಟೆಕ್ ಕಾಲೇಜಿನ ಚಂದನಾ ರಾಜೋಳಿ ದ್ವಿತೀಯ ಸ್ಥಾನ ಹಾಗೂ ಚನ್ನಪ್ಪ ಕುನ್ನೂರ ಕಾಲೇಜಿನ ಬನಶ್ರೀ ಹುತ್ತನಗೌಡ್ರ ತೃತೀಯ ಸ್ಥಾನ ಪಡೆದರು. ಡಾ. ಡಿ.ಎ. ಗೊಬ್ಬರಗುಂಪಿ, ಆನಂದ ಹಂಡೆ ಹಾಗೂ ಮಂಜುಳಾ ಸಾತೇನಹಳ್ಳಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಉಪನಿರ್ದೇಶಕ ಆನಂದ ಮುದಕಮ್ಮನವರ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ನಿಶ್ಶೀಮಗೌಡರ, ಎಂ.ಎಸ್. ಸಿದ್ದಪ್ಪನವರ, ಚಂದುನಾಯ್ಕ್, ಸುವರ್ಣಾ ಶಿವಪ್ಪನವರ, ವೀರಣ್ಣ ಬಡ್ಡಿ ಮುಂತಾದವರು ಇದ್ದರು. ಪ್ರಾಚಾರ್ಯ ನಾಗರಾಜ ಜಿ. ದ್ಯಾಮನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಬಸಣ್ಣ ಸ್ವಾಗತಿಸಿದರು. ಕೆ.ಎಸ್. ಬರದೆಲಿ ವಂದಿಸಿದರು. ಎಂ.ಎಸ್. ಕುರಂದವಾಡ ನಿರೂಪಿಸಿದರು.