ಹಳೇಕೋಟೆ ಹನುಮಂತ ದೇವಸ್ಥಾನದಿಂದ ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿಯ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಅಭಿವೃದ್ಧಿ ಸಂಘ ಮಾವಳ್ಳಿ ಹೋಬಳಿ ಇವರ ವತಿಯಿಂದ ೨೦೨೬-೨೭ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದರ ಅವರು, ನಮ್ಮ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದ್ದೇವೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಗೌರವ ತರಬೇಕು. ವಿದ್ಯಾರ್ಥಿಗಳು ಸಾಧನೆ ಮಾಡಿ ದೊಡ್ಡ ಹುದ್ದೆಗೆ ಏರಿದಾಗ ಸಮಾಜದ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಂದ್ರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಕಲಿತು ಇತರರಿಗೆ ಮಾದರಿಯಾಗಬೆಕು ಎಂದರು.


ವೇದಿಕೆಯಲ್ಲಿದ್ದ ದೇವಸ್ಥಾನದ ಉಪಾಧ್ಯಕ್ಷ ರಾಜು ನಾಯ್ಕ, ದೇವಸ್ಥಾನದ ಮಾಜಿ ಅಧ್ಯಕ್ಷ ಆರ್.ಕೆ. ನಾಯ್ಕ, ಆಡಳಿತ ಸದಸ್ಯರಾದ ಕೃಷ್ಣ ನಾಯ್ಕ ಜಮೀನ್ದಾರ, ಪ್ರಮುಖರಾದ ಎಸ್.ಎಂ. ನಾಯ್ಕ, ಜಿ.ಎನ್. ನಾಯ್ಕ, ಮಾತನಾಡಿದರು. ವೇದಿಕೆಯಲ್ಲಿ ದೇವಸ್ಥಾನದ ಆಢಳಿತ ಮಂಡಳಿಯ ಮಾಜಿ ಅಧ್ಯಕ್ಷ ಸುಬ್ರಾಯ ನಾಯ್ಕ, ಕಾರ್ಯದರ್ಶಿ ರವೀಂದ್ರ ನಾಯ್ಕ, ವಾಸುದೇವ ನಾಯ್ಕ, ರಾಜು ಟಿ.ನಾಯ್ಕ, ನಾರಾಯಣ ನಾಯ್ಕ, ತಿಮ್ಮಪ್ಪ ನಾಯ್ಕ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೬ನೇ ರ‍್ಯಾಂಕ್‌ ಪಡೆದ ವರ್ಷಿತಾ ಶಿವಕುಮಾರ ನಾಯ್ಕ, ಮೂಡ್ಕೇರಿ, ಹಾಗೂ ರಾಜ್ಯಕ್ಕೆ ೮ನೇ ರ‍್ಯಾಂಕ್‌ ಪಡೆದ ಯೋಗೇಂದ್ರ ವೆಂಕಟೇಶ ನಾಯ್ಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ೧೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ೨೪೫ ಕ್ಕೂ ಅಧಿಕ ಪಿಯು ಪ್ರಥಮ ಹಾಗೂ ದ್ವಿತೀಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಶಾರದಾ ನಾಯ್ಕ ಪ್ರಾರ್ಥನೆ ಹಾಡಿದರು. ರಾಜು ನಾಯ್ಕ ಸ್ವಾಗತಿಸಿದರು. ಪರಮೇಶ್ವರ ನಾಯ್ಕ ನಿರೂಪಿಸಿ ವಂದಿಸಿದರು.