ವಿದ್ಯಾರ್ಥಿಗಳು ಬಾಲ್ಯದಲ್ಲೇ ವಿದ್ಯೆ ಜತೆ ಸದ್ಗುಣ ಕಲಿಯಲಿ: ಬಸವಕುಮಾರ ಪಾಟೀಲ್

| Published : Dec 09 2024, 12:45 AM IST

ವಿದ್ಯಾರ್ಥಿಗಳು ಬಾಲ್ಯದಲ್ಲೇ ವಿದ್ಯೆ ಜತೆ ಸದ್ಗುಣ ಕಲಿಯಲಿ: ಬಸವಕುಮಾರ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಘಟ್ಟಗಳು ಎಂದು ಕರೆಯಲ್ಪಡುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಂತಗಳಿಗೆ ಬಹಳ ಮಹತ್ವವಿದೆ.

ಕಾರವಾರ: ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ, ಕರ್ನಾಟಕ ಸುವರ್ಣ ಸಂಭ್ರಮ- ೫೦ ನಿಮಿತ್ತ ರಾಜ್ಯ ಮತ್ತು ಗಡಿಭಾಗಗಳಲ್ಲಿ ಹಮ್ಮಿಕೊಂಡಿರುವ ಬಸವಕುಮಾರ ಪಾಟೀಲ್ ನೇತೃತ್ವದ ಅಕ್ಷರ ಜ್ಯೋತಿ ಯಾತ್ರೆ- ೨೦೨೪ ಕಾರ್ಯಕ್ರಮವನ್ನು ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಕ್ಷರ ಜ್ಯೋತಿ ಯಾತ್ರೆಯ ರೂವಾರಿ ಬಸವಕುಮಾರ ಪಾಟೀಲ್, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಘಟ್ಟಗಳು ಎಂದು ಕರೆಯಲ್ಪಡುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಂತಗಳಿಗೆ ಬಹಳ ಮಹತ್ವವಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೆ ಮುಂದಿನ ಉನ್ನತ ಶಿಕ್ಷಣ ಅತ್ಯುತ್ತಮ ರೀತಿಯಲ್ಲಿ ಮುಂದುವರಿಯುತ್ತದೆ. ಇದರಿಂದ ದೇಶದ ಸಮೃದ್ಧ ಮಾನವ ಸಂಪನ್ಮೂಲ ಸೃಷ್ಟಿಯಾಗುವ ಸಮಯವಾಗಿದೆ. ಅದನ್ನು ಬಿಟ್ಟು ಸ್ವಲ್ಪ ಹೆಚ್ಚು ಕಡಿಮೆ ಆದರೂ ವಿದ್ಯಾರ್ಥಿಗಳು ಉದ್ದೇಶಿತ ಗುರಿಯಿಂದಲೇ ದೂರವಾಗಬಹುದು.

ಆದ್ದರಿಂದ ಈ ಅವಧಿಯಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರೇರಣೆ, ಸೂಕ್ತವಾದ ಮಾರ್ಗದರ್ಶನ ಮತ್ತು ಸಮಾಲೋಚನೆ ಮೂಲಕ ಸರಿಯಾದ ದಾರಿ ತೋರುವುದು ಅವಶ್ಯವಿದೆ ಎಂದು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದೊಂದು ವಿಶಿಷ್ಟ ಪರಿಣಾಮಕಾರಿ ಕಾರ್ಯಕ್ರಮ. ಭವಿಷ್ಯದ ಕುಡಿಗಳಾಗಿರುವ ಮತ್ತು ದೇಶದ ಶಕ್ತಿಯಾಗಿರುವ ವಿದ್ಯಾರ್ಥಿಗಳು ವಿದ್ಯಾವಂತರಾಗುವುದರ ಜತೆಗೆ ಸದ್ಗುಣಿಗಳು, ಸಚ್ಚಾರಿತ್ರ‍್ಯವಂತರು, ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕೆಂಬ ಆಶಯ ನಮ್ಮ ಯಾತ್ರೆಯದ್ದಾಗಿದೆ ಎಂದರು.

ಕೈಗಾ ಎನ್‌ಪಿಸಿಎಲ್ ಉದ್ಯೋಗಿ ಬಸವಕುಮಾರ ಮಾತನಾಡಿ, ಇಂದು ವ್ಯಕ್ತಿತ್ವ ವಿಕಸನ ಅಗತ್ಯವಾಗಿದೆ. ಅದರಲ್ಲೂ ಸಂಸ್ಕಾರಭರಿತ ಶಿಕ್ಷಣ ಅತ್ಯಗತ್ಯವಾಗಿದ್ದು, ಅದನ್ನು ಉಣಬಡಿಸಲು ಬೀದರನಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಅಕ್ಷರ ಜ್ಯೋತಿ ಬೆಳಗಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಆರ್.ಜಿ. ಪ್ರಭು ಗುರೂಜಿ ಮಾತನಾಡಿ, ಆಧ್ಯಾತ್ಮಿಕ ಲೋಕಕ್ಕೆ ಬಹಳ ಶಕ್ತಿ ಇದೆ. ಅದರಲ್ಲಿ ಶ್ರದ್ಧೆ ಮತ್ತು ಭಕ್ತಿ ಇರುತ್ತದೆ. ಅದನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದರು.

ಶಾಲಾ ಮುಖ್ಯಾಧ್ಯಾಪಕ ದಿನೇಶ್ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಡಿ. ಶಾಂತಪ್ಪ, ಶಿಕ್ಷಕರಾದ ಸಂತೋಷ ಕಾಂಬಳೆ, ರೂಪಾಲಿ ಸಾವಂತ, ನೀಲವ್ವ ಮಹದೇವಪ್ಪ ರೇವಡ್ಯಾಳ, ಎ.ಎನ್. ರಮೇಶ, ಶಿಕ್ಷಕ ಡಾ. ಗಣೇಶ ಬಿಷ್ಟಣ್ಣನವರ ಇದ್ದರು.ಇಂದು ಬಂಕಿಕೊಡ್ಲದಲ್ಲಿ ಯಕ್ಷಗಾನ ಪ್ರದರ್ಶನ

ಗೋಕರ್ಣ: ಇಲ್ಲಿನ ಬಂಕಿಕೊಡ್ಲದಲ್ಲಿ ಸಾಲಿಗ್ರಾಮ ಮೇಳದವರಿಂದ ಶುಭಲಕ್ಷಣ ಯಕ್ಷಗಾನ ಪ್ರದರ್ಶನ ಡಿ. ೯ರಂದು ರಾತ್ರಿ ನಡೆಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಆಯೋಜಕರು ಪ್ರಕಟಣೆಯ ಮೂಲಕ ಕೋರಿದ್ದಾರೆ.