ವಿದ್ಯಾರ್ಥಿಗಳು ಪುಸ್ತಕಗಳನ್ನು ಒಡನಾಡಿಗಳನ್ನಾಗಿ ಮಾಡಿಕೊಳ್ಳಲಿ: ಶಾಸಕ ದೇಶಪಾಂಡೆ

| Published : Nov 18 2024, 12:01 AM IST

ವಿದ್ಯಾರ್ಥಿಗಳು ಪುಸ್ತಕಗಳನ್ನು ಒಡನಾಡಿಗಳನ್ನಾಗಿ ಮಾಡಿಕೊಳ್ಳಲಿ: ಶಾಸಕ ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಹಳಿಯಾಳ: ತಂತ್ರಜ್ಞಾನದ ಯುಗದಲ್ಲಿ ಯುವ ಸಮೂಹ ಮೊಬೈಲ್ ಗೇಮ್‌ಗಳಲ್ಲಿ ಕಾಲಹರಣ ಮಾಡುವುದರ ಬದಲು ಉತ್ತಮ ಗ್ರಂಥ, ಪುಸ್ತಕಗಳನ್ನು ತಮ್ಮ ಜೀವಮಾನದ ಒಡನಾಡಿಗಳನ್ನಾಗಿಸಿಕೊಳ್ಳಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಶನಿವಾರ ಪಟ್ಟಣದಲ್ಲಿನ ಗ್ರಂಥಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಳಿಯಾಳದಲ್ಲಿರುವ ಗ್ರಂಥಾಲಯ 1955ರಲ್ಲಿ ಆರಂಭಗೊಂಡಿತ್ತು. ಪುಸ್ತಕಗಳು ಮತ್ತು ಓದುವಿಕೆ ಇವು ಜೀವನದ ಅನಿವಾರ್ಯ ಭಾಗಗಳು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗ್ರಂಥಾಲಯಕ್ಕೆ ಹೊಸ ಕಟ್ಟಡದ ಜತೆಗೆ ರಾಜ್ಯದಲ್ಲಿಯೇ ವಿರಳವಾದ ಮಕ್ಕಳ ಗ್ರಂಥಾಲಯ ಮಂಜೂರು ಮಾಡಿದೆ. ಹಿಂದೆ ಗ್ರಂಥಾಲಯದಲ್ಲಿ ಮೂಲ ಸೌಲಭ್ಯಗಳು ಇರಲಿಲ್ಲ. ಆದರೆ, ಓದುಗರ ಸಂಖ್ಯೆಯೂ ಹೆಚ್ಚಾಗಿತ್ತು. ಈಗ ಗ್ರಂಥಾಲಯದಲ್ಲಿ ಎಲ್ಲ ಸೌಲಭ್ಯಗಳಿವೆ. ಆದರೆ, ಓದುಗರ ಸಂಖ್ಯೆ ತೀರಾ ಕ್ಷೀಣಿಸಿದ್ದು ಸರಿಯಲ್ಲ ಎಂದರು.

ಪರಿಶೀಲನೆ: ಇದೇ ಸಂದರ್ಭದಲ್ಲಿ ಇಡೀ ಗ್ರಂಥಾಲಯವನ್ನು ಪರಿಶೀಲಿಸಿದ ದೇಶಪಾಂಡೆಯವರು, ಅಲ್ಲಲ್ಲಿ ಸಂಗ್ರಹಿಸಿಟ್ಟ ಪುಸ್ತಕಗಳ ರಾಶಿಯನ್ನು ಹಾಗೂ ಹಳೆಯದಾದ ಪುಸ್ತಕಗಳನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಸಮಾಜಾಯಿಸಿ ನೀಡಿದ ಪ್ರಭಾರ ಗ್ರಂಥಾಲಯ ಅಧಿಕಾರಿ ಶಿವಪ್ಪ ಗುಡುಗುಡಿ, ಗ್ರಾಮಾಂತರ ಭಾಗಗಳ ಗ್ರಂಥಾಲಯಗಳಿಗೆ ಇವುಗಳನ್ನು ಪೂರೈಸಬೇಕಾಗಿದ್ದು, ಪುಸ್ತಕಗಳನ್ನು ಇಡಲು ರ್‍ಯಾಕ್‌ಗಳ ಕೊರತೆಯಿದೆ ಎಂದರು.

ಗ್ರಂಥಾಲಯಕ್ಕೆ ತಮ್ಮ ವಿಆರ್‌ಡಿ ಟ್ರಸ್ಟ್‌ನಿಂದ 12 ರ್‍ಯಾಕ್‌ಗಳನ್ನು ನೀಡುವುದಾಗಿ ದೇಶಪಾಂಡೆ ಘೋಷಿಸಿದರು. ಹಳೆಯ ಗ್ರಂಥ ಪುಸ್ತಕಗಳನ್ನು ಪ್ರೌಢಶಾಲೆ ಅಥವಾ ಕಾಲೇಜುಗಳಿಗೆ ನೀಡಬೇಕೆಂದು ಸೂಚಿಸಿದರು.

ತಮ್ಮ ಸಂಸ್ಥೆಯ ಗ್ರಂಥಾಲಯ ಮೇಲ್ವಿಚಾರಕರನ್ನು ಕಳಿಸಿ ಓದುಗರಿಗೆ ಪುಸ್ತಕಗಳು ಸುಲಭವಾಗಿ ಕೈಗೆ ಸಿಗುವಂತಾಗಲು ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಕ್ರಮಬದ್ಧವಾಗಿ ಇಡುವ ವ್ಯವಸ್ಥೆಯನ್ನು ಮಾಡುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹನ್ನೆರಡು ವರ್ಷಗಳ ಹಳೆಯ ಪುಸ್ತಕಗಳಿದ್ದು, ಪರಿಷ್ಕೃತ ಈ ವರ್ಷದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಅದಕ್ಕೆ ತಕ್ಷಣ ಸ್ಪಂದಿಸಿದ ದೇಶಪಾಂಡೆಯವರು, ಜಿಲ್ಲಾ ಗ್ರಂಥಾಲಯದ ಅಧಿಕಾರಿಯನ್ನು ಸಂಪರ್ಕಿಸಿ ಹಳಿಯಾಳ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಿಸುವ ಹೊಸ ಪುಸ್ತಕಗಳನ್ನು ತಕ್ಷಣ ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಗ್ರಂಥಾಲಯದ ಮೇಲ್ವಿಚಾರಣೆಗಾಗಿ ಓದುಗರು ಮತ್ತು ಸಾರ್ವಜನಿಕರನ್ನೊಳಗೊಂಡ ಗೌರವ ಸಲಹಾ ಸಮಿತಿಯನ್ನು ಪ್ರತಿ ತಾಲೂಕುಗಳಿಗೆ ರಚಿಸುವಂತೆ ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಮಾಜಿ ಉಪಾಧ್ಯಕ್ಷ ಸತ್ಯಜಿತ ಗಿರಿ, ಗ್ರಂಥಾಲಯಕ್ಕೆ ಜಮೀನು ನೀಡಿದ ದಾನಿಗಳಾದ ಜೈರಾಮ ಗಿರಿ, ಕರವೇ ತಾಲೂಕಾಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಬಸವರಾಜ ಉಪ್ಪಿನ, ಜಿ.ಡಿ. ಗಂಗಾಧರ್, ವಿಆರ್‌ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಹಳಿಯಾಳ ಗ್ರಂಥಾಲಯದ ಮೇಲ್ವಿಚಾರಕ ವಿಷ್ಣು ಮಾಚಕ, ಶ್ವೇತಾ ಜೋಶಿ ಹಾಗೂ ಇತರರು ಇದ್ದರು.